ನವದೆಹಲಿ: ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಸೇರಿದಂತೆ ಹಲವು ಸಿಖ್ ಪ್ರತ್ಯೇಕತಾವಾದಿಗಳ (Sikh separatists) ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ನವದೆಹಲಿ ಏಪ್ರಿಲ್‌ನಲ್ಲಿ ರಹಸ್ಯ ಮೆಮೋ ಹೊರಡಿಸಿದೆ ಎಂದು ಹೇಳಲಾದ ಮಾಧ್ಯಮ ವರದಿಯನ್ನು ಕೇಂದ್ರ ಸರ್ಕಾರ ಭಾನುವಾರ ʼನಕಲಿ ಮತ್ತು ಸತ್ಯಕ್ಕೆ ದೂರವಾದುದುʼ ಎಂದು ಸ್ಪಷ್ಟಪಡಿಸಿದೆ.
ಭಾರತದ ವಿರುದ್ಧದ ನಿರಂತರ ತಪ್ಪು ಮಾಹಿತಿ ಅಭಿಯಾನದ ಭಾಗವಾಗಿ ಈ ಸುದ್ದಿಯನ್ನು ಹರಡಲಾಗಿದೆ ಮತ್ತು ಇದು ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಹೂಡಿದ ಸಂಚಿನ ಭಾಗ ಎಂದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ (Arindam Bagchi) ಹೇಳಿದ್ದಾರೆ. ಅಮೆರಿಕದ ಆನ್‌ಲೈನ್ ಮಾಧ್ಯಮ ಸಂಸ್ಥೆ ʼದಿ ಇಂಟರ್ ಸೆಪ್ಟ್ʼ ಈ ವರದಿಯನ್ನು ಪ್ರಕಟಿಸಿತ್ತು.
Our response to media queries on reports of MEA "secret memo" in April 2023:https://t.co/LcHTl5HUpf pic.twitter.com/7ilEyqkVDX
— Arindam Bagchi (@MEAIndia) December 10, 2023
ಅರಿಂದಮ್ ಬಾಗ್ಚಿ ಹೇಳಿದ್ದೇನು?
“ಇಂತಹ ವರದಿಗಳು ನಕಲಿ ಮತ್ತು ಸಂಪೂರ್ಣವಾಗಿ ಕಪೋಲಕಲ್ಪಿತ ಎಂದು ನಾವು ಬಲವಾಗಿ ಪ್ರತಿಪಾದಿಸುತ್ತೇವೆ. ಅಂತಹ ಯಾವುದೇ ಮೆಮೊ ಹೊರಡಿಸಿಲ್ಲ. ಇದು ಭಾರತದ ವಿರುದ್ಧ ನಿರಂತರ ತಪ್ಪು ಮಾಹಿತಿ ಹರಡುವ ಅಭಿಯಾನದ ಭಾಗ. ಪಾಕಿಸ್ತಾನದ ಗುಪ್ತಚರರು ಹರಡುವ ನಕಲಿ ಸುದ್ದಿಗಳನ್ನು ಪ್ರಚಾರ ಮಾಡಲು ʼದಿ ಇಂಟರ್ ಸೆಪ್ಟ್ʼ ಸಂಸ್ಥೆ ಹೆಸರುವಾಸಿ. ಈ ಹಿಂದಿನ ಪೋಸ್ಟ್‌ಗಳು ಇದನ್ನು ದೃಢಪಡಿಸುತ್ತವೆ” ಎಂದು ಅರಿಂದಮ್ ಬಾಗ್ಚಿ ಹೇಳಿದರು.
