Site icon Vistara News

All Eyes on Raesi: ಹಿಂದೂ ಯಾತ್ರಿಕರ ಹತ್ಯೆ: ಆಲ್ ಐಸ್ ಆನ್ ರಿಯಾಸಿ; ರಫಾ ರಫಾ ಅನ್ನುತ್ತಿದ್ದ ಸೆಲೆಬ್ರಿಟಿಗಳು ಈಗೆಲ್ಲಿ?

All Eyes on Raesi

All Eyes on Raesi

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu & Kashmir) ರಿಯಾಸಿ ಜಿಲ್ಲೆಯಲ್ಲಿ ಭಾನುವಾರ (ಜೂನ್ 9) ನಡೆದ ಭಯೋತ್ಪಾದಕರ ಗುಂಡಿನ ದಾಳಿಯ (Reasi terror attack) ಸಂದರ್ಭದಲ್ಲಿ, ಪುಟ್ಟ ಕಂದಮ್ಮನೂ ಸೇರಿ 10 ಮಂದಿ ಮೃತಪಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಶಿವ ಖೋರಿ ದೇವಸ್ಥಾನಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ವೇಳೆ ಬಸ್‌ ಆಳವಾದ ಕಮರಿಗೆ ಬಿದ್ದು, ದುರಂತ ಸಂಭವಿಸಿದೆ. ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ʼಆಲ್ ಐಸ್ ಆನ್ ರಿಯಾಸಿʼ (All Eyes on Raesi) ಎನ್ನುವ ಪೋಸ್ಟ್‌ ವೈರಲ್‌ ಆಗಿದೆ. ಜತೆಗೆ ಈ ಹಿಂದೆ ʼಆಲ್ ಐಸ್ ಆನ್ ರಫಾʼ ಎನ್ನುವ ಪೋಸ್ಟ್‌ ಹಂಚಿಕೊಂಡು ರಫಾ (ಪ್ಯಾಲೆಸ್ತೀನ್‌) ಜನರಿಗಾಗಿ ಕಂಬನಿ ಸುರಿಸಿದ್ದ ಸೆಲೆಬ್ರಿಟಿಗಳು ಈಗ ಮೌನವಾಗಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.

ಇತ್ತೀಚೆಗೆ ಇಸ್ರೇಲ್‌ನ ವೈಮಾನಿಕ ದಾಳಿಯ ನಂತರ ದಕ್ಷಿಣ ಗಾಜಾದಲ್ಲಿ 45 ಮಂದಿ ಸಾವನ್ನಪ್ಪಿ, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಬಳಿಕ ದಕ್ಷಿಣ ಗಾಜಾದ ರಫಾ ನಗರದಲ್ಲಿನ ನಿರಾಶ್ರಿತರ ಶಿಬಿರದಲ್ಲಿ ಡೇರೆಗಳ ಚಿತ್ರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದರಲ್ಲಿ ʼಆಲ್ ಐಸ್ ಆನ್ ರಫಾʼ ಎಂದು ಬರೆದು, ರಫಾ ನಿರಾಶ್ರಿತರಿಗೆ ಬೆಂಬಲ ವ್ಯಕ್ತಪಡಿಸಲಾಗಿತ್ತು. ಈ ಪೋಸ್ಟ್‌ ಅನ್ನು ಭಾರತದ ಸೆಲೆಬ್ರಿಟಿಗಳೂ ಹಂಚಿಕೊಂಡಿದ್ದರು. ಪ್ರಿಯಾಂಕಾ ಚೋಪ್ರಾ, ವರುಣ್ ಧವನ್, ಆಲಿಯಾ ಭಟ್, ಸಮಂತಾ ರುತ್ ಪ್ರಭು, ತ್ರಿಪ್ತಿ ಡಿಮ್ರಿ, ರಿಚಾ ಚಡ್ಡಾ, ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್ ಮುಂತಾದ ಸೆಲೆಬ್ರಿಟಿಗಳು ʼಆಲ್ ಐಸ್ ಆನ್ ರಫಾʼ ಪೋಸ್ಟ್‌ ಹಂಚಿಕೊಂಡು ಕಂಬನಿ ಮಿಡಿದಿದ್ದರು. ಸದ್ಯ ಇವರೆಲ್ಲ ಭಾರತದಲ್ಲೇ ನಡೆದ ದುರಂತದ ಬಗ್ಗೆ ಮೌನ ವಹಿಸಿದ್ದು ನೆಟ್ಟಿಗರನ್ನು ಕೆರಳಿಸಿದೆ. ʼಆಲ್ ಐಸ್ ಆನ್ ರಿಯಾಸಿʼ ಎನ್ನುವ ಪೋಸ್ಟ್‌ ಈ ಸೆಲೆಬ್ರಿಟಿಗಳ ಸೋಷಿಯಲ್‌ ಮೀಡಿಯಾದಲ್ಲಿ ಯಾಕೆ ಕಾಣಿಸಿಕೊಂಡಿಲ್ಲ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

