Site icon Vistara News

Air India Food:‌ ಪ್ರಯಾಣಿಕರೇ ಎಚ್ಚರ; ವಿಮಾನದ ಊಟದಲ್ಲಿ ಸಿಕ್ತು ಮೆಟಲ್‌ ಬ್ಲೇಡ್!

Air India Food

Air India Passenger Finds Blade In Flight Food, Airline Responds

ಬೆಂಗಳೂರು: ಏರ್‌ ಇಂಡಿಯಾ ಸೇರಿ ಹಲವು ಸಂಸ್ಥೆಗಳ ವಿಮಾನಗಳಲ್ಲಿ ಪ್ರಯಾಣಿಕರು ಕುಡಿದು ಗಲಾಟೆ ಮಾಡುವುದು, ಸಹ ಪ್ರಯಾಣಿಕರಿಗೆ ತೊಂದರೆ ಕೊಡುವುದು, ವಿಮಾನದ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದು ಸೇರಿ ಹಲವು ಕೃತ್ಯಗಳು ಇತ್ತೀಚೆಗೆ ವರದಿಯಾಗುತ್ತಲೇ ಇವೆ. ಇದರ ಬೆನ್ನಲ್ಲೇ, ಏರ್‌ ಇಂಡಿಯಾ ವಿಮಾನದಲ್ಲಿ ಆರ್ಡರ್‌ ಮಾಡಿದ ಊಟದಲ್ಲಿ (Air India Food) ಮೆಟಲ್‌ ಬ್ಲೇಡ್‌ (Metal Blade) ಒಂದು ಸಿಕ್ಕಿದ್ದು, ಊಟ ಆರ್ಡರ್‌ ಮಾಡಿದ ವ್ಯಕ್ತಿಯು ಕಂಗಾಲಾಗಿದ್ದಾರೆ. ಹಾಗೆಯೇ, ತಮಗೆ ಆದ ಭೀಕರ ಅನುಭವವನ್ನು, ಮೆಟಲ್‌ ಬ್ಲೇಡ್‌ ಫೋಟೊವನ್ನು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮ್ಯಾಥ್ಯೂರಸ್‌ ಪೌಲ್‌ ಎಂಬ ಪತ್ರಕರ್ತ ಬೆಂಗಳೂರಿನಿಂದ ಸ್ಯಾನ್‌ ಪ್ರಾನ್ಸಿಸ್ಕೋಗೆ ಏರ್‌ ಇಂಡಿಯಾ ವಿಮಾನದಲ್ಲಿ ತೆರಳುವಾಗ ಅವರಿಗೆ ಇಂತಹ ಭೀಕರ ಅನುಭವವಾಗಿದೆ. “ಏರ್‌ ಇಂಡಿಯಾ ವಿಮಾನದಲ್ಲಿ ನಾನು ಆರ್ಡರ್‌ ಮಾಡಿದ ಸ್ವೀಟ್‌ ಪೊಟ್ಯಾಟೋ ಹಾಗೂ ಫಿಗ್‌ ಚಾಟ್‌ನಲ್ಲಿ ಬ್ಲೇಡ್‌ ರೀತಿ ಇರುವ ಮೆಟಲ್‌ ತುಣುಕು ಪತ್ತೆಯಾಗಿದೆ. ಅದೃಷ್ಟವಶಾತ್‌ ಇದರಿಂದ ನನಗೆ ಯಾವುದೇ ತೊಂದರೆ ಆಗಿಲ್ಲ. ಆದರೆ, ಏರ್‌ ಇಂಡಿಯಾ ಕೆಟರಿಂಗ್‌ ಸರ್ವಿಸ್‌ ಬಗ್ಗೆ ನನಗೆ ಇದ್ದ ಗೌರವ ಕಡಿಮೆಯಾಗಿದೆ” ಎಂದು ಪೋಸ್ಟ್‌ ಮಾಡಿದ್ದಾರೆ.

