Site icon Vistara News

Arvind Kejriwal: ಕೇಜ್ರಿವಾಲ್‌ಗೆ ಮತ್ತೆ ಹಿನ್ನಡೆ; ಜಾಮೀನು ವಿಸ್ತರಣೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

Arvind Kejriwal

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನೂರಾರು ಕೋಟಿ ರೂ. ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದು ಹೊರಬಂದಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರಿಗೆ ಭಾರೀ ಹಿನ್ನಡೆಯಾಗಿದೆ. ತಮ್ಮ ಮಧ್ಯಂತರ ಜಾಮೀನು ಅವಧಿಯನ್ನು ಮತ್ತಷ್ಟು ವಿಸ್ತರಿಸುವಂತೆ ಕೋರಿ ಕೇಜ್ರಿವಾಲ್‌ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಮಾರ್ಚ್ 21ರಂದು ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟಿದ್ದ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಏಳು ಹಂತದ ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನವಾದ ಜೂನ್ 1ರವರೆಗೆ ರಿಲೀಫ್‌ ಸಿಕ್ಕಿತ್ತು. ಇದೀಗ ತಮ್ಮ ಆರೋಗ್ಯ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಜಾಮೀನು ಅವಧಿಯನ್ನು ಮತ್ತಷ್ಟು ದಿನ ವಿಸ್ತರಿಸುವಂತೆ ಕೋರಿ ಕೇಜ್ರಿವಾಲ್‌ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಕೆ.ವಿ ವಿಶ್ವನಾಥನ್‌ ಇದ್ದ ನ್ಯಾಯಪೀಠ, ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿದ್ದು, ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮುಂದಿನ ದಿನಗಳಲ್ಲಿ ನಡೆಸಲಿದ್ದಾರೆ ಎಂದು ಹೇಳಿದೆ. ಅಲ್ಲದೇ ಈ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ಅವರಿಗೆ ಹಸ್ತಾಂತರಿಸಿದೆ. ಹೀಗಾಗಿ ಜಾಮೀನು ಅವಧಿ ಪೂರ್ಣಗೊಳ್ಳುತ್ತಿದ್ದಂತೆ ಕೇಜ್ರಿವಾಲ್‌ ಜೂ.2ರಂದು ತಿಹಾರ್‌ ಜೈಲಿಗೆ ಮರಳಬೇಕಾಗಿದೆ.

ನಿನ್ನೆಯಷ್ಟೇ ದೆಹಲಿ ಸಚಿವೆ ಆತಿಶಿ (Atishi) ಅವರು ಅರವಿಂದ್‌ ಕೇಜ್ರಿವಾಲ್‌ ಅವರ ಆರೋಗ್ಯದ ಕುರಿತು ಮಾಹಿತಿಯೊಂದನ್ನು ನೀಡಿದ್ದು, ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರಿಗೆ ಕ್ಯಾನ್ಸರ್‌ ಇದೇಯೇ ಎಂಬ ಪ್ರಶ್ನೆ ಮೂಡಿಸಿದೆ. ಹಾಗಾಗಿ, ಜೂನ್‌ 2ರಂದು ದೆಹಲಿ ಸಿಎಂ ಮತ್ತೆ ಜೈಲಿಗೆ ಹೋಗುವುದಿಲ್ಲ ಎಂದು ಹೇಳಲಾಗುತ್ತಿತ್ತು.

