Site icon Vistara News

Apple Benefits: ಬಂದೇ ಬಿಡ್ತು ಸೇಬಿನ ಕಾಲ: ಬಗೆಬಗೆಯ ಸೇಬು ಕೊಳ್ಳುವ ಮುನ್ನ ಇವಿಷ್ಟು ನಿಮಗೆ ತಿಳಿದಿರಲಿ!

apple eating

ಹೇಳಿ ಕೇಳಿ ಇನ್ನು ಸೇಬಿನ (Apple season) ಕಾಲ. ಹಿಮಾಲಯ ಪರ್ವತದ ತಪ್ಪಲ ಊರುಗಳಲ್ಲಿ, ಕಾಶ್ಮೀರದ ಕಣಿವೆಗಳಲ್ಲಿ ಸೇಬು ಬೆಳೆಯುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಈ ಎಲ್ಲ ಸೇಬೂ ಕೂಡಾ ಒಂದೇ ಬಗೆಯದಲ್ಲ. ಪ್ರತಿ ಊರಿನ ಸೇಬೂ ಕೂಡಾ ತನ್ನತನವನ್ನು ಹೊತ್ತುಕೊಂಡೇ ಬರುತ್ತದೆ. ಕಾಶ್ಮೀರದ (Kashmir apple) ಮಂದಿ ನಮ್ಮ ಸೇಬೇ ಭಾರತದಲ್ಲಿ ಎಲ್ಲಕ್ಕಿಂತ ಶ್ರೇಷ್ಠ ಎಂದು ಹೇಳಿಕೊಂಡರೂ, ಸಾಮಾನ್ಯವಾಗಿ ಭಾರತದಲ್ಲಿ ಆರು ಬಗೆಯ ಸೇಬು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಪ್ರತಿಯೊಂದೂ ಕೂಡಾ ತನ್ನದೇ ಆದ ವಿಶೇಷವಾದ ಆರೋಗ್ಯಕರ ಲಾಭಗಳನ್ನು (Apple benefits, Apple health benefits) ಹೊತ್ತಿರುವುದಷ್ಟೇ ಅಲ್ಲ, ರುಚಿಯಲ್ಲೂ ವಿಶೇಷತೆಯನ್ನು ಹೊಂದಿದೆ. ಬನ್ನಿ, ಕಣ್ಣುಮುಚ್ಚಿ ಸೇಬು ಕೊಳ್ಳುವ ಮುನ್ನ ನಮ್ಮ ದೇಶದ ಬಗೆಬಗೆಯ ಸೇಬಿನ ವಿಶೇಷತೆಗಳನ್ನು ತಿಳಿಯೋಣ.

1. ಶಿಮ್ಲಾ ಸೇಬು: ಹಿಮಾಚಲ ಪ್ರದೇಶದ ಶಿಮ್ಲಾ ಸುತ್ತಮುತ್ತಲ ಊರುಗಳಲ್ಲಿ ಅಂದರೆ ಸಮುದ್ರ ಮಟ್ಟದಿಂದ ಸುಮಾರು ಆರು ಸಾವಿರ ಅಡಿಗಳಷ್ಟು ಎತ್ತರದ ಪ್ರದೇಶದಲ್ಲಿ ಬೆಳೆಯುವ ಈ ಶಿಮ್ಲಾ ಸೇಬು (Shimla apple) ತನ್ನ ಅಪರೂಪದ ರುಚಿಯಿಂದಲೇ ಜನಮಾನಸವನ್ನು ಗೆದ್ದಿದೆ. ಇದು ತಾಜಾ ಇದ್ದಾಗ ಗರಿಗರಿಯಾಗಿ ಇರುವುದು ಇದರ ವಿಶೇಷ. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ರೋಗನಿರೋಧಕ ಶಕ್ತಿಯನ್ನು (immunity) ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಿಟಮಿನ್‌ ಸಿ ಇದರಲ್ಲಿ ಹೇರಳವಾಗಿದ್ದು ನಾರಿನಂಶವೂ ಇದೆ. ಆಂಟಿ ಆಕ್ಸಿಡೆಂಟ್‌ಗಳೂ ಇರುವುದರಿಂದ ಶೀತ, ನೆಗಡಿಯಂತ ಇನ್‌ಫೆಕ್ಷನ್‌ಗಳಿಂದ ದೇಹವನ್ನು ರಕ್ಷಿಸುತ್ತದೆ. ಸಲಾಡ್‌ಗಳಲ್ಲಿ ಈ ಸೇಬನ್ನು ಸೇರಿಸಿದರೆ ರುಚಿ ಹೆಚ್ಚು.

2. ಕಾಶ್ಮೀರದ ಸೇಬು: ಕಾಶ್ಮೀರದಲ್ಲಿ ಬೆಳೆಯುವ ಸೇಬು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಇದು ಸಿಹಿಯಾಗಿ, ಹೆಚ್ಚು ರಸಭರಿತವಾಗಿ ಸ್ವಲ್ಪ ಮೆತ್ತಗೆ ಇರುತ್ತದೆ. ಬೇರೆ ಸೇಬಿಗೆ ಹೋಲಿಸಿದರೆ, ಕೆಂಪು ಬಣ್ಣ ಕೊಂಚ ಲೈಟ್‌ ಆಗಿರುತ್ತದೆ. ಕಾಶ್ಮೀರದ ಸೇಬು, ಹೃದಯಸ್ನೇಹಿ, ಕೊಲೆಸ್ಟೆರಾಲ್‌ ಕಡಿಮೆಗೊಳಿಸಲು, ಶ್ವಾಸಕೋಶದ ಆರೋಗ್ಯಕ್ಕೆ ಹಾಗೂ ರೋಗ ನಿರೋಧಕತೆಗೆ ಒಳ್ಳೆಯದು. ಕೂದಲು ಹಾಗೂ ಚರ್ಮದ ಹೊಳಪಿಗೂ ಇದು ಅತ್ಯುತ್ತಮ ಸೇಬು.

