Site icon Vistara News

Article 370: ʼಗಾಯಗಳು ಗುಣವಾಗಲಿ…ʼ ಕಾಶ್ಮೀರಿ ಪಂಡಿತ ಕುಟುಂಬದ ನ್ಯಾ.ಎಸ್‌ಕೆ ಕೌಲ್‌ ಕೋರ್ಟ್‌ ಪೀಠದಿಂದ ಹೇಳಿದ್ದೇನು?

justice sk kaul

ಹೊಸದಿಲ್ಲಿ: ಆರ್ಟಿಕಲ್‌ 370 (Article 370) ರದ್ದತಿಯ ಕುರಿತು ತೀರ್ಪು ನೀಡುವ ಸಂದರ್ಭದಲ್ಲಿ ಪಂಚಸದಸ್ಯ ನ್ಯಾಯಪೀಠದಲ್ಲಿದ್ದ ನ್ಯಾ.ಸಂಜಯ್‌ ಕಿಶನ್‌ ಕೌಲ್‌ ಅವರು ಜಮ್ಮು – ಕಾಶ್ಮೀರದ ಕಾಶ್ಮೀರಿ ಪಂಡಿತರ ಹತ್ಯೆಯ ದಿನಗಳನ್ನು ನೆನಪಿಸಿಕೊಂಡರು. ಕಾಶ್ಮೀರದ ಗಾಯಗಳು ಗುಣವಾಗಬೇಕಿದೆ ಎಂದು ಹೇಳಿದರು.

ಸ್ವತಃ ಕಾಶ್ಮೀರಿ ಪಂಡಿತರ ಕುಟುಂಬದವರಾಗಿರುವ ಕೌಲ್‌, ʼʼರಾಜ್ಯದಲ್ಲಿ ಹುಟ್ಟಿಕೊಂಡ ದಾಳಿಕೋರತನದ ಪರಿಣಾಮ ರಾಜ್ಯದ ಒಂದು ಭಾಗದ ಜನತೆ ಅಲ್ಲಿಂದ ದೊಡ್ಡ ಸಂಖ್ಯೆಯಲ್ಲಿ ವಲಸೆ ಹೋಗಬೇಕಾಯಿತು. ವೃದ್ಧರು, ಮಹಿಳೆಯರು, ಮಕ್ಕಳು ದೊಡ್ಡ ಬೆಲೆ ತೆರಬೇಕಾಯಿತು. ದೇಶಕ್ಕೆ ಅಪಾಯವಿದ್ದುದರಿಂದ ಅಲ್ಲಿಗೆ ಸೈನ್ಯವನ್ನು ಕರೆಸಬೇಕಾಯಿತು. ಅಲ್ಲಿ ಅಂದು ಸೃಷ್ಟಿಯಾದ ಗಾಯಗಳು ಗುಣವಾಗಬೇಕಿವೆ; ಅಲ್ಲಿನ ಸಾಮಾಜಿಕ ನೇಯ್ಗೆಯನ್ನು ಉಳಿಸಿಕೊಳ್ಳಬೇಕಿದೆʼʼ ಎಂದು ಅವರು ಅಭಿಪ್ರಾಯಪಟ್ಟರು.

ಜಮ್ಮು ಕಾಶ್ಮೀರವನ್ನು ಇತರ ರಾಜ್ಯಗಳ ಸಮಕ್ಕೆ ತರಲು ಆರ್ಟಿಕಲ್‌ 370ನ್ನು ತರಬೇಕಾಯಿತು. ಅದು ತಾತ್ಕಾಲಿಕ ಕ್ರಮವಾಗಿತ್ತು ಎಂದು ತೀರ್ಪಿನ ಅಭಿಪ್ರಾಯವನ್ನು ಅವರು ಪುನರುಚ್ಚರಿಸಿದರು.

ರಾಜ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆದಿದೆ ಎಂಬ ಆರೋಪದ ಬಗೆಗೆ ತನಿಖೆ ನಡೆಸಲು ಸರ್ಕಾರ ಆಯೋಗವನ್ನು ರಚಿಸಬೇಕು. 1980ರಿಂದ ಈಚೆಗೆ ನಡೆದ ಸರ್ಕಾರಿ ಹಾಗೂ ಇತರರ ದೌರ್ಜನ್ಯಗಳನ್ನು ಇದರಲ್ಲಿ ಪರಿಶೀಲಿಸಬೇಕಿದೆ. ನೆನಪು ಮಸುಕಾಗುವ ಮುನ್ನ ಈ ಕೆಲಸ ಆಗಬೇಕು. ಒಂದು ಇಡೀ ತಲೆಮಾರು ಅಪನಂಬಿಕೆಯೊಂದಿಗೆ ಬೆಳೆದಿದ್ದು, ಅವರಿಗೆ ಸ್ವತಂತ್ರವಾದ ಭವಿಷ್ಯವನ್ನು ನಾವು ಖಚಿತಪಡಿಸಬೇಕಿದೆ, ಆಗಿದ್ದು ಆಗಿಹೋಯಿತು, ಭವಿಷ್ಯದ ಕುರಿತು ಗಮನ ಹರಿಸೋಣ ಎಂದು ಕೌಲ್‌ ನುಡಿದರು.

