ಹೊಸದಿಲ್ಲಿ: ಜಮ್ಮು ಕಾಶ್ಮೀರದಲ್ಲಿ (Jammu & Kashmir) ಆರ್ಟಿಕಲ್ 370 (Article 370) ಅನ್ನು ರದ್ದುಪಡಿಸಿರುವ ಸರ್ಕಾರದ ಕ್ರಮವನ್ನು ಎತ್ತಿಹಿಡಿಯುವ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾ.ಸಂಜಯ್ ಕಿಶನ್ ಕೌಲ್, ನ್ಯಾ.ಸಂಜೀವ್ ಖನ್ನಾ, ನ್ಯಾ. ಭೂಷಣ್ ರಾಮಕೃಷ್ಣ ಗವಾಯಿ, ನ್ಯಾ. ಸೂರ್ಯಕಾಂತ್ ಅವರಿದ್ದ ಪಂಚಸದಸ್ಯ ಪೀಠದಿಂದ ಕೋರ್ಟ್ ಬಂದಿದ್ದು, ಮೂವರು ನ್ಯಾಯಾಧೀಶರು ಪ್ರತ್ಯೇಕವಾಗಿ ತಮ್ಮ ತೀರ್ಪುಗಳನ್ನು ಓದಿದ್ದಾರೆ. ಯಾವ ನ್ಯಾಯಾಧೀಶರು ಏನೆಂದರು ಎಂಬ ವಿವರ ಇಲ್ಲಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್
(ನ್ಯಾ. ಗವಾಯಿ, ನ್ಯಾ. ಸೂರ್ಯಕಾಂತ್ ಅವರನ್ನೂ ಸೇರಿಸಿಕೊಂಡು)
- ರಾಷ್ಟ್ರಪತಿಗಳ ಆದೇಶದ ಬಗ್ಗೆ ಪೀಠ ಏನೂ ಹೇಳಬೇಕಿಲ್ಲ. ಯಾಕೆಂದರೆ ಅರ್ಜಿದಾರರು ಅದನ್ನು ಪ್ರಶ್ನಿಸಿಲ್ಲ. ಅದನ್ನು ಅಕ್ಟೋಬರ್ 2019ರಲ್ಲಿ ಹಿಂಪಡೆಯಲಾಗಿದೆ. ಆದ್ದರಿಂದ ಪರಿಹಾರ ಅಗತ್ಯವಿಲ್ಲ.
- ರಾಜ್ಯದಲ್ಲಿ ರಾಷ್ಟ್ರಪತಿಗಳ ಆಡಳಿತದ ಮೂಲಕ ತಂದ ಅಧಿಕಾರದ ಮೇಲೆ ಹಲವು ನಿರ್ಬಂಧಗಳಿವೆ. ಸರ್ಕಾರದ ಪ್ರತಿಯೊಂದು ನಿರ್ಧಾರವನ್ನೂ ಕಾನೂನು ಹೋರಾಟಕ್ಕೆ ತರಲಾಗದು. ಅದು ಗೊಂದಲಕ್ಕೆ ಕಾರಣಗುತ್ತದೆ.
- ಜಮ್ಮು ಮತ್ತು ಕಾಶ್ಮೀರ ಭಾರತದೊಂದಿಗೆ ವಿಲೀನವಾದಾಗ ಅದಕ್ಕೆ ಇತರ ರಾಜ್ಯಗಳಿಂದ ಪ್ರತ್ಯೇಕಿಸಬಹುದಾದ ಪ್ರತ್ಯೇಕ ಸಾರ್ವಭೌಮತ್ವ ಇರಲಿಲ್ಲ. ಭಾರತದೊಂದಿಗೆ ವಿಲೀನ ಆಗುವಾಗ ಅದು ತನ್ನ ಸಾರ್ವಭೌಮತೆಯನ್ನು ಶರಣಾಗಿಸಿದೆ. ಭಾರತದೊಂದಿಗಿನ ತನ್ನ ಸಂಬಂಧವನ್ನು ಉಸ್ಥಿರಪಡಿಸುವುದಕ್ಕಾಗಿ ಅಲ್ಲಿನ ಸಂವಿಧಾನ ಇತ್ತು.
