ಲಕ್ನೋ: ಮತಾಂತರ (Religious conversion)ಗಳನ್ನು ನಡೆಸುವ ಧಾರ್ಮಿಕ ಸಭೆಗಳನ್ನು ನಿಯಂತ್ರಿಸದಿದ್ದರೆ ಪ್ರಸ್ತುತ ದೇಶದಲ್ಲಿರುವ ಬಹುಸಂಖ್ಯಾತರು ಕ್ರಮೇಣ ಅಲ್ಪಸಂಖ್ಯಾತರಾಗಬಹುದು ಎಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ (Allahabad High Court) ಕಳವಳ ವ್ಯಕ್ತಪಡಿಸಿದೆ.
ಮತಾಂತರ ನಡೆಸಲು ಯತ್ನಿಸಿ 2021ರ ಮತಾಂತರ ನಿಷೇಧ ಕಾಯಿದೆಯಡಿ ಬಂಧಿತನಾಗಿರುವ ಉತ್ತರ ಪ್ರದೇಶ ಮೂಲದ ಕೈಲಾಶ್ ಎಂಬಾತನ ಪ್ರಕರಣದ ವಿಚಾರಣೆ ನಡೆಸುವ ವೇಳೆ ನ್ಯಾ. ರೋಹಿತ್ ರಂಜನ್ ಅಗರವಾಲ್ ನೇತೃತ್ವದ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಭಾರತದ ಸಂವಿಧಾನದ 25ನೇ ವಿಧಿಯು ಧಾರ್ಮಿಕ ಮತಾಂತರಕ್ಕೆ ಅವಕಾಶ ನೀಡುವುದಿಲ್ಲ ಎಂದೂ ತಿಳಿಸಿದೆ.
Majority population would become minority if conversions at religious gatherings continue: Allahabad High Court
— Bar and Bench (@barandbench) July 2, 2024
Read more here: https://t.co/QKDb9z6RQ7 pic.twitter.com/CXGEkzoIy5
ಏನಿದು ಪ್ರಕರಣ?
ಆರೋಪಿ ಕೈಲಾಶ್ ದೆಹಲಿಯಲ್ಲಿ ಧಾರ್ಮಿಕ ಸಭೆ ಆಯೋಜಿಸಿ ಅದರಲ್ಲಿ ಭಾಗವಹಿಸುವಂತೆ ಆಗ್ರಹಿಸಿ ತನ್ನ ಹಳ್ಳಿಯಿಂದ ಅನೇಕರನ್ನು ಕರೆದೊಯ್ದಿದ್ದಾನೆ. ಈ ಪೈಕಿ ಹೆಚ್ಚಿನವರು ಮನೆಗೆ ಮರಳಲಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ. ಅಲ್ಲಿ ಆತ ಮುಗ್ಧ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿದ್ದಾನೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ.
ವಾದ ವಿವಾದ ಆಲಿಸಿದ ಕೋರ್ಟ್, “ಕೈಲಾಶ್ ನವದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಗಳಿಗೆ ಹಾಜರಾಗಲು ಜನರನ್ನು ಕರೆದೊಯ್ಯುತ್ತಿದ್ದ ಮತ್ತು ಅಲ್ಲಿ ಅವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲಾಗುತ್ತಿತ್ತು ಎನ್ನುವುದು ಸ್ಪಷ್ಟವಾಗಿದೆ. ಇದೇ ರೀತಿ ಮುಂದುವರಿದರೆ ದೇಶದಲ್ಲಿರುವ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುವ ದಿನ ದೂರವಿಲ್ಲ. ಕೂಡಲೇ ಮತಾಂತರವನ್ನು ನಿಲ್ಲಿಸಬೇಕುʼʼ ಎಂದು ಸೂಚಿಸಿದೆ.
“ಉತ್ತರ ಪ್ರದೇಶದಾದ್ಯಂತ ಎಸ್‌ಸಿ / ಎಸ್‌ಟಿ ಮತ್ತು ಇತರ ಜಾತಿಗಳ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಕಾನೂನುಬಾಹಿರವಾಗಿ ಮತಾಂತರಿಸುವುದು ವ್ಯಾಪಕವಾಗಿದೆ ಎಂಬುದು ನ್ಯಾಯಾಲಯದ ಗಮನಕ್ಕೆ ಬಂದಿದೆ” ಎಂದ ನ್ಯಾ. ರೋಹಿತ್ ರಂಜನ್ ಅಗರವಾಲ್ ಅವರು ಆರೋಪಿಗೆ ಜಾಮೀನು ನಿರಾಕರಿಸಿದರು.
