Site icon Vistara News

G20 Summit 2023: ಮತ್ತೆ ಅಮೆರಿಕಕ್ಕೆ ಜಿ20 ಅಧ್ಯಕ್ಷತೆ! ಚೀನಾದಿಂದ ತೀವ್ರ ಆಕ್ಷೇಪ

Xi Jinping and Joe Biden

ನವದೆಹಲಿ: 2026ರಲ್ಲಿ ಅಮೆರಿಕವು (America) ಜಿ20 ಶೃಂಗಸಭೆಯನ್ನು (G20 Summit ) ಆಯೋಜಿಸಲು ಮುಂದಾಗಿರುವುದಕ್ಕೆ ಚೀನಾ (China) ಆಕ್ಷೇಪಿಸಿದೆ. ಈ ಕುರಿತು ಈಗಾಗಲೇ ಜೋ ಬೈಡೆನ್ (President Joe Biden) ಆಡಳಿತವು ಬಹಿರಂಗವಾಗಿ ಹೇಳಿದ್ದು, ಚೀನಾ ತನ್ನ ಅಸಮಾಧಾನವನ್ನು ಹೊರ ಹಾಕಿದೆ ಎಂಬ ಸಂಗತಿಯನ್ನು ಈ ಬೆಳವಣಿಗೆ ಗೊತ್ತಿರವವರು ಹೇಳಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.

ಜಿ20 ಸದಸ್ಯರ ನಡುವೆ ಜಿ20 ಅಧ್ಯಕ್ಷತೆಯು ರೊಟೇಟ್ ಆಗುತ್ತದೆ. ಇದರಲ್ಲಿ ವಿಶ್ವ ನಾಯಕರ ವಾರ್ಷಿಕ ಸಭೆಗಳು ಸೇರಿರುತ್ತವೆ. ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ಬಳಿಕ ಜಿ20 ಅಧ್ಯಕ್ಷತೆಯನ್ನು ವಹಿಸಿಕೊಳ್ಳುವುದಾಗಿ ಈಗಾಗಲೇ ಅಮೆರಿಕ ಘೋಷಣೆ ಮಾಡಿದೆ. ಆದರೆ, ಅಮೆರಿಕದ ಈ ನಡೆಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.

ಅಮೆರಿಕ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವ ಚೀನಾಗೆ ರಷ್ಯಾದ ಬೆಂಬಲವಿದೆ. ಒಟ್ಟಾರೆ ಈ ವಿಷಯವು ಇನ್ನು ಆರಂಭಿಕ ಹಂತದಲ್ಲಿರುವುದರಿಂದ ಯಾರೂ ಅಷ್ಟಾಗಿ ಗಂಭೀರವಾಗಿಲ್ಲ ಎಂಬ ಸಂಗತಿಯನ್ನು ಹೊರ ಹಾಕಲಾಗಿದೆ. ಫೈನಾನ್ಶಿಯಲ್ ಟೈಮ್ಸ್ ಈ ಕುರಿತು ಮೊದಲ ಬಾರಿಗೆ ವರದಿ ಮಾಡಿದೆ.

ಅಮೆರಿಕವು ಮತ್ತೆ ಜಿ20 ಅಧ್ಯಕ್ಷತೆಯನ್ನು ವಹಿಸಿಕೊಳ್ಳಬಹುದು ಎಂಬುದಕ್ಕೆ ಚೀನಾ ಆಕ್ಷೇಪದ ಹಿಂದಿರುವ ಕಾರಣಗಳು ಬಹಿರಂಗವಾಗಿಲ್ಲ. 2025ರ ಅಂತ್ಯದ ವೇಳೆಗೆ ಎಲ್ಲಾ ಸದಸ್ಯರು ಕನಿಷ್ಠ ಒಂದು ಶೃಂಗಸಭೆಯನ್ನು ಆಯೋಜಿಸದಂತಾಗಿರುತ್ತದೆ. ಈ ಸರದಿ ಮತ್ತೆ ಪ್ರಾರಂಭವಾಗುವ ಹಂತ ತಲುಪಲಿದೆ. 2008ರಲ್ಲಿ ಅಮೆರಿಕ ಮೊದಲ ಬಾರಿಗೆ ಜಿ20 ಶೃಂಗಸಭೆಯನ್ನು ಆಯೋಜಿಸಿತ್ತು. ಹಾಗಾಗಿ, 2025 ಬಳಿಕ ಅಮೆರಿಕಕ್ಕೆ ಮತ್ತೆ ಅದರ ಸರದಿ ಬರಲಿದೆ.

ಈ ಸುದ್ದಿಯನ್ನೂ ಓದಿ: G20 Summit 2023: ಜಿ20 ವೇಳೆ ಗಮನ ಸೆಳೆದ ಕೊನಾರ್ಕ್‌ ಚಕ್ರ, ಬೈಡೆನ್‌ಗೂ ಪರಿಚಯ ಮಾಡಿದ ಮೋದಿ; ಏನಿದು?

ತೈವಾನ್ ಮೂಲಕದ ತಂತ್ರಜ್ಞಾನ ರಫ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಜತೆಗಿನ ಚೀನಾ ವಿವಾದವೇ ಈ ಚೀನಾ ಆಕ್ಷೇಪಕ್ಕೆ ಕಾರಣವಿರಬಹುದು ಎಂದು ಹೇಳಲಾಗುತ್ತಿದೆ. ದಿಲ್ಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಚೀನಾದ ನಾಯಕ ಕ್ಸಿ ಜಿನ್‌ಪಿಂಗ್ ಅಥವಾ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪಾಲ್ಗೊಂಡಿಲ್ಲ.

ಜಿ20 ಪ್ರಾದೇಶಿಕ ಉಪ-ಗುಂಪುಗಳಾಗಿ ವಿಂಗಡಣೆಯಾಗಿವೆ. ಅದರ ಸದಸ್ಯರು ಶೃಂಗಸಭೆಯನ್ನು ಯಾರು ಆಯೋಜಿಸುತ್ತಾರೆ ಎಂಬುದನ್ನು ನಿರ್ಧರಿಸುತ್ತಾರೆ. ಅಮೆರಿಕ ಕೆನಡಾ, ಆಸ್ಟ್ರೇಲಿಯಾ ಮತ್ತು ಸೌದಿ ಅರೇಬಿಯಾದೊಂದಿಗೆ ಒಂದು ಗುಂಪಿನಲ್ಲಿದೆ. ಚೀನಾದ ಆಕ್ಷೇಪಕ್ಕೆ ಸಂಬಂಧಿಸಿದಂತೆ ಅಮರಿಕ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version