- ಆರ್ಟಿಕಲ್ 370 ಒಂದು ತಾತ್ಕಾಲಿಕ ನಿಬಂಧನೆ. J&K ನ ಸಂವಿಧಾನವು ಭಾರತದ ಸಂವಿಧಾನಕ್ಕೆ ಅಧೀನವಾಗಿತ್ತು. ಮಧ್ಯಂತರ ಪ್ರಕ್ರಿಯೆಯಾಗಿ ಕಾರ್ಯನಿರ್ವಹಿಸಲು, ಪರಿವರ್ತನೆಯ ಉದ್ದೇಶವನ್ನು ಪೂರೈಸಲು ಆರ್ಟಿಕಲ್ 370 ಅನ್ನು ತರಲಾಯಿತು.
- ಸಂವಿಧಾನ ಸಭೆಯ ಶಿಫಾರಸಿಗೆ ರಾಷ್ಟ್ರಪತಿಗಳು ಬದ್ಧವಾಗಿರಬೇಕಿಲ್ಲ. ಸಂವಿಧಾನ ಸಭೆಯು ತಾತ್ಕಾಲಿಕ ಸಂಸ್ಥೆಯಾಗಿತ್ತು. ಇದರರ್ಥ ರಾಷ್ಟ್ರಪತಿಗಳು 370ನೇ ವಿಧಿಯನ್ನು ರದ್ದುಗೊಳಿಸಬಹುದು.
- 370ನೇ ವಿಧಿಯನ್ನು ರದ್ದುಗೊಳಿಸುವ ಅಧ್ಯಕ್ಷರ ವ್ಯಾಯಾಮವು ಅಸಮರ್ಪಕವಾಗಿದೆ ಎಂದು ನಮಗೆ ಕಂಡುಬಂದಿಲ್ಲ. ಭಾರತದ ರಾಷ್ಟ್ರಪತಿಗಳ ನಿರ್ಧಾರದ ಮೇಲೆ ನಾವು ವಿಚಾರಣೆ ನಡೆಸಲು ಸಾಧ್ಯವಿಲ್ಲ. ರದ್ದತಿಗೆ ಮುನ್ನ ರಾಷ್ಟ್ರಪತಿಗಳು ಕೇಂದ್ರ ಸರ್ಕಾರದ ಒಪ್ಪಿಗೆ ಕೋರುವುದು ನಿರಂಕುಶವಲ್ಲ.
- J&K ಮರುರಚನೆ ಕಾಯಿದೆಯ ಕುರಿತು: ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ರಾಜ್ಯತ್ವವನ್ನು ಪುನಃಸ್ಥಾಪಿಸಲಾಗುವುದು ಎಂದು ಹೇಳಿರುವುದರಿಂದ, ನಾವು ಕಾಯಿದೆಯ ಸಿಂಧುತ್ವಕ್ಕೆ ಹೋಗುತ್ತಿಲ್ಲ.
- ಸೆಪ್ಟೆಂಬರ್ 2024ರೊಳಗೆ ಜಮ್ಮು ಕಾಶ್ಮೀರ ಶಾಸನಸಭೆಗೆ ಚುನಾವಣೆಗಳು ನಡೆಯುವಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಾಧ್ಯವಾದಷ್ಟು ಬೇಗ ರಾಜ್ಯತ್ವವನ್ನು ಪುನಃಸ್ಥಾಪಿಸಬೇಕು.
- ರಾಷ್ಟ್ರಪತಿಗಳ ಅಧಿಕಾರವನ್ನು ಚಲಾಯಿಸಲು ಸಮಂಜಸವಾದ ಸಂಬಂಧ ಇರಬೇಕು. ಘೋಷಣೆಯ ನಂತರದ ರಾಷ್ಟ್ರಪತಿಗಳ ಅಧಿಕಾರವು ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ. 356(1)ರ ಅಡಿಯಲ್ಲಿ ರಾಜ್ಯ ಸರ್ಕಾರದ ಅಧಿಕಾರವನ್ನು ಚಲಾಯಿಸಲು ಸಂಸತ್ತಿನ ಅಧಿಕಾರವು ಕಾನೂನು ರಚನೆಯ ಅಧಿಕಾರಕ್ಕೆ ಸೀಮಿತವಾಗಿಲ್ಲ.
