ಹೊಸದಿಲ್ಲಿ: ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಸಾರ್ವಭೌಮತ್ವವಿಲ್ಲ, ಭಾರತದ ಸಂವಿಧಾನದೊಳಗೆ ಜಮ್ಮು ಕಾಶ್ಮೀರದ ಸಂವಿಧಾನವು ಕಾರ್ಯ ನಿರ್ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಭಾರತದೊಳಗೆ ಸೇರಿದ ನಂತರ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಆರ್ಟಿಕಲ್ 370 ಅದನ್ನು ಭಾರತದೊಳಕ್ಕೆ ಸೇರಿಸಲು ನೀಡಲಾದ ತಾತ್ಕಾಲಿಕ ವ್ಯವಸ್ಥೆಯಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಯಾವುದೇ ಆಂತರಿಕ ಸಾರ್ವಭೌಮತ್ವವಿಲ್ಲ. ರಾಜ್ಯವು ಸಾರ್ವಭೌಮತ್ವದ ಯಾವುದೇ ಅಂಶವನ್ನು ಉಳಿಸಿಕೊಂಡಿಲ್ಲ. ಆರ್ಟಿಕಲ್ 370 ಅಸಮ ಒಕ್ಕೂಟದ ಲಕ್ಷಣವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಗಮನಿಸಿದರು.
ಅರ್ಜಿದಾರರು ರಾಷ್ಟ್ರಪತಿಗಳ ಘೋಷಣೆಯನ್ನು ಪ್ರಶ್ನಿಸಿಲ್ಲ. ಆರ್ಟಿಕಲ್ 370 ರದ್ದತಿ ಘೋಷಣೆಯ ನಂತರದ ಅಧ್ಯಕ್ಷರ ಅಧಿಕಾರ ಚಲಾವಣೆ ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುತ್ತದೆ. ರಾಜ್ಯ ವಿಧಾನಸಭೆಯ ಪರವಾಗಿ ಅಧಿಕಾರವನ್ನು ಚಲಾಯಿಸಲು ಆರ್ಟಿಕಲ್ 356(1) ರ ಅಡಿಯಲ್ಲಿ ಸಂಸತ್ತಿನ ಅಧಿಕಾರವು ಕಾನೂನು ರಚನೆಯ ಅಧಿಕಾರಗಳಿಗೆ ಸೀಮಿತವಾಗಿಲ್ಲ ಎಂದಿರುವ ಕೋರ್ಟ್, ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ರಾಷ್ಟ್ರಪತಿಗಳ ಆದೇಶವನ್ನು ಎತ್ತಿ ಹಿಡಿದಿದೆ.
ಕೇಂದ್ರದ ಒಪ್ಪಿಗೆಯೊಂದಿಗೆ ಸಂವಿಧಾನದ ಎಲ್ಲಾ ನಿಬಂಧನೆಗಳನ್ನು ರಾಷ್ಟ್ರಪತಿಗಳು ಜಮ್ಮು ಕಾಶ್ಮೀರಕ್ಕೆ ಅನ್ವಯಿಸಬಹುದಿತ್ತು. ಮತ್ತು ರಾಜ್ಯ ವಿಧಾನಸಭೆಯ ಒಪ್ಪಿಗೆಯನ್ನು ಪಡೆಯುವ ಅಗತ್ಯವಿಲ್ಲ ಎಂದು ಸಿಜೆಐ ಚಂದ್ರಚೂಡ್ ಹೇಳಿದರು. ಈ ಮೂಲಕ ಅರ್ಜಿದಾರರ ವಾದವನ್ನು ಕೋರ್ಟ್ ತಿರಸ್ಕರಿಸಿದೆ. ಜಮ್ಮು ಕಾಶ್ಮೀರದಲ್ಲಿ ಸಾಮಾನ್ಯ ಸ್ಥಿತಿಯನ್ನು ಮರಳಿಸುವುದಕ್ಕಾಗಿ 2024ರ ಸೆಪ್ಟೆಂಬರ್ ಒಳಗೆ ವಿಧಾನಸಭೆ ಚುನಾವಣೆಯನ್ನು ನಡೆಸಬೇಕು. ರಾಜ್ಯ ಸ್ಥಾನಮಾನವನ್ನು ಆದಷ್ಟು ಬೇಗನೆ ಪ್ರತಿಷ್ಠಾಪಿಸಬೇಕು ಎಂದು ಕೋರ್ಟ್ ಆದೇಶಿಸಿದೆ.
ಇದನ್ನೂ ಓದಿ: Article 370 : ಕಾಶ್ಮೀರದಲ್ಲಿ 2024ರ ಸೆ. 30ರೊಳಗೆ ಚುನಾವಣೆ; ಸುಪ್ರೀಂ ಆರ್ಡರ್