Site icon Vistara News

Ashok Chavan: ಕಾಂಗ್ರೆಸ್‌ ತೊರೆದ ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್ ಚವಾಣ್ ಇಂದು ಬಿಜೆಪಿ ಸೇರ್ಪಡೆ?

ashok chavan

ashok chavan

ಮುಂಬೈ: ಕಾಂಗ್ರೆಸ್‌ ತೊರೆದಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಸಂಸದ ಅಶೋಕ್ ಚವಾಣ್ ಅವರು (Ashok Chavan) ಇಂದು (ಫೆಬ್ರವರಿ 13) ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದೆ. ಮಾಧ್ಯಮಗಳ ಜತೆ ಸೋಮವಾರ ಮಾತನಾಡಿದ್ದ ಅವರು, ತಮ್ಮ ಮುಂದಿನ ನಡೆಯ ಬಗ್ಗೆ ಕೆಲವೇ ದಿನಗಳಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದರು. ಉಪ ಮುಖ್ಯಮಂತ್ರಿ ಮತ್ತು ರಾಜ್ಯದ ಉನ್ನತ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ (Devendra Fadnavis) ಅವರು ಇಂದು ಮಧ್ಯಾಹ್ನ ಚವಾಣ್ ಅವರನ್ನು ಪಕ್ಷಕ್ಕೆ ಸ್ವಾಗತಿಸಲಿದ್ದಾರೆ. ಅಶೋಕ್ ಚವಾಣ್ ಅವರೊಂದಿಗೆ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರ ಸಹಾಯಕ ಅಮ್ರ್ ರಾಜೂರ್ಕರ್ ಕೂಡ ಇಂದು ಬಿಜೆಪಿಗೆ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಸಭೆಗೆ ಟಿಕೆಟ್?

ಬಹುಶಃ ಅಶೋಕ್ ಚವಾಣ್ ಅವರಿಗೆ ಬಿಜೆಪಿ ರಾಜ್ಯಸಭೆಗೆ ಟಿಕೆಟ್ ನೀಡಬಹುದು ಎನ್ನಲಾಗಿದೆ. “ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಾನು ನನ್ನ ರಾಜೀನಾಮೆಯನ್ನು ಸ್ಪೀಕರ್‌ ರಾಹುಲ್ ನಾರ್ವೇಕರ್ ಅವರಿಗೆ ಹಸ್ತಾಂತರಿಸಿದ್ದೇನೆ. ನಾನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮತ್ತು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದೇನೆ. ನಾನು ಯಾವುದೇ ಪಕ್ಷಕ್ಕೆ ಸೇರಲು ನಿರ್ಧರಿಸಿಲ್ಲ. ಎರಡು ದಿನಗಳ ನಂತರ ಪಕ್ಷಕ್ಕೆ ಸೇರುವ ಬಗ್ಗೆ ನನ್ನ ನಿಲುವನ್ನು ಸ್ಪಷ್ಟಪಡಿಸುತ್ತೇನೆ” ಎಂದು ಚವಾಣ್ ನಿನ್ನೆ ಸುದ್ದಿಗಾರರಿಗೆ ತಿಳಿಸಿದ್ದರು.

ಸಾರ್ವತ್ರಿಕ ಚುನಾವಣೆ (Lok Sabha Election 2024) ಮತ್ತು ರಾಜ್ಯ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಇದು ರಾಜ್ಯ ಕಾಂಗ್ರೆಸ್‌ಗೆ ಬಿದ್ದ ದೊಡ್ಡ ಹೊಡೆತವಾಗಿದೆ. ಕಾಂಗ್ರೆಸ್ ನಾಯಕ ಮಿಲಿಂದ್ ದಿಯೋರಾ ಕಳೆದ ತಿಂಗಳು ಪಕ್ಷವನ್ನು ತೊರೆದು ಏಕನಾಥ್ ಶಿಂಧೆ (Eknath shinde) ನೇತೃತ್ವದ ಶಿವಸೇನೆಗೆ ಸೇರಿದ ನಂತರ ಇದು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಎರಡನೇ ದೊಡ್ಡ ಪಕ್ಷಾಂತರ ಎನಿಸಲಿದೆ. ಕಾಂಗ್ರೆಸ್ ನಾಯಕ ಮತ್ತು ಮಾಜಿ ರಾಜ್ಯ ಸಚಿವ ಬಾಬಾ ಸಿದ್ದಿಕ್ ಕೂಡ ಪಕ್ಷವನ್ನು ತೊರೆದು ಈ ತಿಂಗಳ ಆರಂಭದಲ್ಲಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸೇರ್ಪಡೆಯಾಗಿದ್ದರು.

ಕಾಂಗ್ರೆಸ್ ಮೂಲಗಳ ಪ್ರಕಾರ, ಪಕ್ಷದ ರಾಜ್ಯ ಮುಖ್ಯಸ್ಥ ನಾನಾ ಪಟೋಲೆ ಅವರೊಂದಿಗಿನ ಭಿನ್ನಾಭಿಪ್ರಾಯಗಳ ಕಾರಣದಿಂದ ಅಶೋಕ್ ಚವಾಣ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದೊಳಗೆ ಸೀಟು ಹಂಚಿಕೆಯನ್ನು ಅಂತಿಮಗೊಳಿಸುವಲ್ಲಿನ ವಿಳಂಬದ ಬಗ್ಗೆಯೂ ಅಶೋಕ್ ಚವಾಣ್ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Ashok Chavan Resigns to Congress: ಕಾಂಗ್ರೆಸ್‌ ತೊರೆದ ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್ ಚವಾಣ್, ಬಿಜೆಪಿ ಸೇರ್ಪಡೆ ಚರ್ಚೆ

ಈ ಬಗ್ಗೆ ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಮಾತನಾಡಿ, ಮಹಾರಾಷ್ಟ್ರದ ಕಾಂಗ್ರೆಸ್ ನಾಯಕನ ಕಾರ್ಯಶೈಲಿಯ ಬಗ್ಗೆ ಅಶೋಕ್ ಚವಾಣ್ ಅಸಮಾಧಾನಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ʼʼಚವಾಣ್ ತಮ್ಮ ಅಸಮಾಧಾನದ ಬಗ್ಗೆ ಉನ್ನತ ನಾಯಕರೊಂದಿಗೆ ಚರ್ಚೆ ನಡೆಸಿದ್ದರು. ಆಗಲೇ ಅವರ ದೂರನ್ನು ಗಂಭೀರವಾಗಿ ಪರಿಗಣಿಸಿದ್ದರೆ, ಈ ಪರಿಸ್ಥಿತಿ ಸಂಭವಿಸುತ್ತಿರಲಿಲ್ಲ” ಎಂದು ನಿರುಪಮ್ ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version