- ಜಮ್ಮು ಮತ್ತು ಕಾಶ್ಮೀರದ ಸಂವಿಧಾನವು ಈಗ ಅಪ್ರಸ್ತುತವಾಗಿದೆ.
ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್
- ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆದಿದೆ ಎಂಬ ಆರೋಪದ ಬಗೆಗ ತನಿಖೆ ನಡೆಸಲು ಸರ್ಕಾರ ಆಯೋಗವನ್ನು ರಚಿಸಬೇಕು. 1980ರಿಂದ ಈಚೆಗೆ ನಡೆದ ಸರ್ಕಾರಿ ಹಾಗೂ ಇತರರ ದೌರ್ಜನ್ಯಗಳನ್ನು ಇದರಲ್ಲಿ ಪರಿಶೀಲಿಸಬೇಕಿದೆ. ನೆನಪು ಮಸುಕಾಗುವ ಮುನ್ನ ಈ ಕೆಲಸ ಆಗಬೇಕು.
- ಒಂದು ಇಡೀ ತಲೆಮಾರು ಅಪನಂಬಿಕೆಯೊಂದಿಗೆ ಬೆಳೆದಿದ್ದು, ಅವರಿಗೆ ಸ್ವತಂತ್ರವಾದ ಭವಿಷ್ಯವನ್ನು ನಾವು ಖಚಿತಪಡಿಸಬೇಕಿದೆ, ಆಗಿದ್ದು ಆಗಿಹೋಯಿತು, ಭವಿಷ್ಯದ ಕುರಿತು ಗಮನ ಹರಿಸೋಣ.
- ರಾಜ್ಯದಲ್ಲಿ ಹುಟ್ಟಿಕೊಂಡ ದಾಳಿಕೋರತನದ ಪರಿಣಾಮ ರಾಜ್ಯದ ಒಂದು ಭಾಗದ ಜನತೆ ಅಲ್ಲಿಂದ ದೊಡ್ಡ ಸಂಖ್ಯೆಯಲ್ಲಿ ವಲಸೆ ಹೋಗಬೇಕಾಯಿತು. ವೃದ್ಧರು, ಮಹಿಳೆಯರು, ಮಕ್ಕಳು ದೊಡ್ಡ ಬೆಲೆ ತೆರಬೇಕಾಯಿತು. ಜಮ್ಮು ಕಾಶ್ಮೀರವನ್ನು ಇತರ ರಾಜ್ಯಗಳ ಸಮಕ್ಕೆ ತರಲು ಆರ್ಟಿಕಲ್ 370ನ್ನು ತರಬೇಕಾಯಿತು. ಅದು ತಾತ್ಕಾಲಿಕ ಕ್ರಮವಾಗಿತ್ತು
- ದೇಶಕ್ಕೆ ಅಪಾಯವಿದ್ದುದರಿಂದ ಅಲ್ಲಿಗೆ ಸೈನ್ಯವನ್ನು ಕರೆಸಬೇಕಾಯಿತು. ಅಲ್ಲಿ ಅಂದು ಸೃಷ್ಟಿಯಾದ ಗಾಯಗಳು ಗುಣವಾಗಬೇಕಿವೆ; ಅಲ್ಲಿನ ಸಾಮಾಜಿಕ ನೇಯ್ಗೆಯನ್ನು ಉಳಿಸಿಕೊಳ್ಳಬೇಕಿದೆ.
ನ್ಯಾಯಮೂರ್ತಿ ಸಂಜೀವ್ ಖನ್ನಾ
- ಆರ್ಟಿಕಲ್ 370 ಎಂಬುದು ಅಸಮ ಒಕ್ಕೂಟ ವ್ಯವಸ್ಥೆಯ ಫಲವಾಗಿದೆ. ಅದು ಜಮ್ಮು ಕಾಶ್ಮೀರದ ಸಾರ್ವಭೌಮತ್ವವನ್ನು ಪ್ರತಿಷ್ಠಾಪಿಸುವುದಿಲ್ಲ.
ಇದನ್ನೂ ಓದಿ: Article 370 : ಸುಪ್ರೀಂ ತೀರ್ಪು ಐತಿಹಾಸಿಕ; ಏಕತೆ, ಪ್ರಗತಿಗೆ ಪೂರಕ ಎಂದ ಮೋದಿ