ನವದೆಹಲಿ: ಅಬಕಾರಿ ನೀತಿ ಪ್ರಕರಣ(Delhi Excise policy)ದಲ್ಲಿ ಜೈಲುಪಾಲಾಗಿರುವ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್(Arvind Kejriwal) ಅವರಿಗೆ ಜೈಲಿನಲ್ಲಿ ಜೀವ ಬೆದರಿಕೆ ಇದೆ ಎಂದು ಆಪ್ ಆತಂಕ ವ್ಯಕ್ತಪಡಿಸಿರುವ ಬೆನ್ನಲ್ಲೇ ನಾಳೆ ಇಂಡಿಯಾ ಒಕ್ಕೂಟ ರ್ಯಾಲಿ ನಡೆಸಲು ಮುಂದಾಗಿವೆ. ನ್ಯಾಯಾಂಗ ಬಂಧನದಲ್ಲಿ ದಿನೇ ದಿನೇ ಕೇಜ್ರಿವಾಲ್ ಅವರ ಆರೋಗ್ಯ ಹದಗೆಡುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿರುವ ಹಿನ್ನೆಲೆ ನಾಳೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಜಂತರ್ ಮಂಥರ್‌ನಲ್ಲಿ ರ್ಯಾಲಿ ನಡೆಸಿ ಪ್ರತಿಭಟನೆ ಮಾಡಲಿದೆ.
ಈ ಬಗ್ಗೆ ಅಪ್ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಮಾಹಿತಿ ನೀಡಿದ್ದು, ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ಡಿಎಂಕೆ, ಸಿಪಿಐ, ಜಾರ್ಖಂಡ್ ಮುಕ್ತಿ ಮೋರ್ಚಾ, ಎನ್‌ಸಿಪಿ-ಎಸ್‌ಪಿ, ಶಿವಸೇನೆ (ಯುಬಿಟಿ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪಕ್ಷಗಳು ಪ್ರತಿಭಟನೆ ನಡೆಸಲಿವೆ. ಮತ್ತೆ ಮೂರು ಪಕ್ಷಗಳ ಜೊತೆ ನಾಳೆ ಪ್ರತಿಭಟನೆಗೆ ಸಾಥ್ ಕೊಡುವಂತೆ ಮನವಿ ಮಾಡಿದ್ದೇವೆ ಎಂದಿದ್ದಾರೆ.
ಕೇಜ್ರಿವಾಲ್ಅವರಿಗೆ ಜೈಲಿನಲ್ಲಿ ಜೀವ ಬೆದರಿಕೆ ಇದೆ ಎಂದು ಆಪ್ ಆತಂಕ ವ್ಯಕ್ತಪಡಿಸಿದೆ. ತಿಹಾರ್‌ನಲ್ಲಿ ಕೇಜ್ರಿವಾಲ್‌ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡದೇ ಅವರ ಹತ್ಯೆಗೆ ಬಿಜೆಪಿ ಸಂಚು ರೂಪಿಸಿದೆ ಎಂದು ಆಪ್ ಗಂಭೀರ ಆರೋಪ ಮಾಡಿತ್ತು. ಕೆಲವು ದಿನಗಳ ಹಿಂದೆ ಮಾಧ್ಯಮಗೋಷ್ಠಿ ನಡೆಸಿದ ದಿಲ್ಲಿ ಸಚಿವೆ ಆತಿಷಿ, ಕೇಜ್ರಿವಾಲ್ ಅವರನ್ನು ಜೈಲಿಗೆ ತಳ್ಳುವುದು ಮಾತ್ರವಲ್ಲ, ಅವರನ್ನು ಅನಾರೋಗ್ಯಕ್ಕೀಡು ಮಾಡಿ ಕೊಲೆಗೈಯುವ ಸಂಚು ಬಿಜೆಪಿಗಿದೆ. ಸರ್ವಾಧಿಕಾರಿ ತಮ್ಮ ವಿರೋಧಿಗಳನ್ನು ಜೈಲಿಗೆ ತಳ್ಳಿ ಅವರ ಆರೋಗ್ಯ ಹದಗೆಡುವಂತೆ ಮಾಡುತ್ತಿದ್ದಾರೆ. ಕೇಜ್ರಿವಾಲ್‌ಗೆ ಏನಾದರೂ ಹೆಚ್ಚು ಕಡಿಮೆ ಆದರೆ ಅದಕ್ಕೆ ಬಿಜೆಪಿಯೇ ನೇರ ಜವಾಬ್ದಾರಿ ಎಂದು ಹೇಳಿದ್ದರು.
ಕೇಜ್ರಿವಾಲ್ ಕಳೆದ 30 ವರ್ಷಗಳಿಂದ ಸಕ್ಕರೆ ಖಾಯಿಲೆ ಹೊಂದಿರುವ ರೋಗಿ. ಇನ್ಸುಲಿನ್ ತೆಗೆದುಕೊಳ್ಳಲು ಅಥವಾ ವೈದ್ಯರನ್ನು ಭೇಟಿ ಮಾಡಲೂ ಅವರಿಗೆ ಬಿಜೆಪಿ ನೇತೃತ್ವದ ಸರ್ಕಾರ ಅವಕಾಶ ನೀಡುತ್ತಿಲ್ಲ. ಕೇಜ್ರಿವಾಲ್‌ಗೆ ಏನಾದರೂ ಸಂಭವಿಸಿದರೆ ಅದಕ್ಕೆ ಬಿಜೆಪಿಯೇ ಹೊಣೆಯಾಗಲಿದೆ. ಸಿಎಂ ಕೇಜ್ರಿವಾಲ್ ಇಡಿ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ ಜಾಮೀನು ಪಡೆದ ತಕ್ಷಣ, ಬಿಜೆಪಿ ಅವರ ಜಾಮೀನು ರದ್ದುಗೊಳಿಸುವಂತೆ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿತ್ತು ಮತ್ತು ನಂತರ ಅವರನ್ನು ಸಿಬಿಐ ಬಂಧಿಸಿತು. ಸಕ್ಕರೆ ಖಾಯಿಲೆಯಿಂದಾಗಿ ಕೇಜ್ರಿವಾಲ್ ಅವರ ಆರೋಗ್ಯ ದಿನೇ ದಿನೇ ಕುಸಿಯುತ್ತಿದೆ. ಅವರ ತೂಕವೂ ಕ್ಷೀಣಿಸುತ್ತಿದೆ ಎಂದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ದೆಹಲಿಯ ರೋಸ್ ಅವೆನ್ಯೂ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಅಬಕಾರಿ ನೀತಿ ವೇಳೆ ನೂರಾರು ಕೋಟಿ ರೂ. ಹಗರಣ ನಡೆದಿದೆ ಎಂಬ ಆರೋಪದ ಕುರಿತು ಸಿಬಿಐ ಅಧಿಕಾರಿಗಳು ತನಿಖೆ ನಡೆಸಿದ ಭಾಗವಾಗಿ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಕೇಜ್ರಿವಾಲ್ ಅವರು ಪ್ರಮುಖ ಆರೋಪಿಯಾಗಿದ್ದು, ಹಣಕಾಸು ಅವ್ಯವಹಾರದ ಕುರಿತು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Arvind Kejriwal: ಅರವಿಂದ್ ಕೇಜ್ರಿವಾಲ್‌ಗೆ ಮತ್ತೊಂದು ಸಂಕಷ್ಟ; ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ ಸಿಬಿಐ