3. ಕಿನೌರ್‌ ಸೇಬು: ಹಿಮಾಚಲ ಪ್ರದೇಶದಲ್ಲಿ ಸುಮಾರು ಒಂಬತ್ತು ಸಾವಿರ ಅಡಿ ಎತ್ತರದ ಕಿನೌರ್‌ (Kinnaur apple) ಪ್ರಾಂತ್ಯದಲ್ಲಿ ಬೆಳೆಯುವ ಸೇಬಿದು. ಇದು ಗಾಢ ಕೆಂಪು ಬಣ್ಣ ಹೊಂದಿದ್ದು, ಗರಿಗರಿಯಾಗಿರುತ್ತದೆ. ಕಾಶ್ಮೀರದ ಸೇಬಿನ ಹಾಗೆ ಮೆದುವಾಗಿರುವುದಿಲ್ಲ. ಆದರೆ ಸಿಹಿಯಾಗಿರುತ್ತದೆ. ಇದರಲ್ಲಿ ಹೇರಳವಾಗಿ ವಿಟಮಿನ್‌ ಸಿ ಇದ್ದು, ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳೂ ಇವೆ. ರೋಗನಿರೋಧಕತೆಗೆ, ಜೀರ್ಣಕ್ರಿಯೆಗೆ ಹಾಗೂ ತೂಕ ಸಮತೋಲನದಲ್ಲಿಡಲು ಇದು ಸಹಾಯ ಮಾಡುತ್ತದೆ.

4. ಇಂಡಿಯನ್‌ ಗ್ರಾನಿ ಸೇಬು: ಹಿಮಾಚಲ ಹಾಗೂ ಕಾಶ್ಮೀರದ ಸುಮಾರು ಏಳು ಸಾವಿರ ಅಡಿ ಎತ್ತರದ ಪ್ರದೇಶಗಳಲ್ಲಿ ಬೆಳೆಯುವ ಈ ಸೇಬು (Indian granny apple) ಹಣ್ಣಾದಾಗ ಪೂರ್ತಿ ಕೆಂಪಗಿರುವುದಿಲ್ಲ. ಅಲ್ಲಲ್ಲಿ ಹಸಿರು ಬಣ್ಣವನ್ನೂ ಹೊಂದಿರುತ್ತದೆ. ಸ್ವಲ್ಪ ಹುಳಿ ರುಚಿಯ ಗರಿಗರಿ ಸೇಬು ಇದು. ಇದರಲ್ಲಿ ವಿಟಮಿನ್‌ ಸಿ ಹಾಗೂ ಪೊಟಾಶಿಯಂ ಹೇರಳವಾಗಿರುತ್ತವೆ. ಹೃದಯದ ಆರೋಗ್ಯಕ್ಕೆ ಇದು ಉತ್ತಮ. ತೂಕ ಸಮತೋಲನಕ್ಕೆ, ಪಾರ್ಶ್ವವಾಯುವಿನಂತ ಸಮಸ್ಯೆ ಬರದಂತೆ ಇದು ಒಳ್ಳೆಯದು.

5. ಗೋಲ್ಡನ್‌ ಸೇಬು: ಹಸಿರು ಹಳದಿ ಬಣ್ಣದಲ್ಲಿ (golden apple) ಲಕಲಕನೆ ಹೊಳೆವ ಸೇಬಿದು. ಕಾಶ್ಮೀರದಲ್ಲಿ ಬೆಳೆಯುವ ಇದು, ಹಣ್ಣಾಗುವಾಗ ಹಸಿರು ಬಣ್ಣದಿಂದ ತೆಳುವಾದ ಹೊಂಬಣ್ಣಕ್ಕೆ ತಿರುಗುವುದರಿಂದ ಇದಕ್ಕೆ ಗೋಲ್ಡನ್‌ ಸೇಬು ಎಂದೇ ಹೆಸರು. ಬಹಳ ಸಿಹಿಯಾಗಿರುವ ಈ ಸೇಬು ಒಳ್ಳೆಯ ಶಕ್ತಿವರ್ಧಕ. ಮಧುಮೇಹಿಗಳಿಗೂ ಉತ್ತಮ. ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

6. ರಾಯಲ್‌ ಗಾಲಾ ಸೇಬು: ತೆಳುವಾದ ಪಿಂಕ್‌ ಬಣ್ಣ ಹೊಂದಿರುವ ಈ ಸೇಬು (Royal Gala apple) ರಸಭರಿತವಾಗಿರುತ್ತದೆ. ಇದೂ ಕೂಡಾ ಕಾಶ್ಮೀರದಲ್ಲಿಯೇ ಬೆಳೆಯುವ ಮತ್ತೊಂದು ಬಗೆ. ಇದರಲ್ಲಿ ಪೊಟಾಶಿಯಂ ಹೇರಳವಾಗಿದ್ದು, ಅಧಿಕ ರಕ್ತದೊತ್ತಡಕ್ಕೆ ಒಳ್ಳೆಯದು.

ಇದನ್ನೂ ಓದಿ: Custard Apple Benefits: ಕ್ಯಾನ್ಸರ್‌ ನಿರೋಧಕ ಗುಣವಿರುವ ಸೀತಾಫಲದಿಂದ ಎಷ್ಟೊಂದು ಆರೋಗ್ಯ ಲಾಭ!

Exit mobile version