ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ರಷ್ಯಾ ಭೇಟಿಯ ನಂತರ ಭಾರತ-ಅಮೆರಿಕ ಸಂಬಂಧಗಳಲ್ಲಿ ಬಿರುಕು ಮೂಡಲಾರಂಭಿಸಿದೆ ಎನ್ನುವ ವದಂತಿಗಳ ಮಧ್ಯೆ ರಾಷ್ಟ್ರೀಯ ಭದ್ರತಾ ಸಲಹೆಗಾರ (National Security Advisor) ಅಜಿತ್ ದೋವಲ್ (Ajit Doval) ಶುಕ್ರವಾರ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ (Jake Sullivan) ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.
ಶಾಂತಿ ಮತ್ತು ಭದ್ರತೆಗೆ ಸಂಬಂಧಿಸಿದ ಜಾಗತಿಕ ಸವಾಲುಗಳನ್ನು ಎದುರಿಸಲು ಮತ್ತು ಭಾರತ-ಅಮೆರಿಕ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ವಿಸ್ತರಿಸಲು ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ದೋವಲ್ ಮತ್ತು ಸುಲ್ಲಿವಾನ್ ಪುನರುಚ್ಚರಿಸಿದರು ಎಂದು ವಿದೇಶಾಂಗ ಸಚಿವಾಲಯ (MEA) ತಿಳಿಸಿದೆ.
ಸಾಮಾನ್ಯ ಕಾರ್ಯತಂತ್ರ ಮತ್ತು ಭದ್ರತಾ ಹಿತಾಸಕ್ತಿಗಳ ಮೇಲೆ ಭಾರತ-ಅಮೆರಿಕ ಸಂಬಂಧ ಮತ್ತಷ್ಟು ದೃಢವಾಗುವಂತಾಗಲು ನಿಕಟವಾಗಿ ಕೆಲಸ ಮಾಡಲು ಎರಡೂ ಕಡೆಯ ರಾಷ್ಟ್ರೀಯ ಭದ್ರತಾ ಸಲಹೆಗಾರರು ಒಪ್ಪಿಕೊಂಡಿದ್ದಾರೆ ಎಂದು ಎಂಇಎ ಹೇಳಿದೆ.
“ಅವರು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಕಾಳಜಿಯ ವ್ಯಾಪಕ ಶ್ರೇಣಿಯ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು” ಎಂದು ಎಂಇಎ ಹೇಳಿಕೆಯಲ್ಲಿ ತಿಳಿಸಿದೆ. ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ (Eric Garcetti) ಅವರು ರಷ್ಯಾದೊಂದಿಗಿನ ಭಾರತದ ಸಂಬಂಧವನ್ನು ಟೀಕಿಸಿದ ಒಂದು ದಿನದ ನಂತರ ಈ ದೂರವಾಣಿ ಸಂಭಾಷಣೆ ನಡೆದಿದೆ.
ದೆಹಲಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಾರ್ಸೆಟ್ಟಿ, ಇತರ ದೇಶಗಳು ನಿಯಮ ಮೀರಿದಾಗ ಭಾರತ ಮತ್ತು ಅಮೆರಿಕ ಪ್ರಜಾಪ್ರಭುತ್ವ ತತ್ವಗಳನ್ನು ಎತ್ತಿಹಿಡಿಯಬೇಕು ಎಂದು ಹೇಳಿದ್ದರು. “ಭಾರತವು ತನ್ನ ಕಾರ್ಯತಂತ್ರದ ಸ್ವಾಯತ್ತತೆಯನ್ನು ಇಷ್ಟಪಡುತ್ತದೆ ಎಂದು ನನಗೆ ಗೊತ್ತು. ಇದನ್ನು ನಾನು ಗೌರವಿಸುತ್ತೇನೆ. ಆದರೆ ಸಂಘರ್ಷದ ಸಮಯದಲ್ಲಿ ಇದಕ್ಕೆ ಪ್ರಸಕ್ತಿ ಇಲ್ಲ. ಹೀಗಾಗಿ ಬಿಕ್ಕಟ್ಟಿನ ವೇಳೆ ನಾವು ಪರಸ್ಪರ ತಿಳಿದುಕೊಳ್ಳಬೇಕು. ನಾವು ವಿಶ್ವಾಸಾರ್ಹ ಸ್ನೇಹಿತರು, ಸಹೋದರರು ಮತ್ತು ಸಹೋದರಿಯರು, ಸಹೋದ್ಯೋಗಿಗಳು ಎಂದು ತಿಳಿದುಕೊಳ್ಳಬೇಕು” ಎಂದು ಗಾರ್ಸೆಟ್ಟಿ ಪ್ರಧಾನಿ ಮೋದಿ ಅವರ ರಷ್ಯಾ ಪ್ರವಾಸವನ್ನು ಉಲ್ಲೇಖಿಸಲದೆ ಮಾತನಾಡಿದ್ದರು.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ಸ್ಪಷ್ಟವಾಗಿ ಉಲ್ಲೇಖಿಸಿದ ಅಮೆರಿಕ ರಾಯಭಾರಿ ಗಾರ್ಸೆಟ್ಟಿ ಯುದ್ಧ ದೂರವಿಲ್ಲ ಎಂದು ಹೇಳಿದ್ದರು. “ಯಾವುದೇ ಯುದ್ಧವು ಇನ್ನು ಮುಂದೆ ದೂರವಿಲ್ಲ ಮತ್ತು ನಾವು ಶಾಂತಿಗಾಗಿ ಶ್ರಮಿಸುವ ಜತೆಗೆ ಶಾಂತಿಯುತ ನಿಯಮಗಳ ಪಾಲಿಸದ, ಯುದ್ಧ ಮುಂದಾಗುವವರನ್ನು ಖಂಡಿಸಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಅವರು ಕರೆ ನೀಡಿದ್ದರು. ಜತೆಗೆ ಗಡಿಗಳ ನಿಯಮವನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದ್ದರು. “ಗಡಿಗಳು ಎಷ್ಟು ಮುಖ್ಯ ಎಂದು ನಾನು ಭಾರತಕ್ಕೆ ನೆನಪಿಸುವ ಅಗತ್ಯವಿಲ್ಲ. ನಾವು ಒಟ್ಟಾಗಿ ನಿಂತಾಗ ನಮ್ಮ ಪ್ರದೇಶದ ಭದ್ರತೆ ಮತ್ತು ಸ್ಥಿರತೆಯನ್ನು ಹೆಚ್ಚಿಸಬಹುದು” ಎಂದು ಅವರು ತಿಳಿಸಿದ್ದರು.
ಇದನ್ನೂ ಓದಿ: Ajit Doval: ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ 3ನೇ ಅವಧಿಗೆ ನೇಮಕ; ಉಗ್ರರಿಗೆ ನಡುಕ
ಆ ವಾರದ ಆರಂಭದಲ್ಲಿ ಪ್ರಧಾನಿ ಮೋದಿ ರಷ್ಯಾ ಮತ್ತು ಆಸ್ಟ್ರಿಯಾ ಪ್ರವಾಸ ಕೈಗೊಂಡಿದ್ದರು. ಹೀಗಾಗಿ ಗಾರ್ಸೆಟ್ಟಿ ಈ ಅಂಶಗಳನ್ನು ಉಲ್ಲೇಖಿಸಿದ್ದರು ಎಂದು ವಿಶ್ಲೇಷಿಸಲಾಗುತ್ತಿದೆ.