Site icon Vistara News

ಅಮೃತ್‌ಪಾಲ್‌ ಬಂಧನಕ್ಕೆ ಶೋಧ; ಬ್ರಿಟನ್‌ನಲ್ಲಿ ಭಾರತದ ಹೈಕಮಿಷನ್‌ ಮೇಲೆ ಖಲಿಸ್ತಾನಿಗಳ ದಾಳಿ, ತಿರಂಗಾ ತೆರವು

Amritpal Singh Case: Khalistanis attack Indian High Commission in UK, take down Tricolor

Amritpal Singh Case: Khalistanis attack Indian High Commission in UK, take down Tricolor

ಲಂಡನ್‌: ಖಲಿಸ್ತಾನಿಗಳ ನಾಯಕ, ಪಂಜಾಬ್‌ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದ ಅಮೃತ್​ಪಾಲ್​ ಸಿಂಗ್​ (Amritpal Singh) ಬಂಧನವಾಗಿಲ್ಲ. ಆತನ ಪತ್ತೆಗಾಗಿ ಪಂಜಾಬ್‌ ಪೊಲೀಸರು ಕಾರ್ಯಾಚರಣೆ ನಡೆಸುತ್ತಲೇ ಇದ್ದಾರೆ. ಕಳೆದ ಎರಡು ದಿನದಿಂದಲೂ ಅಮೃತ್‌ಪಾಲ್‌ ಸಿಂಗ್‌ನನ್ನು ಚೇಸ್‌ ಮಾಡುತ್ತಲೇ ಇದ್ದಾರೆ. ಇದರ ಬೆನ್ನಲ್ಲೇ, ಬ್ರಿಟನ್‌ನಲ್ಲಿ ಖಲಿಸ್ತಾನಿಗಳು ಬ್ರಿಟನ್‌ನಲ್ಲಿರುವ ಭಾರತದ ಹೈಕಮಿಷನ್‌ ಮೇಲೆ ದಾಳಿ (Khalistanis Attack) ನಡೆಸಿದ್ದಾರೆ. ಅಮೃತ್‌ಪಾಲ್‌ ಸಿಂಗ್‌ ಬಂಧನಕ್ಕೆ ಕಾರ್ಯಚರಣೆ ಕೈಗೊಂಡಿರುವುದಕ್ಕೆ ಪ್ರತಿಯಾಗಿ ಖಲಿಸ್ತಾನ್‌ ಉಗ್ರರು ಇಂತಹ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ ಕಚೇರಿಗೆ ನುಗ್ಗಿದ ಖಲಿಸ್ತಾನಿಗಳು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ಹಾಗೆಯೇ, ಉಗ್ರರಲ್ಲಿ ಒಬ್ಬ ಹೈಕಮಿಷನ್‌ ಕಚೇರಿ ಮೇಲೇರಿ, ಭಾರತದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ್ದಾನೆ. ಅಮೃತ್‌ಪಾಲ್‌ ಸಿಂಗ್‌ಗಾಗಿ ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದಕ್ಕೆ ಸೇಡಿನ ಕ್ರಮವಾಗಿ ಖಲಿಸ್ತಾನದ ಉಗ್ರರು ಇಂತಹ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಹೈಕಮಿಷನ್‌ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿರುವ ವಿಡಿಯೊಗಳು ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಇಲ್ಲಿವೆ ಖಲಿಸ್ತಾನಿಗಳ ಕೃತ್ಯದ ವಿಡಿಯೊಗಳು