ಮ್ಯಾಥ್ಯೂರಸ್‌ ಪೌಲ್‌ ಕೂಡಲೇ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯು ಪ್ರತಿಕ್ರಿಯಿಸಿದೆ. “ನಿಮಗೆ ಇಂತಹ ಕೆಟ್ಟ ಅನುಭವ ಆಗಿದ್ದಕ್ಕೆ ಕ್ಷಮೆ ಇರಲಿ. ನಾವು ಪ್ರಯಾಣಿಕರಿಗೆ ಸೇವೆ ನೀಡಬೇಕು ಎಂಬ ನಿರ್ದಿಷ್ಟ ಗುರಿ ಹೊಂದಿದ್ದು, ಆ ಗುರಿಗೆ ಇದು ಧಕ್ಕೆ ತರುವಂತಿದೆ. ಸೇವೆಯಲ್ಲಿ ಸಮಸ್ಯೆಯಾಗಿರುವುದಕ್ಕೆ ಕ್ಷಮೆ ಇರಲಿ. ನಾವು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇವೆ” ಎಂಬುದಾಗಿ ಏರ್‌ ಇಂಡಿಯಾ ಪ್ರತಿಕ್ರಿಯಿಸಿದೆ. ಅಷ್ಟೇ ಅಲ್ಲ, ಏರ್‌ ಇಂಡಿಯಾ ಸಂಸ್ಥೆಯು ಮ್ಯಾಥ್ಯೂರಸ್‌ ಪೌಲ್‌ ಅವರಿಗೆ ಒಂದು ವರ್ಷದಲ್ಲಿ ಒಮ್ಮೆ ಉಚಿತವಾಗಿ ಟಿಕೆಟ್‌ ನೀಡಲಾಗುವುದು ಎಂದು ಆಫರ್‌ ನೀಡಿದೆ. ಆದರೆ, ಇದನ್ನು ಪತ್ರಕರ್ತ ನಿರಾಕರಿಸಿದ್ದಾರೆ.

ವೆಜ್‌ ಊಟದಲ್ಲಿ ಮೂಳೆಗಳು ಪತ್ತೆ

ಕೆಲ ತಿಂಗಳ ಹಿಂದೆಯೂ ಏರ್‌ ಇಂಡಿಯಾ ವಿಮಾನದಲ್ಲಿ ಆರ್ಡರ್‌ ಮಾಡಿದ ಸಸ್ಯಾಹಾರದ ಬದಲಿಗೆ ಚಿಕನ್‌ ಪೀಸ್‌ಗಳು ಇರುವ ಊಟ ನೀಡಲಾಗಿದೆ ಎಂದು ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದರು. ಹಾಗೆಯೇ, ಫೋಟೊಗಳ ಸಮೇತ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು.

“ಏರ್‌ ಇಂಡಿಯಾ 582 ವಿಮಾನದಲ್ಲಿ ನಾನು ಪ್ರಯಾಣಿಸುತ್ತಿದ್ದೆ. ಇದೇ ವೇಳೆ ನನಗೆ ನೀಡಿದ ವೆಜ್‌ ಮೀಲ್‌ನಲ್ಲಿ ಚಿಕನ್‌ ಪೀಸ್‌ಗಳು ದೊರೆತಿವೆ. ನಾನು ಕಲ್ಲಿಕೋಟೆಯಿಂದ ವಿಮಾನ ಹತ್ತಿದೆ. ಈ ವಿಮಾನವು 6.40 ಹೊರಡುವ ಬದಲು 7.40ಕ್ಕೆ ಹಾರಾಟ ಆರಂಭಿಸಿದೆ. ವಿಮಾನ ಹಾರಾಟ ವಿಳಂಬ ಮಾಡುವ ಜತೆಗೆ ಮಾಂಸಾಹಾರ ನೀಡಲಾಗಿದೆ. ಇದರ ಕುರಿತು ವಿಮಾನದ ಸಿಬ್ಬಂದಿಗೆ ಮಾಹಿತಿ ನೀಡಿದರೆ, ಅವರು ಒಂದು ಸಾರಿ ಕೇಳಿ ಸುಮ್ಮನಾದರು. ಹಾಗಾಗಿ, ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಆಗ್ರಹಿಸುತ್ತಿದ್ದೇನೆ” ಎಂದು ವೀರಾ ಜೈನ್‌ ಎಂಬ ಮಹಿಳೆಯು ಪೋಸ್ಟ್‌ ಮಾಡಿದ್ದರು.

ಇದನ್ನೂ ಓದಿ: Mayank Agarwal: ವಿಮಾನದಲ್ಲಿ ನೀರೆಂದು ಆ್ಯಸಿಡ್ ಕುಡಿದ ಕ್ರಿಕೆಟಿಗ ಮಯಾಂಕ್ ಅಗರ್ವಾಲ್? ಐಸಿಯುನಲ್ಲಿ ಚಿಕಿತ್ಸೆ

Exit mobile version