ತಾತ್ಕಾಲಿಕ ಕ್ರಮ: ನ್ಯಾ. ಚಂದ್ರಚೂಡ್‌

ಭಾರತದೊಳಗೆ ಸೇರಿದ ನಂತರ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಆರ್ಟಿಕಲ್‌ 370 ಅದನ್ನು ಭಾರತದೊಳಕ್ಕೆ ಸೇರಿಸಲು ನೀಡಲಾದ ತಾತ್ಕಾಲಿಕ ವ್ಯವಸ್ಥೆಯಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಯಾವುದೇ ಆಂತರಿಕ ಸಾರ್ವಭೌಮತ್ವವಿಲ್ಲ. ರಾಜ್ಯವು ಸಾರ್ವಭೌಮತ್ವದ ಯಾವುದೇ ಅಂಶವನ್ನು ಉಳಿಸಿಕೊಂಡಿಲ್ಲ. ಆರ್ಟಿಕಲ್ 370 ಅಸಮ ಒಕ್ಕೂಟದ ಲಕ್ಷಣವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಗಮನಿಸಿದರು.

ಅರ್ಜಿದಾರರು ರಾಷ್ಟ್ರಪತಿಗಳ ಘೋಷಣೆಯನ್ನು ಪ್ರಶ್ನಿಸಿಲ್ಲ. ಆರ್ಟಿಕಲ್‌ 370 ರದ್ದತಿ ಘೋಷಣೆಯ ನಂತರದ ಅಧ್ಯಕ್ಷರ ಅಧಿಕಾರ ಚಲಾವಣೆ ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುತ್ತದೆ. ರಾಜ್ಯ ವಿಧಾನಸಭೆಯ ಪರವಾಗಿ ಅಧಿಕಾರವನ್ನು ಚಲಾಯಿಸಲು ಆರ್ಟಿಕಲ್ 356(1) ರ ಅಡಿಯಲ್ಲಿ ಸಂಸತ್ತಿನ ಅಧಿಕಾರವು ಕಾನೂನು ರಚನೆಯ ಅಧಿಕಾರಗಳಿಗೆ ಸೀಮಿತವಾಗಿಲ್ಲ ಎಂದಿರುವ ಕೋರ್ಟ್‌, ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ರಾಷ್ಟ್ರಪತಿಗಳ ಆದೇಶವನ್ನು ಎತ್ತಿ ಹಿಡಿದಿದೆ.

ಕೇಂದ್ರದ ಒಪ್ಪಿಗೆಯೊಂದಿಗೆ ಸಂವಿಧಾನದ ಎಲ್ಲಾ ನಿಬಂಧನೆಗಳನ್ನು ರಾಷ್ಟ್ರಪತಿಗಳು ಜಮ್ಮು ಕಾಶ್ಮೀರಕ್ಕೆ ಅನ್ವಯಿಸಬಹುದಿತ್ತು. ಮತ್ತು ರಾಜ್ಯ ವಿಧಾನಸಭೆಯ ಒಪ್ಪಿಗೆಯನ್ನು ಪಡೆಯುವ ಅಗತ್ಯವಿಲ್ಲ ಎಂದು ಸಿಜೆಐ ಚಂದ್ರಚೂಡ್ ಹೇಳಿದರು. ಈ ಮೂಲಕ ಅರ್ಜಿದಾರರ ವಾದವನ್ನು ಕೋರ್ಟ್‌ ತಿರಸ್ಕರಿಸಿದೆ. ಜಮ್ಮು ಕಾಶ್ಮೀರದಲ್ಲಿ ಸಾಮಾನ್ಯ ಸ್ಥಿತಿಯನ್ನು ಮರಳಿಸುವುದಕ್ಕಾಗಿ 2024ರ ಸೆಪ್ಟೆಂಬರ್‌ ಒಳಗೆ ವಿಧಾನಸಭೆ ಚುನಾವಣೆಯನ್ನು ನಡೆಸಬೇಕು. ರಾಜ್ಯ ಸ್ಥಾನಮಾನವನ್ನು ಆದಷ್ಟು ಬೇಗನೆ ಪ್ರತಿಷ್ಠಾಪಿಸಬೇಕು ಎಂದು ಕೋರ್ಟ್‌ ಆದೇಶಿಸಿದೆ.

ಇದನ್ನೂ ಓದಿ: Article 370 : ಆರ್ಟಿಕಲ್​ 370; ಸುಪ್ರೀಂ ಕೋರ್ಟ್​ ಐತಿಹಾಸಿಕ ತೀರ್ಪಿನ ಹೈಲೈಟ್ಸ್​​

Exit mobile version