Site icon Vistara News

Air India: ಕ್ಷಿಪಣಿ ದಾಳಿಗೂ ಮುನ್ನ ಇರಾನ್ ವಾಯು ಪ್ರದೇಶದಲ್ಲಿ ಏರ್​ ಇಂಡಿಯಾ ವಿಮಾನಗಳ ಹಾರಾಟ; ಅಧಿಕಾರಿಗಳು ಹೇಳಿದ್ದೇನು?

Air India

Air India

ನವದೆಹಲಿ: ಇಸ್ರೇಲ್‌ ಮೇಲೆ ಇರಾನ್‌ 200ಕ್ಕೂ ಅಧಿಕ ಡ್ರೋನ್‌ಗಳು ಹಾಗೂ ಕ್ಷಿಪಣಿಗಳ ಮೂಲಕ ದಾಳಿ (Israel Iran War) ನಡೆಸಿದ್ದು, ಮೂರನೇ ಮಹಾಯುದ್ಧದ ಭೀತಿ ಹೆಚ್ಚಾಗಿದೆ. ಈ ಮಧ್ಯೆ ಇಸ್ರೇಲ್ ಮೇಲೆ ಇರಾನ್​ ಕ್ಷಿಪಣಿ ದಾಳಿ ನಡೆಸುವುದಕ್ಕೂ ಕೆಲವು ಗಂಟೆಗಳ ಮುನ್ನ ಎರಡು ಏರ್​ ಇಂಡಿಯಾ(Air India) ವಿಮಾನಗಳು ಇರಾನ್​ ವಾಯುನೆಲೆಯಲ್ಲಿ ಹಾರಾಟ ನಡೆಸಿದ್ದವು ಎಂದು ಮೂಲಗಳು ತಿಳಿಸಿದೆ. ಈ ವಿಮಾನಗಳಲ್ಲಿ 116 ಹಾಗೂ 131 ಮಂದಿ ಪ್ರಯಾಣಿಕರಿದ್ದರು.

ಈ ಪೈಕಿ ಒಂದು ವಿಮಾನವು ನ್ಯೂಯಾರ್ಕ್​ನಿಂದ ಮುಂಬೈಗೆ ಮತ್ತೊಂದು ಮುಂಬೈನಿಂದ ಲಂಡನ್​ಗೆ ಪ್ರಯಾಣ ಬೆಳಸಿದ್ದವು. ಈ ವಿಮಾನಗಳು ಕ್ರಮವಾಗಿ ಏಪ್ರಿಲ್ 13 ಮತ್ತು ಏಪ್ರಿಲ್ 14ರಂದು ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿಯ ಮೇಲೆ ಹಾರಾಟ ನಡೆಸಿದ್ದವು ಎಂದು ಮೂಲಗಳು ತಿಳಿಸಿವೆ. ಏಪ್ರಿಲ್​ 13ರಂದು ಇರಾನ್ ಕನಿಷ್ಠ 300 ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಇಸ್ರೇಲ್ ಮೇಲೆ ಹಾರಿಸಿತ್ತು.

ಏರ್‌ ಇಂಡಿಯಾ ಹೇಳಿದ್ದೇನು?

ಈ ಬಗ್ಗೆ ಏರ್‌ ಇಂಡಿಯಾ ಪ್ರತಿಕ್ರಿಯಿಸಿ, ಪ್ರಯಾಣಿಕರು, ಸಿಬ್ಬಂದಿ ಮತ್ತು ವಿಮಾನದ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದೆ. “ಏಪ್ರಿಲ್ 13ರಿಂದ ಇರಾನಿನ ವಾಯುಪ್ರದೇಶವು ಯಾವುದೇ ನಿರ್ಬಂಧಗಳಿಲ್ಲದೆ ನಾಗರಿಕ ವಿಮಾನ ಸಂಚಾರಕ್ಕೆ ಲಭ್ಯವಿದ್ದರೂ ಮತ್ತು ವಿಮಾನಯಾನ ಸಂಸ್ಥೆಗಳು ಆ ವಾಯುಪ್ರದೇಶದಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಿದರೂ ಏರ್ ಇಂಡಿಯಾ ವಿವಿಧ ಸುರಕ್ಷತಾ ಸಂಸ್ಥೆಗಳು ಮತ್ತು ನಿಯಂತ್ರಕ ಸಂಸ್ಥೆಗಳೊಂದಿಗೆ ನಿಕಟ ಸಮಾಲೋಚನೆ ನಡೆಸುತ್ತಿದೆ. ಜತೆಗೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಪಶ್ಚಿಮ ದೇಶಗಳಿಗೆ ತೆರಳುವ ಕೆಲವು ವಿಮಾನಗಳಿಗೆ ಸುರಕ್ಷಿತ ಪರ್ಯಾಯ ಮಾರ್ಗಗಳನ್ನು ನಿರ್ದೇಶಿಸಲಾಗುತ್ತಿದೆʼʼ ಎಂದು ಅಧಿಕಾರಿಗಳು ಹೇಳಿದ್ದಾರೆ.

