ಶ್ರೀನಗರ: 2016ರಲ್ಲಿ ಪಾಕಿಸ್ತಾನ ಉಗ್ರರ ಮೇಲೆ ಭಾರತೀಯ ಸೈನಿಕರು ನಡೆಸಿದ ಸರ್ಜಿಕಲ್ ಸ್ಟ್ರೈಕ್ (Surgical Strike) ಬಗ್ಗೆ ಸಾಕ್ಷ್ಯ ಕೇಳಿದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಸ್ವಪಕ್ಷದಲ್ಲೇ ಆಕ್ರೋಶ ವ್ಯಕ್ತವಾಗಿದೆ. “ದಿಗ್ವಿಜಯ್ ಹೇಳಿಕೆಗೂ, ಕಾಂಗ್ರೆಸ್‌ಗೂ ಸಂಬಂಧವಿಲ್ಲ” ಎಂದು ಎಐಸಿಸಿ ಸಂವಹನ ವಿಭಾಗದ ಉಸ್ತುವಾರಿ ಜೈರಾಮ್ ರಮೇಶ್ ಹೇಳಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೂ ಸ್ವಪಕ್ಷದ ನಾಯಕನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ದಿಗ್ವಿಜಯ್ ಸಿಂಗ್ ಅವರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ನಾನು ಇದನ್ನು ಖಡಾಖಂಡಿತವಾಗಿ ತಿರಸ್ಕರಿಸುತ್ತೇನೆ. ಭಾರತದ ಸೇನೆಯು ಯಾವುದೇ ಸಾಕ್ಷ್ಯ ನೀಡಬೇಕಿಲ್ಲ. ಇದು ಕಾಂಗ್ರೆಸ್ ಪಕ್ಷದ ಸದೃಢ ನಿಲುವು” ಎಂದು ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮಧ್ಯೆಯೇ ಸ್ಪಷ್ಟಪಡಿಸಿದ್ದಾರೆ.
ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆ ಮಧ್ಯೆಯೇ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ದಿಗ್ವಿಜಯ್ ಸಿಂಗ್, “ಕೇಂದ್ರ ಸರ್ಕಾರವು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತನಾಡುತ್ತದೆ. ದಾಳಿಯಲ್ಲಿ ಹೆಚ್ಚಿನ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳುತ್ತದೆ. ಆದರೆ, ಇದುವರೆಗೆ ಸಾಕ್ಷ್ಯ ನೀಡಿಲ್ಲ. ಕೇಂದ್ರ ಸರ್ಕಾರವು ಸುಳ್ಳುಗಳ ಸರಮಾಲೆಯನ್ನೇ ಹೆಣೆದು ಆಡಳಿತ ನಡೆಸುತ್ತಿದೆ” ಎಂದು ಹೇಳಿದ್ದರು. ಇದಕ್ಕೆ ಬಿಜೆಪಿ ಕೂಡ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: Surgical Strike: ನಿರ್ದಿಷ್ಟ ದಾಳಿ ಸಾಕ್ಷ್ಯ ಕೇಳಿದ ದಿಗ್ವಿಜಯ್ ಸಿಂಗ್, ಬಿಜೆಪಿ ಆಕ್ರೋಶ, ಅಂತರ ಕಾಯ್ದುಕೊಂಡ ಕಾಂಗ್ರೆಸ್