ಜೂನ್ 18ರಂದು ಕೆನಡಾದಲ್ಲಿ ನಡೆದ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರು ಭಾಗಿಯಾಗಿದ್ದಾರೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪಿಸಿದ್ದರು. ಭಾರತವು ಈ ಆರೋಪಗಳನ್ನು ಬಲವಾಗಿ ತಿರಸ್ಕರಿಸಿ, ಆರೋಪವನ್ನು ʼಅಸಂಬದ್ಧʼ ಎಂದು ಕರೆದಿತ್ತು. ಪಾಶ್ಚಿಮಾತ್ಯ ದೇಶಗಳಲ್ಲಿನ ಕೆಲವು ಸಿಖ್ ಘಟಕಗಳ ವಿರುದ್ಧ ʼಕಠಿಣ ಕ್ರಮʼಗಳನ್ನು ಕೈಗೊಳ್ಳುವಂತೆ ಭಾರತ ಸರ್ಕಾರ ಸೂಚನೆಗಳನ್ನು ನೀಡಿದೆ ಎಂದು ಇಂಟರ್ಸೆಪ್ಟ್ ತನ್ನ ವರದಿಯಲ್ಲಿ ಹೇಳಿಕೊಂಡಿತ್ತು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಏಪ್ರಿಲ್‌ನಲ್ಲಿ ಹೊರಡಿಸಿದ ರಹಸ್ಯ ಜ್ಞಾಪಕ ಪತ್ರದಲ್ಲಿ ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಸೇರಿದಂತೆ ಹಲವು ಸಿಖ್ ನಾಯಕರ ಪಟ್ಟಿಯನ್ನು ತಯಾರಿಸಿದೆ ಎಂದು ಹೇಳಿತ್ತು.
ಜಸ್ಟಿನ್ ಟ್ರುಡೋ ಹೇಳಿದ್ದೇನು?
ಜೂನ್ 18ರಂದು ಕೆನಡಾದಲ್ಲಿ ಹತ್ಯೆಗೀಡಾದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡ ಇದೆ, ಭಾರತದ ಏಜೆಂಟರೇ ಹತ್ಯೆ ಮಾಡಿದ್ದಾರೆ ಎಂದು ಜಸ್ಟಿನ್ ಟ್ರುಡೋ ಆರೋಪಿಸಿದ್ದರು. ಆದರೆ ಅವರು ಸುದ್ದಿಗೋಷ್ಠಿ ನಡೆಸುವ ವೇಳೆ ಭಾರತದ ವಿರುದ್ಧದ ಆರೋಪಗಳಿಗೆ ಸಾಕ್ಷ್ಯ ಇದೆಯೇ ಎಂಬ ಕುರಿತು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿದ್ದರು. “ಭಾರತದ ವಿರುದ್ಧ ಆರೋಪ ಮಾಡಲು ಬಲವಾದ ಹಾಗೂ ವಿಶ್ವಾಸಾರ್ಹ ಕಾರಣಗಳಿವೆ” ಎಂದು ಜಸ್ಟಿನ್ ಟ್ರುಡೋ ಹೇಳಿದ್ದರೂ ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ ಹಾಗೂ ಇವೆ ಎಂದು ಕೂಡ ಉತ್ತರಿಸಿರಲಿಲ್ಲ. “ಕೆನಡಾ ನಾಗರಿಕರ ಹಕ್ಕುಗಳನ್ನು ಹಾಗೂ ದೇಶದ ಮೌಲ್ಯಗಳನ್ನು ರಕ್ಷಿಸುವುದು ನನ್ನ ಕರ್ತವ್ಯವಾಗಿದೆ” ಎಂದು ಅವರು ಹೇಳಿದ್ದರು. ಆದರೆ ಅವರು ಭಾರತಕ್ಕೆ ಪ್ರಚೋದನೆ ನೀಡುವುದಿಲ್ಲ ಎಂದು ಹೇಳುತ್ತಲೇ ಇಂತಹ ಆರೋಪ ಮಾಡಿದ್ದರು.
ಇದನ್ನೂ ಓದಿ: ರಜಪೂತ ನಾಯಕನ ಹತ್ಯೆ ಸಂಚು ನಡೆದಿದ್ದು ಕೆನಡಾದಲ್ಲಿ; ಇದರ ಹಿಂದೆ ಇರೋದು ಯಾರು?