Site icon Vistara News

CAA: ಸಿಎಎ ಜಾರಿ ಬಗ್ಗೆ ಅಮೆರಿಕದ ಗಾಯಕಿಯ ಸ್ಪಷ್ಟ ಮಾತು; ಆಕೆ ಹೇಳಿದ್ದೇನು?

Mary Millben PM Narendra Modi

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಕೇಂದ್ರ ಸರ್ಕಾರ ಸೋಮವಾರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ- CAA) ಅನುಷ್ಠಾನವನ್ನು ಘೋಷಿಸಿದ್ದು, ಇದು ಜಾಗತಿಕ ಗಮನ ಸೆಳೆದಿದೆ. ಅಮೇರಿಕನ್ ಗಾಯಕಿ ಮತ್ತು ಖ್ಯಾತ ನಟಿ ಮೇರಿ ಮಿಲ್ಬೆನ್ (Mary Millben) ಕೂಡ ಸಿಎಎ ಅನುಷ್ಠಾನದ ಬಗ್ಗೆ ಪಿಎಂ ನರೇಂದ್ರ ಮೋದಿ (PM Narendra Modi) ಮತ್ತು ಭಾರತ ಸರ್ಕಾರವನ್ನು ಶ್ಲಾಘಿಸಿದ್ದಾರೆ. ಇದು “ಶಾಂತಿಯ ಹಾದಿ ಮತ್ತು ಪ್ರಜಾಪ್ರಭುತ್ವದ ನಿಜವಾದ ಕೆಲಸ” ಎಂದು ಹೇಳಿದ್ದಾರೆ.

“ನಾನು ಕ್ರಿಶ್ಚಿಯನ್ ನಂಬಿಕೆಯ ಮಹಿಳೆಯಾಗಿ, ಜಾಗತಿಕವಾಗಿ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ವಾದಿಸುವವಳಾಗಿ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾಗಿ ಬಂದ ಮುಸ್ಲಿಮೇತರ ವಲಸಿಗರು, ಕ್ರಿಶ್ಚಿಯನ್ನರು, ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ರಾಷ್ಟ್ರೀಯತೆಯನ್ನು ನೀಡುವ ಪೌರತ್ವ (ತಿದ್ದುಪಡಿ) ಕಾಯ್ದೆಯ ಅನುಷ್ಠಾನವನ್ನು ನಾನು ಸ್ವಾಗತಿಸುತ್ತೇನೆ. ಇದಕ್ಕಾಗಿ ಮೋದಿ ನೇತೃತ್ವದ ಸರ್ಕಾರವನ್ನು ಶ್ಲಾಘಿಸುತ್ತೇನೆ” ಎಂದು ಮಿಲ್ಬೆನ್ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಸಿಎಎ ಅಧಿಸೂಚನೆಯ ಪ್ರಕಾರ, ಈ ಕಾಯಿದೆಯು ಈ ವಲಸಿಗರಿಗೆ ಭಾರತದಲ್ಲಿ ಪುನರ್ವಸತಿ ಮತ್ತು ಪೌರತ್ವಕ್ಕೆ ಇರುವ ಕಾನೂನು ಅಡೆತಡೆಗಳನ್ನು ತೆಗೆದುಹಾಕುತ್ತದೆ ಮತ್ತು ದಶಕಗಳಿಂದ ಬಳಲುತ್ತಿರುವ ನಿರಾಶ್ರಿತರಿಗೆ ಗೌರವಯುತ ಜೀವನವನ್ನು ನೀಡುತ್ತದೆ. ಪೌರತ್ವ ಹಕ್ಕುಗಳು ಅವರ ಸಾಂಸ್ಕೃತಿಕ, ಭಾಷಿಕ ಮತ್ತು ಸಾಮಾಜಿಕ ಗುರುತನ್ನು ರಕ್ಷಿಸುತ್ತದೆ. ಇದು ಆರ್ಥಿಕ, ವಾಣಿಜ್ಯ, ಮುಕ್ತ ಓಡಾಟ ಮತ್ತು ಆಸ್ತಿ ಖರೀದಿ ಹಕ್ಕುಗಳನ್ನು ಸಹ ಖಚಿತಪಡಿಸುತ್ತದೆ.

ಮಿಲ್‌ಬೆನ್ ಅವರು ಪಿಎಂ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಭಾರತ ಸರ್ಕಾರಕ್ಕೆ ಅವರ “ಕರುಣಾಮಯಿ ನಾಯಕತ್ವಕ್ಕಾಗಿ ಮತ್ತು ಮುಖ್ಯವಾಗಿ ಕಿರುಕುಳಕ್ಕೊಳಗಾದವರಿಗೆ ನೆಲೆ ನೀಡಿ, ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿದಿದ್ದಕ್ಕಾಗಿ” ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ.

ಆಫ್ರಿಕನ್-ಅಮೆರಿಕನ್ ಹಿನ್ನೆಲೆಯ ಗಾಯಕಿಯಾಗಿರುವ ಮೇರಿ ಮಿಲ್ಬೆನ್ ಅವರು ಇತ್ತೀಚೆಗೆ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ ವೇಳೆ ಬಾಗಿ ಮೋದಿಯವರ ಪಾದಗಳನ್ನು ಸ್ಪರ್ಶಿಸಿದ್ದರು. ಮತ್ತು ಭಾರತದ ರಾಷ್ಟ್ರಗೀತೆ ʼಜನ ಗಣ ಮನʼವನ್ನು ಹಾಡಿದ್ದರು. ಆ ಮೂಲಕ ಸುದ್ದಿಯಾಗಿದ್ದರಲ್ಲದೆ, ಮೋದಿವಿರೋಧಿಗಳ ಹುಬ್ಬೇರುವಂತೆ ಮಾಡಿದ್ದರು.

ಇದರ ಬಳಿಕ ಖಾಸಗಿ ಸುದ್ದಿಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ತಾನೇಕೆ ಮೋದಿಯವರ ಪಾದ ಸ್ಪರ್ಶಿಸಿದೆ ಮತ್ತಿತರ ವಿಚಾರಗಳನ್ನು ಮನ ಬಿಚ್ಚಿ ಮಾತನಾಡಿದ್ದರು. “ಭಾರತೀಯ ಮುಸ್ಲಿಮರನ್ನು ಮೋದಿ ಆಡಳಿತ ಕೆಟ್ಟದಾಗಿ ನಡೆಸಿಕೊಳ್ಳುತ್ತದೆ” ಎಂಬರ್ಥದಲ್ಲಿ ಮಾಜಿ ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ ನೀಡಿದ್ದ ಹೇಳಿಕೆಯನ್ನು ಮಿಲ್ಬೆನ್‌ ಬಲವಾಗಿ ಟೀಕಿಸಿದ್ದರು.

ಇದನ್ನೂ ಓದಿ: PM Narendra Modi: ನಾನೇಕೆ ನರೇಂದ್ರ ಮೋದಿಯವರ ಪಾದ ಸ್ಪರ್ಶಿಸಿದೆ? ಅಮೆರಿಕನ್‌ ಗಾಯಕಿ ಮೇರಿ ಮಿಲ್ಬೆನ್ ಸಂದರ್ಶನ

Exit mobile version