ಏರ್ ಇಂಡಿಯಾ ವಿಮಾನ ಮಾತ್ರವಲ್ಲ ಇತರ ವಿಮಾನಯಾನ ಸಂಸ್ಥೆಗಳ ವಿಮಾನಗಳೂ ಇದೇ ಮಾರ್ಗದಲ್ಲಿ ಏಪ್ರಿಲ್ 13ರಂದು ಹಾರಾಟ ನಡೆಸಿದ್ದವು. ಇರಾನ್ ವಾಯುಪ್ರದೇಶದ ಮೂಲಕ ಮಲೇಷ್ಯಾ ಏರ್‌ಲೈನ್ಸ್‌, ಎಮಿರೇಟ್ಸ್ ಮತ್ತು ಕತಾರ್ ಏರ್‌ವೇಸ್‌ನಂತಹ ವಿಮಾನಗಳು ಹಾದು ಹೋಗಿದ್ದವು ಎಂದು ವರದಿ ಹೇಳಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಏರ್ ಇಂಡಿಯಾ ಏಪ್ರಿಲ್ 13ರಂದು ಕೆಲವು ವಿಮಾನಗಳನ್ನು ಬೇರೆ ಮಾರ್ಗಗಳ ಮೂಲಕ ಹಾರಾಟ ನಡೆಸಿದೆ. ಕೊಚ್ಚಿಯಿಂದ ಲಂಡನ್ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಮತ್ತು ದೆಹಲಿಯಿಂದ ಫ್ರಾಂಕ್ಫರ್ಟ್‌ಗೆ ತೆರಳುವ ವಿಮಾನಗಳು ಅಫ್ಘಾನಿಸ್ತಾನದ ಮಾರ್ಗ ಆಯ್ಕೆ ಮಾಡಿಕೊಂಡಿದ್ದವು. ಹೀಗಿದ್ದೂ ಈ ಎರಡು ವಿಮಾನಗಳು ಇರಾನ್‌ ವಾಯು ಮಾರ್ಗವನ್ನು ಏಕೆ ಆರಿಸಿಕೊಂಡವು ಎನ್ನುವುದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

ಇದನ್ನೂ ಓದಿ: ಇಸ್ರೇಲ್‌-ಇರಾನ್‌ ಸಂಘರ್ಷದಿಂದ ಭಾರತದ ಮೇಲೆ ಪರಿಣಾಮ? ಪೆಟ್ರೋಲ್‌ ಬೆಲೆ ಏರಿಕೆ ನಿಶ್ಚಿತ?

ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ

ಇಸ್ರೇಲ್‌ ಮೇಲೆ ಇರಾನ್‌ ದಾಳಿ ಮಾಡಿದರೆ, ನಾವು ಇಸ್ರೇಲ್‌ ಪರ ನಿಲ್ಲುತ್ತೇವೆ ಎಂದು ಅಮೆರಿಕ ತಿಳಿಸಿದ ಬೆನ್ನಲ್ಲೇ ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ ನೀಡಿದೆ. “ಡಮಾಸ್ಕಸ್‌ನಲ್ಲಿರುವ ನಮ್ಮ ರಾಜತಾಂತ್ರಿಕ ಕಚೇರಿಗಳ ಮೇಲೆ ಯಹೂದಿಗಳು (ಇಸ್ರೇಲ್)‌ ಆಕ್ರಮಣಕಾರಿ ನೀತಿ ಅನುಸರಿಸುತ್ತಿರುವ ಕಾರಣ ಪ್ರತಿಕ್ರಿಯೆ ರೂಪದಲ್ಲಿ ಇರಾನ್‌ ಮಿಲಿಟರಿ ಪಡೆಗಳು ದಾಳಿ ನಡೆಸುತ್ತಿವೆ. ಇದಕ್ಕೆ ಇಸ್ರೇಲ್‌ ಕೂಡ ಪ್ರತಿದಾಳಿ ಮಾಡಬಹುದು. ಹಾಗಾಗಿ, ಮುಂದಿನ ದಿನಗಳಲ್ಲಿ ಪರಿಣಾಮಗಳು ಭೀಕರವಾಗಿರಲಿವೆ. ಇದು ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಸಮರವಾಗಿದೆ. ಹಾಗಾಗಿ, ಇದರಿಂದ ಅಮೆರಿಕ ದೂರ ಉಳಿಯಲೇಬೇಕು” ಎಂದು ಇರಾನ್‌ ಎಚ್ಚರಿಸಿದೆ.

Exit mobile version