ದಾಳಿಯನ್ನು ಖಂಡಿಸಿದ ಬ್ರಿಟನ್‌

ಲಂಡನ್‌ನಲ್ಲಿರುವ ಭಾರತದ ಹೈಕಮಿಷನ್‌ ಮೇಲೆ ಖಲಿಸ್ತಾನಿಗಳು ದಾಳಿ ಮಾಡಿರುವುದನ್ನು ಬ್ರಿಟನ್‌ ಖಂಡಿಸಿದೆ. “ಭಾರತದ ಹೈಕಮಿಷನ್‌ ಮೇಲೆ ದಾಳಿ ನಡೆದಿರುವುದು ಖಂಡನೀಯ. ಕಚೇರಿಯ ಆವರಣದಲ್ಲಿ ದುಷ್ಕರ್ಮಿಗಳು ಕೈಗೊಂಡ ಚಟುವಟಿಕೆಗಳನ್ನು ಖಂಡಿಸುತ್ತೇವೆ. ಯಾವುದೇ ಕಾರಣಕ್ಕೂ ಇಂತಹ ಕೃತ್ಯಗಳನ್ನು ನಾವು ಸಹಿಸುವುದಿಲ್ಲ” ಎಂಬುದಾಗಿ ಭಾರತದಲ್ಲಿರುವ ಬ್ರಿಟನ್‌ ಹೈಕಮಿಷನರ್‌ ಅಲೆಕ್ಸ್‌ ಎಲ್ಲಿಸ್‌ ಹೇಳಿದ್ದಾರೆ.

ತಿರಂಗಾ ಇಳಿಸಿದ ಉಗ್ರರು

ಸಮನ್ಸ್‌ ಜಾರಿಗೊಳಿಸಿದ ಭಾರತ

“ಭಾರತದ ಹೈಕಮಿಷನ್‌ ಕಚೇರಿ ಮೇಲಿನ ದಾಳಿಗೆ ಭಾರತ ಆಕ್ರೋಶ ವ್ಯಕ್ತಪಡಿಸಿದೆ. ಹಾಗೆಯೇ, ದೆಹಲಿಯಲ್ಲಿರುವ ಬ್ರಿಟನ್‌ ರಾಯಭಾರಿಗೆ ಸಮನ್ಸ್‌ ಜಾರಿಗೊಳಿಸಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ. ಹಾಗೆಯೇ, ದಾಳಿ ಮಾಡಿದ ಖಲಿಸ್ತಾನಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿಯೂ ಆಗ್ರಹಿಸಿದೆ ಎಂದು ತಿಳಿದುಬಂದಿದೆ.

ಪಾಕಿಸ್ತಾನದ ಐಎಸ್​ಐ ಏಜೆಂಟ್​ ಆಗಿದ್ದುಕೊಂಡು ಭಾರತದಲ್ಲಿ ಸಿಖ್​ ಧರ್ಮದ ಯುವಕರನ್ನು ಖಲಿಸ್ತಾನಿ ಚಳುವಳಿಗೆ ಸೆಳೆಯುತ್ತ, ಹಿಂಸಾಚಾರ ಹುಟ್ಟುಹಾಕುತ್ತಿದ್ದ ಅಮೃತ್​ಪಾಲ್​ ಸಿಂಗ್​ ಈಗ ಇನ್ನಿತರ ಕೆಲವು ಉಗ್ರರೊಂದಿಗೆ ಸೇರಿಕೊಂಡು ದೆಹಲಿಯಲ್ಲಿ ಪ್ರಮುಖ ರಾಜಕೀಯ ವ್ಯಕ್ತಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ. ಈ ವಿಚಾರ ಗುಪ್ತಚರ ಇಲಾಖೆಗೆ ಗೊತ್ತಾಗುತ್ತಿದ್ದಂತೆ, ಪೊಲೀಸ್ ಕಾರ್ಯಾಚರಣೆ ಚುರುಕುಗೊಂಡಿದೆ. ಮಾ.18ರಂದು ಅಮೃತ್​ಪಾಲ್ ಬಂಧನದ ಸುದ್ದಿ ಬಂತಾದರೂ, ಬಳಿಕ ಪೊಲೀಸರು ಪ್ರಕಟಣೆ ಹೊರಡಿಸಿ ಆತ ತಪ್ಪಿಸಿಕೊಂಡಿದ್ದಾಗಿ ಹೇಳಿದ್ದಾರೆ. ಅಮೃತ್​ಪಾಲ್​ಗಾಗಿ ಶೋಧ ಮುಂದುವರಿದಿದೆ.

ಇದನ್ನೂ ಓದಿ: ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯಿಗೂ ಅಮೃತ್​ಪಾಲ್‌ಗೂ ಏಕೆ ದ್ವೇಷ?; ಪಾಲ್‌ ಸಹಚರ ಹೇಳಿದ್ದೇನು?

Exit mobile version