ಹಿಂದೂಗಳಿಗೆ ಯಾಕೆ ಮನಸ್ಸು ಮಿಡಿಯುತ್ತಿಲ್ಲ?

ʼʼದೂರದ ಪ್ಯಾಲೆಸ್ತೀನಿಯರಿಗಾಗಿ ಮಿಡಿದ ಸೆಲೆಬ್ರಿಟಿಗಳ ಮನಸ್ಸು ನಮ್ಮದೇ ದೇಶದ ಮುಗ್ಧರಿಗಾಗಿ ಯಾಕೆ ಮಿಡಿಯುತ್ತಿಲ್ಲ? ಭಯೋತ್ಪಾದನೆಗಾಗಿ ಬಲಿಯಾದ ಹಿಂದೂಗಳ ಬೆಂಬಲಕ್ಕೆ ಧಾವಿಸಲು ಸೆಲೆಬ್ರಿಟಿಗಳು ಮುಂದಾಗದಿರುವುದು ದುರಂತʼʼ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವರು ಸೋಷಿಯಲ್‌ ಮೀಡಿಯಾದ ಮೂಲಕ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ʼʼಎಲ್ಲರ ಕಣ್ಣು ರಫಾ ಮೇಲೆ ಎನ್ನುತ್ತಿದ್ದವರೆಲ್ಲ ಈಗ ಮೌನಕ್ಕೆ ಶರಣಾಗಿದ್ದಾರೆʼʼ ಎಂದು ಒಬ್ಬರು ರಿಯಾಸಿ ದುರಂತದ ಫೋಟೊವನ್ನು ಪೋಸ್ಟ್‌ ಮಾಡಿ ಸಿನಿಮಾ ನಟ-ನಟಿಯರಿಗೆ ಝಾಡಿಸಿದ್ದಾರೆ.

ʼʼಕೆಲವು ದಿನಗಳ ಹಿಂದೆ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಅವರ ಕಣ್ಣು ರಫಾದತ್ತ ನೆಟ್ಟಿತ್ತು. ಈಗ ಅವರ ಕಣ್ಣು ಮುಚ್ಚಿದೆ. ಅವರಿಗೆ ಮುಸ್ಲಿಂ ಭಯೋತ್ಪಾದಕರು ಹಿಂದೂ ಯಾತ್ರಾರ್ಥಿಗಳನ್ನು ಹತ್ಯೆ ಮಾಡಿರುವುದು ಕಾಣಿಸುತ್ತಿಲ್ಲʼʼ ಎಂದು ಇನ್ನೊಬ್ಬರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಜತೆಗೆ ರೋಹಿತ್‌ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್, ಮಾಧುರಿ ದೀಕ್ಷಿತ್‌ ಮುಂತಾದವರ ಮೌನವನ್ನೂ ಟೀಕಿಸಿದ್ದಾರೆ. ಒಟ್ಟಿನಲ್ಲಿ ಸೆಲೆಬ್ರಿಟಿಗಳ ಇಬ್ಬಗೆಯ ನೀತಿ ಮತ್ತೊಮ್ಮೆ ಬಟಾ ಬಯಲಾಗಿದೆ.

ಇದನ್ನೂ ಓದಿ: Terror Attack: ಕಂದಮ್ಮನನ್ನೂ ಕೊಂದ ಉಗ್ರರು; ಎದೆಗೆ ಗುಂಡು ಬಿದ್ದರೂ ಪ್ರಯಾಣಿಕರನ್ನು ಉಳಿಸಲು ಯತ್ನಿಸಿದ್ದ ಚಾಲಕ

Exit mobile version