ಮುಂಬೈ, ಮಹಾರಾಷ್ಟ್ರ: 2030ರ ಹೊತ್ತಿಗೆ ಭಾರತದಲ್ಲಿ (India) ಕ್ಲೌಡ್ ಇನ್ಫ್ರಾಸ್ಟ್ರಕ್ಚರ್‌ನಲ್ಲಿ (Cloud Infrastructure) ಸುಮಾರು 12.7 ಬಿಲಿಯನ್ ಡಾಲರ್ (1,05,600 ಕೋಟಿ) ಹೂಡಿಕೆ ಮಾಡುವುದಾಗಿ ಅಮೆಜಾನ್ ವೆಬ್ ಸರ್ವೀಸ್ (Amazon Web Services) ಹೇಳಿದೆ. ಭಾರತದಲ್ಲಿ ಹೆಚ್ಚುತ್ತಿರುವ ಕ್ಲೌಡ್ ಸರ್ವೀಸ್ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಅಮೆಜಾನ್ ವೆಬ್ ಸರ್ವೀಸ್ ಬೃಹತ್ ಮಟ್ಟದಲ್ಲಿ ಹೂಡಿಕೆ ಮಾಡಲು ಮುಂದಾಗಿದೆ. ಭಾರತದಲ್ಲಿನ ಡೇಟಾ ಸೆಂಟರ್ ಮೂಲಸೌಕರ್ಯದಲ್ಲಿನ ಯೋಜಿತ ಹೂಡಿಕೆಯು ಭಾರತೀಯ ವ್ಯವಹಾರಗಳಲ್ಲಿ ಪ್ರತಿ ವರ್ಷ ಅಂದಾಜು ಸರಾಸರಿ 1,31,700 ಪೂರ್ಣ ಸಮಯದ ಸಮಾನ (FTE) ಉದ್ಯೋಗಗಳನ್ನು ಬೆಂಬಲಿಸುತ್ತದೆ ಎಂದು ಅಮೆಜಾನ್‌ನ ವೆಬ್ ಸೇವೆಗಳ ಘಟಕವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕ್ಲೌಡ್ ಇನ್ಫ್ರಾಸ್ಟಕ್ಟರ್‌ನಲ್ಲಿ ಹೂಡಿಕೆಯು ನಿರ್ಮಾಣ, ಘಟಕ ನಿರ್ವಹಣೆ, ಎಂಜಿನಿಯರಿಂಗ್, ಟೆಲಿಕಮ್ಯುನಿಕೇಷನ್ ಸೇರಿದಂತೆ ಇನ್ನಿತರ ಉದ್ಯೋಗಗಳನ್ನು ಒಳಗೊಳ್ಳಲಿದೆ. ಇವು ಭಾರತದಲ್ಲಿ ಡೇಟಾ ಸೆಂಟರ್ ಸಪ್ಲೈ ಚೈನ್‌ನ ಭಾಗವಾಗಿರಲಿವೆ.
ಅಮೆಜಾನ್ ವೆಬ್ ಸರ್ವೀಸ್ ಕಂಪನಿಯು ಭಾರತದಲ್ಲಿ ಕ್ಲೌಡ್ ಇನ್ಫ್ರಾಸ್ಟ್ರಕ್ಚರ್‌ನಲ್ಲಿ 105600 ಕೋಟಿ(12.7 ಬಿಲಿಯನ್ ಡಾಲರ್) ಹೂಡಿಕೆ ಮಾಡಲಿದ್ದು, ದೀರ್ಘಾವಧಿಯ ತನ್ನ ಬದ್ಧತೆಗಾಗಿ ಈ ಹೂಡಿಕೆಯು 2030ರ ಹೊತ್ತಿಗೆ 136500 ಕೋಟಿ ರೂ.(16.4 ಬಿಲಿಯನ್ ಡಾಲರ್) ಆಗಬಹುದು ಎಂದು ಅಂದಾಜಿಸಲಾಗುತ್ತಿದೆ. ಕಂಪನಿಯು 2016ರಿಂದ 2026ರ ಅವಧಿಯಲ್ಲಿ 30,900 ಕೋಟಿ ರೂ. ಹೂಡಿಕೆ ಮಾಡಿದರೆ, 2030ರ ಹೊತ್ತಿಗೆ ಕಂಪನಿಯಿಂದ ಒಟ್ಟಾರೆ ಹೂಡಿಕೆಯ ಮೊತ್ತವು 16.4 ಬಿಲಿಯನ್ ಡಾಲರ್‌ಗೆ ಏರಿಕೆಯಾಗಲಿದೆ ಎನ್ನಲಾಗುತ್ತಿದೆ. ಈ ಹೂಡಿಕೆಯು 2030ರ ಹೊತ್ತಿಗೆ ಭಾರತದ ಒಟ್ಟು ಜಿಡಿಪಿಗೆ ಸುಮಾರು 1,97,700 ಕೋಟಿ ರೂ.ನಷ್ಟು ಕಾಣಿಕೆ ನೀಡಲಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಭಾರತದಲ್ಲಿ ತನ್ನ ಹೂಡಿಕೆಯು ಉದ್ಯೋಗಿಗಳ ಅಭಿವೃದ್ಧಿ, ತರಬೇತಿ ಮತ್ತು ಕೌಶಲ್ಯದ ಅವಕಾಶಗಳು, ಸಮುದಾಯದ ಏಳಿಕೆ ಮತ್ತು ಸುಸ್ಥಿರತೆಯ ಉಪಕ್ರಮಗಳಂತಹ ಕ್ಷೇತ್ರಗಳಲ್ಲಿ ಸ್ಥಳೀಯ ಆರ್ಥಿಕತೆಯ ಮೇಲೆ ಏರಿಳಿತದ ಪರಿಣಾಮವನ್ನು ಬೀರುತ್ತದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: Vodafone layoff : ವೊಡಾಫೋನ್ 11,000, ಅಮೆಜಾನ್‌ನಲ್ಲಿ 500 ಉದ್ಯೋಗ ಕಡಿತ, ಕಾರಣವೇನು?
ಕಂಪನಿಯು ಭಾರತದಲ್ಲಿ ಎರಡು ಡೇಟಾ ಸೆಂಟರ್ ಮೂಲಸೌಕರ್ಯ ಪ್ರದೇಶಗಳನ್ನು ಹೊಂದಿದೆ. 2016ರಲ್ಲಿ ಎಡಬ್ಲ್ಯೂಎಸ್ ಏಷ್ಯಾ ಪೆಸಿಫಿಕ್ (ಮುಂಬೈ) ಪ್ರದೇಶದಲ್ಲಿ ಪ್ರಾರಂಭವಾಯಿತು ಮತ್ತು ಮತ್ತೊಂದು ಹೈದ್ರಾಬಾದ್‌ನಲ್ಲಿ ಏಷ್ಯಾ ಪೆಸಿಫಿಕ್ ಪ್ರದೇಶದ ಕಚೇರಿಯು ಕಳೆದ ವರ್ಷ ನವೆಂಬರ್‌ನಲ್ಲಿ ಆರಂಭವಾಯಿತು.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.