Site icon Vistara News

Amanatullah Khan: ಆಪ್‌ಗೆ ಮತ್ತಷ್ಟು ಸಂಕಷ್ಟ; ಶಾಸಕ ಅಮಾನತುಲ್ಲಾ ಖಾನ್ ಅರೆಸ್ಟ್‌

Amanatullah Khan

Amanatullah Khan

ನವದೆಹಲಿ: ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷ (AAP)ಕ್ಕೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ದೆಹಲಿ ಅಬಕಾರಿ ನೀತಿ ಹಗರಣ (Delhi Liquor Scam)ದ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಬಂಧಿಸಿದ ಒಂದು ತಿಂಗಳೊಳಗೆ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ (Amanatullah Khan) ಅವರನ್ನು ಜಾರಿ ನಿರ್ದೇಶನಾಲಯ (Enforcement Directorate) ವಶಕ್ಕೆ ತೆಗೆದುಕೊಂಡಿದೆ. ದೆಹಲಿ ವಕ್ಫ್ ಮಂಡಳಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ (Waqf Board-linked money laundering case) ಸಂಬಂಧಿಸಿದಂತೆ ಶಾಸಕರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?

ದೆಹಲಿ ವಕ್ಫ್ ಬೋರ್ಡ್ ಹಗರಣದಲ್ಲಿನ ಅಕ್ರಮ ಹಣ ವರ್ಗಾವಣೆ ಹಾಗೂ ಅಕ್ರಮ ನೇಮಕಾತಿ ಕುರಿತು ತನಿಖೆ ನಡೆಸುತ್ತಿರುವ ಇ.ಡಿ ಅಧಿಕಾರಿಗಳು ಇದೀಗ ಆಪ್ ನಾಯಕನನ್ನು ಬಂಧಿಸಿದೆ. ಸತತ 9 ಗಂಟೆಗಳ ಕಾಲ ವಿಚಾರಣೆ ನಡೆಸಿದ ಇ.ಡಿ ಅಧಿಕಾರಿಗಳು ಅಮಾನತುಲ್ಲಾ ಖಾನ್ ಅವರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಂಧನಕ್ಕೂ ಮುನ್ನ ಖಾನ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೊ ಸಂದೇಶವನ್ನು ಪೋಸ್ಟ್ ಮಾಡಿದ್ದು ಅದರಲ್ಲಿ, ʼʼಜೈಲಿನಲ್ಲಿರುವ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಸಾಕ್ಷಿ ಹೇಳಲು ಏಜೆನ್ಸಿ ಬಯಸಿದೆʼʼ ಎಂದು ಆರೋಪಿಸಿದ್ದಾರೆ.

ಈ ಹಿಂದೆ ಶಾಸಕರ ನಿವಾಸದ ಮೇಲೆ ದಾಳಿ ನಡೆಸಿದ್ದ ಇ.ಡಿ ದೆಹಲಿ ವಕ್ಫ್ ಮಂಡಳಿಯಲ್ಲಿ ಸಿಬ್ಬಂದಿಯನ್ನು ಅಕ್ರಮವಾಗಿ ನೇಮಕ ಮಾಡುವ ಮೂಲಕ ಖಾನ್ ಅಪಾರ ಪ್ರಮಾಣದ ಹಣವನ್ನು ನಗದು ರೂಪದಲ್ಲಿ ಗಳಿಸಿದ್ದಾರೆ ಮತ್ತು ತಮ್ಮ ಸಹವರ್ತಿಗಳ ಹೆಸರಿನಲ್ಲಿ ಸ್ಥಿರಾಸ್ತಿಗಳನ್ನು ಖರೀದಿಸಲು ಹೂಡಿಕೆ ಮಾಡಿದ್ದಾರೆ ಎಂದು ಹೇಳಿತ್ತು. ಇ.ಡಿ ಅಧಿಕಾರಿಗಳ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಖಾನ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಕುರಿತು ಮಧ್ಯಪ್ರವೇಶಿಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಬಳಿಕ ಇ.ಡಿ ಅಧಿಕಾರಿಗಳು ಖಾನ್ ಅವರ ವಿಚಾರಣೆ ನಡೆಸಿದ್ದರು. ಹಲವು ಗಂಟೆಗಳ ಕಾಲ ವಿಚಾರಣೆ ಮುಂದುವರಿದಿತ್ತು. ಕೊನೆಗೆ ಅಮಾನತುಲ್ಲಾ ಖಾನ್ ಅವರನ್ನು ಬಂಧಿಸಲಾಗಿದೆ.

ಅಮಾನತುಲ್ಲಾ ಖಾನ್‌ ಬಂಧನಕ್ಕೂ ಮುನ್ನ ಆಪ್‌ ಸಂಸದ ಸಂಜಯ್ ಸಿಂಗ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮೋದಿ ಸರ್ಕಾರ ಆಪರೇಷನ್ ಕಮಲದಲ್ಲಿ ಸಂಪೂರ್ಣವಾಗಿ ಭಾಗಿಯಾಗಿದೆ ಮತ್ತು ಸಚಿವರು ಮತ್ತು ಶಾಸಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಅವರನ್ನು ಬಂಧಿಸಲಾಗುತ್ತಿದೆ ಎಂದು ಆರೋಪಿಸಿದ್ದರು. “ಅಮಾನತುಲ್ಲಾ ಖಾನ್‌ ವಿರುದ್ಧ ಆಧಾರರಹಿತ ಪ್ರಕರಣ ದಾಖಲಿಸುವ ಮೂಲಕ ಅವರನ್ನು ಬಂಧಿಸಲು ಇ.ಡಿ ಸಿದ್ಧತೆ ನಡೆಸುತ್ತಿದೆ. ಸರ್ವಾಧಿಕಾರ ಶೀಘ್ರದಲ್ಲೇ ಕೊನೆಗೊಳ್ಳುತ್ತದೆ. ನಾನು ಅವರ ಕುಟುಂಬವನ್ನು ಭೇಟಿಯಾಗಲಿದ್ದೇನೆ” ಎಂದು ಸಿಂಗ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದರು.

ಅಮಾನತುಲ್ಲಾ ಖಾನ್‌ ದೆಹಲಿ ವಕ್ಫ್ ಬೋರ್ಡ್ ಮುಖ್ಯಸ್ಥರಾಗಿದ್ದ ವೇಳೆ ಭಾರಿ ಹಗರಣ ನಡೆಸಿದ್ದಾರೆ ಎನ್ನುವ ಆರೋಪದಡಿಯಲ್ಲಿ ತನಿಖೆ ನಡೆಯುತ್ತಿದೆ. ಅಮಾನತುಲ್ಲಾ ಖಾನ್‌ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಆಪ್ ಸಚಿವೆ ಆತೀಷಿ ಹಾಗೂ ನಾಯಕ ಸಂಜಯ್ ಸಿಂಗ್ ಅಮಾನತುಲ್ಲಾ ಖಾನ್‌ ಮನೆಗೆ ತೆರಳಿದ್ದಾರೆ.

ಇದನ್ನೂ ಓದಿ: Arvind Kejriwal : ಅಬಕಾರಿ ಲಂಚ ಪ್ರಕರಣದಲ್ಲಿ ಡೆಲ್ಲಿ ಸಿಎಂ ಅರವಿಂದ್​ ಕೇಜ್ರಿವಾಲ್ ಅರೆಸ್ಟ್​​

Exit mobile version