“ಅರವಿಂದ್‌ ಕೇಜ್ರಿವಾಲ್‌ ಅವರ ಆರೋಗ್ಯ ತಪಾಸಣೆ ಮಾಡಿಸಲಾಗಿದ್ದು, ಅವರ ಕೇಟೊನ್‌ ಪ್ರಮಾಣವು ಜಾಸ್ತಿಯಾಗಿದೆ. ಏಕಾಏಕಿ ತೂಕ ಕಡಿಮೆಯಾಗುವುದು, ಜಾಸ್ತಿಯಾಗುವುದನ್ನು ನೋಡಿದರೆ ಅವರಿಗೆ ಗಂಭೀರ ಕಾಯಿಲೆ ಇರುವ ಸಾಧ್ಯತೆ ಇದೆ. ಕಿಡ್ನಿ ಸಮಸ್ಯೆ ಅಥವಾ ಕ್ಯಾನ್ಸರ್‌ ಸೇರಿ ಯಾವುದೇ ಗಂಭೀರ ಕಾಯಿಲೆ ಇರಬಹುದು. ಹಾಗಾಗಿ, ಅರವಿಂದ್‌ ಕೇಜ್ರಿವಾಲ್‌ ಅವರು ಜೂನ್‌ 2ರಂದು ಜೈಲಿಗೆ ಹೋಗುವ ಬದಲು ಜೂನ್‌ 9ರಂದು ತೆರಳುವ ಕುರಿತು ನ್ಯಾಯಾಲಯಕ್ಕೆ ಮನವಿ ಮಾಡಿದೆ. ಅವರ ಜಾಮೀನು ಅವಧಿಯನ್ನು ವಿಸ್ತರಣೆ ಮಾಡುವಂತೆ ಕೋರಲಾಗಿದೆ” ಎಂಬುದಾಗಿ ಆತಿಶಿ ತಿಳಿಸಿದ್ದರು.

ಏನಿದು ಅಬಕಾರಿ ನೀತಿ ಹಗರಣ?

ಈ ಪ್ರಕರಣವು 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ. ದೆಹಲಿ ಸರ್ಕಾರವು ನಗರದ ಪ್ರಮುಖ ಮದ್ಯದ ವ್ಯಾಪಾರವನ್ನು ಪರಿಷ್ಕರಿಸುವ ನೀತಿಯನ್ನು ರೂಪಿಸಿದ್ದು, ವ್ಯಾಪಾರಿಗಳಿಗೆ ಪರವಾನಗಿ ಶುಲ್ಕದ ಬದಲಾವಣೆ ಸೇರಿದಂತೆ ಹಲವು ಬದಲಾವಣೆ ಮಾಡಿತ್ತು. ಆದರೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಇದರಲ್ಲಿ ಅಕ್ರಮಗಳನ್ನು ಆರೋಪಿಸಿ ನೀತಿಯ ಬಗ್ಗೆ ಸಿಬಿಐ ತನಿಖೆಗೆ ಕೋರಿದ್ದರು. ನಂತರ ನೀತಿಯನ್ನು ರದ್ದುಗೊಳಿಸಲಾಯಿತು.

ಇದನ್ನೂ ಓದಿ:Human trafficking Case: ದೇಶಾದ್ಯಂತ NIA ರೇಡ್‌; ಮಾನವ ಕಳ್ಳಸಾಗಣೆ ಜಾಲ ಬಯಲು

ಸಿಬಿಐ ಮತ್ತು ಇಡಿ ಪ್ರಕಾರ, ಎಎಪಿ ನಾಯಕರು ಅಬಕಾರಿ ನೀತಿಯ ಅಡಿಯಲ್ಲಿ ಪರವಾನಗಿ ನೀಡಲು ರಾಜಕಾರಣಿಗಳು ಮತ್ತು ಮದ್ಯದ ಉದ್ಯಮಿಗಳ ಗುಂಪಿನಿಂದ ₹ 100 ಕೋಟಿ ಕಿಕ್‌ಬ್ಯಾಕ್‌ಗಳನ್ನು ಸ್ವೀಕರಿಸಿದ್ದಾರೆ. ಆರೋಪಪಟ್ಟಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಹೆಸರನ್ನೂ ಉಲ್ಲೇಖಿಸಲಾಗಿದ್ದು, ಅಬಕಾರಿ ನೀತಿ ಪ್ರಕರಣದ ಎಲ್ಲಾ ಆರೋಪಿಗಳು ಅಬಕಾರಿ ನೀತಿಯನ್ನು ರೂಪಿಸಲು ದೆಹಲಿ ಸಿಎಂ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿತ್ತು.

Exit mobile version