ವಾದದ ವೇಳೆ ಆರೋಪಿ ಪರ ವಕೀಲ ಸಾಕೇತ್ ಜೈಸ್ವಾಲ್, ಸಂತ್ರಸ್ತ ರಾಮ್‌ಪಾಲ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿಲ್ಲ ಅಥವಾ ಅವರು ಕ್ರಿಶ್ಚಿಯನ್ ಅಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಮುಂದಾದರು. ಅವರು ಇತರರೊಂದಿಗೆ ಧಾರ್ಮಿಕ ಕಾರ್ಯಕ್ರಮಕ್ಕೆ ಹಾಜರಾಗಿದ್ದರಷ್ಟೆ. ಅಲ್ಲದೆ ಧಾರ್ಮಿಕ ಸಭೆಗಳನ್ನು ನಡೆಸುತ್ತಿದ್ದ ಸೋನು ಪಾಸ್ಟರ್‌ಗೆ ಈಗಾಗಲೇ ಜಾಮೀನು ನಿಡಲಾಗಿದೆ ಎಂದು ತಿಳಿಸಿದರು. ಆದರೂ ಕೈಲಾಶ್‌ಹೆ ಜಾಮೀನು ನಿರಾಕರಿಸಲಾಯಿತು.
ರಾಜ್ಯದಲ್ಲಿ ಅಕ್ರಮ ಮತಾಂತರ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕ್ರಿಶ್ಚಿಯನ್ ಮಿಷನರಿಗಳು ಮತ್ತು ಮುಸ್ಲಿಂ ಸಂಘಟನೆಗಳು ಬಹುಸಂಖ್ಯಾತ ಹಿಂದೂಗಳಿಗೆ ಆಮಿಷ ಒಡ್ಡಿ ಮತಾಂತರ ನಡೆಸುತ್ತಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಇದನ್ನೂ ಓದಿ: Religious Conversion: ಶಿವಮೊಗ್ಗದಲ್ಲಿ ಆಮಿಷವೊಡ್ಡಿ ಮತಾಂತರಕ್ಕೆ ಯತ್ನ; ಪಾದ್ರಿ ಸೇರಿ ಹಲವರು ಪೊಲೀಸ್ ವಶಕ್ಕೆ
ಪಾದ್ರಿ ಸೇರಿ 10 ಮಂದಿಯ ಬಂಧನ
ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಆಮಿಷದ ಮೂಲಕ ಹಿಂದೂಗಳ ದೊಡ್ಡ ಗುಂಪೊಂದನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲು ಪ್ರಯತ್ನಿಸಿದ ಆರೋಪದ ಮೇಲೆ ಚರ್ಚ್ ಪಾದ್ರಿ ಸೇರಿದಂತೆ ಹತ್ತು ಜನರನ್ನು ಬಂಧಿಸಲಾಗಿತ್ತು. ಬಳಿಕ ರಾಜ್ಯದ ಮತಾಂತರ ತಡೆ ಕಾನೂನು ಪ್ರಕಾರ (Anti-conversion law) ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಚರ್ಚ್‌ನ ಪಾದ್ರಿ ಫಾದರ್ ಡೊಮೆನಿಕ್, ಸರ್ಜು ಪ್ರಸಾದ್ ಗೌತಮ್, ಪವನ್ ಕುಮಾರ್, ಸುನಿಲ್ ಪಾಸಿ, ಘನಶ್ಯಾಮ್ ಗೌತಮ್, ಸುರೇಂದ್ರ ಪಾಸ್ವಾನ್, ರಾಹುಲ್ ಪಾಸ್ವಾನ್, ರಾಮಚಂದ್ರನ್ ರಾವತ್, ಧರ್ಮೇಂದ್ರ ಕೋರಿ ಮತ್ತು ಸೂರಜ್ ಗೌತಮ್ ಬಂಧಿತರು.