Site icon Vistara News

Arunachal Pradesh: ಅರುಣಾಚಲ ಪ್ರದೇಶ ಭಾರತದ್ದು ಎಂದ ಅಮೆರಿಕ; ಚೀನಾಗೆ ಮುಖಭಂಗ

Arunachal Pradesh

Arunachal Pradesh part of India: US amid rising India-China tensions

ನವದೆಹಲಿ: ಜಮ್ಮು-ಕಾಶ್ಮೀರದ ಲಡಾಕ್‌ ಹಾಗೂ ಅರುಣಾಚಲ ಪ್ರದೇಶದ (Arunachal Pradesh) ಗಡಿಯಲ್ಲಿ ಚೀನಾ ಯಾವಾಗಲೂ ಉಪಟಳ ಮಾಡುತ್ತದೆ. ಅದರಲ್ಲೂ, ಅರುಣಾಚಲ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿ ಯಾವುದೇ ನಾಯಕರು ಭೇಟಿ ನೀಡಿದರೂ ಅದನ್ನು ಚೀನಾ ವಿರೋಧಿಸುತ್ತದೆ. ಅರುಣಾಚಲ ಪ್ರದೇಶ ನಮ್ಮ ಭೂಭಾಗ ಎಂದು ಲಜ್ಜೆಗೆಟ್ಟು ಹೇಳುತ್ತದೆ. ಇದರ ಮಧ್ಯೆಯೇ, “ಅರುಣಾಚಲ ಪ್ರದೇಶವು ಭಾರತದ ಭೂಪ್ರದೇಶ” ಎಂದು ಅಮೆರಿಕ (US On Arunachal Pradesh) ಹೇಳಿದ್ದು, ಇಲ್ಲದ ಉದ್ಧಟತನ ಮಾಡುವ ಚೀನಾಗೆ (China) ಈಗ ಭಾರಿ ಮುಖಭಂಗವಾಗಿದೆ.

ಹೌದು, ಅಮೆರಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮುಖ್ಯ ಉಪ ವಕ್ತಾರ ವೇದಾಂತ್‌ ಪಟೇಲ್‌ ಅವರು ಅರುಣಾಚಲ ಪ್ರದೇಶದ ಕುರಿತು ಮಾತನಾಡಿದ್ದಾರೆ. “ಅರುಣಾಚಲ ಪ್ರದೇಶವು ಭಾರತದ್ದು ಎಂದು ಅಮೆರಿಕ ಗುರುತಿಸುತ್ತದೆ. ವಾಸ್ತವ ಗಡಿ ನಿಯಂತ್ರಣ ರೇಖೆ (LAC) ಬಳಿ ಚೀನಾ ಯಾವುದೇ ರೀತಿಯ ಅತಿಕ್ರಮಣ, ನಮ್ಮ ಭೂಪ್ರದೇಶ ಎಂಬುದಾಗಿ ಹೇಳುವುದು, ಹೆಚ್ಚುವರಿ ಸೈನಿಕರನ್ನು ನಿಯೋಜಿಸುವುದು ಸೇರಿ ಹಲವು ಚಟುವಟಿಕೆಗಳನ್ನು ಅಮೆರಿಕ ವಿರೋಧಿಸುತ್ತದೆ” ಎಂದು ಹೇಳಿದ್ದಾರೆ.

ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾಂಗ್‌ ಕ್ಸಿಯೋಗಾಂಗ್‌ ಅವರು ಅರುಣಾಚಲ ಪ್ರದೇಶದ ಕುರಿತು ಉದ್ಧಟತನದ ಹೇಳಿಕೆ ನೀಡಿದ್ದರು. “ಭಾರತವು ಅಕ್ರಮವಾಗಿ ಅರುಣಾಚಲ ಪ್ರದೇಶದ ಮೇಲೆ ಹಿಡಿತ ಸಾಧಿಸಿದೆ. ಅರುಣಾಚಲ ಪ್ರದೇಶವು ಎಂದಿಗೂ ಚೀನಾದ ಅವಿಭಾಜ್ಯ ಅಂಗವಾಗಿದೆ. ಅರುಣಾಚಲ ಪ್ರದೇಶದಲ್ಲಿ ಭಾರತದ ಚಟುವಟಿಕೆಗಳನ್ನು ಚೀನಾ ಖಡಾಖಂಡಿತವಾಗಿ ವಿರೋಧಿಸುತ್ತದೆ” ಎಂದು ಹೇಳಿದ್ದರು. ಇದಾದ ಬಳಿಕ ಭಾರತ ಕೂಡ ಚೀನಾಗೆ ಸರಿಯಾಗಿಯೇ ತಿರುಗೇಟು ನೀಡಿತ್ತು. ಅರುಣಾಚಲ ಪ್ರದೇಶದ ಮೇಲೆ ಚೀನಾದ ಹಕ್ಕಿಲ್ಲ ಎಂದು ತಪರಾಕಿ ನೀಡಿತ್ತು.

ಇದನ್ನೂ ಓದಿ: Chinese visa scam : ಚೀನಾ ವೀಸಾ ಹಗರಣ: ಕಾರ್ತಿ ಚಿದಂಬರಂ ಸೇರಿ ಹಲವರಿಗೆ ಕೋರ್ಟ್​​ ಸಮನ್ಸ್

ಅರುಣಾಚಲ ಪ್ರದೇಶದ ವಿಚಾರದಲ್ಲಿ ಚೀನಾ ಮೊದಲಿನಿಂದಲೂ ಕ್ಯಾತೆ ತೆಗೆಯುತ್ತದೆ. ಕೆಲ ದಿನಗಳ ಹಿಂದಷ್ಟೇ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರು. ಇದನ್ನು ವಿರೋಧಿಸಿದ್ದ ಚೀನಾ, ನಮ್ಮ ಭೂಪ್ರದೇಶ ಎಂದು ಉದ್ಧಟತನದ ಹೇಳಿಕೆ ನೀಡಿತ್ತು. ಇಂತಹ ಪರಿಸ್ಥಿತಿಯ ಮಧ್ಯೆಯೇ, ಅಮೆರಿಕವು ಭಾರತದ ಪರವಾಗಿ ನಿಂತಿರುವುದು, ಅರುಣಾಚಲ ಪ್ರದೇಶವು ಭಾರತದ್ದು ಎಂಬುದಾಗಿ ಹೇಳಿರುವುದು ಚೀನಾಗೆ ಹಿನ್ನಡೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version