Site icon Vistara News

Assam Police: ಅಸ್ಸಾಂ ಪೊಲೀಸರ ಭರ್ಜರಿ ಬೇಟೆ; 637 ಕೆ.ಜಿ. ಗಾಂಜಾ ವಶ

ganja

ganja

ದಿಸ್‌ಪುರ್‌: ಅಸ್ಸಾಂ ಪೊಲೀಸರು (Assam Police) ಶನಿವಾರ ಭರ್ಜರಿ ಬೇಟೆಯಾಡಿ ಬರೋಬ್ಬರಿ 637 ಕೆ.ಜಿ. ಗಾಂಜಾವನ್ನು (Ganja) ವಶಪಡಿಸಿಕೊಂಡಿದ್ದಾರೆ. ಸುಮಾರು 1 ಕೋಟಿ ರೂ. ಮೌಲ್ಯದ ಈ ಗಾಂಜಾವನ್ನು ತ್ರಿಪುರಾದಿಂದ ಅಕ್ರಮವಾಗಿ ಸಾಗಿಸಲಾಗುತಿತ್ತು ಎಂದು ಪೊಲೀಸರು ತಿಳಿದಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ವಿವರ

ಅಗರ್ತಲಾದಿಂದ ಆಗಮಿಸಿದ ಸರಕು ಸಾಗಣೆ ಲಾರಿಯೊಂದರ ರಹಸ್ಯ ಜಾಗದಲ್ಲಿ ಈ ಮಾದಕ ವಸ್ತುವನ್ನು ಅಡಗಿಸಿ ಇಡಲಾಗಿತ್ತು. ರಹಸ್ಯ , ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ಕಾರ್ಯಾಚರಣೆ ನಡೆಸಿ ಬೃಹತ್‌ ಪ್ರಮಾಣದ ಗಾಂಜಾ ವಶಕ್ಕೆ ಪಡೆದಿದ್ದಾರೆ. ʼʼರಹಸ್ಯ ಮಾಹಿತಿಯ ಆಧಾರದ ಮೇಲೆ ಶನಿವಾರ ಸಂಜೆ ಅಸ್ಸಾಂ-ತ್ರಿಪುರಾ ರಾಜ್ಯದ ಗಡಿ ಚೆಕ್ ಪೋಸ್ಟ್‌ನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆವು. ಚುರೈಬಾರಿ ಪ್ರದೇಶದಲ್ಲಿ ಟ್ರಕ್ ಅನ್ನು ತಡೆದು ಪರಿಶೀಲನೆ ನಡೆಸಿದಾಗ ಗಾಂಜಾ ಇರುವುದು ಪತ್ತೆಯಾಯ್ತುʼʼ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಶಯದ ಮೇರೆಗೆ ನಾಗಾಲ್ಯಾಂಡ್‌ ನೋಂದಣಿಯ(NL 02 Q 8170) ಟ್ರಕ್‌ ಅನ್ನು ಪರಿಶೀಲಿಸಿದಾಗ ರಹಸ್ಯ ಕ್ಯಾಬಿನ್‌ನಲ್ಲಿ ಅಡಗಿಸಿಟ್ಟಿದ್ದ 91 ಪ್ಯಾಕೆಟ್‌ಗಳ ಗಾಂಜಾ ಪತ್ತೆಯಾಗಿತ್ತು. ವಾಹನ ಪರಿಶೀಲನೆ ವೇಳೆ ಚಾಲಕ ಪರಾರಿಯಾಗಿದ್ದಾನೆ. ಆತನ ಪತ್ತೆಗಾಗಿ ತನಿಖೆ ನಡೆಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ವಶಪಡಿಸಿಕೊಂಡ ಗಾಂಜಾದ ಅಂದಾಜು ಮಾರುಕಟ್ಟೆ ಮೌಲ್ಯವು ಒಂದು ಕೋಟಿ ರೂ.ಗಿಂದ ಅಧಿಕ ಎಂದು ಕರೀಂಗಂಜ್ ಪೊಲೀಸ್ ವರಿಷ್ಠಾಧಿಕಾರಿ ಪಾರ್ಥ ಪ್ರತಿಮ್ ದಾಸ್ ಭಾನುವಾರ ತಿಳಿಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಮಾಹಿತಿಯನ್ನು ಮೊದಲು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ʼʼಅಸ್ಸಾಂ-ತ್ರಿಪುರಾ ಗಡಿಯ ಚುರೈಬಾರಿ ಚೆಕ್ ಪೋಸ್ಟ್‌ನಲ್ಲಿ ಟ್ರಕ್‌ನಿಂದ 637 ಕೆಜಿ ಗಾಂಜಾವನ್ನು ಕರೀಂಗಂಜ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆʼʼ ಎಂದು ಅವರು ಬರೆದುಕೊಂಡಿದ್ದರು.

3 ಅಂತಾರಾಜ್ಯ ಆರೋಪಿಗಳ ಬಂಧನ

ಕೆಲವು ದಿನಗಳ ಹಿಂದೆ ತುಮಕೂರಿನಲ್ಲಿ ಗಾಂಜಾ ಅಕ್ರಮ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ, ಮೂವರು ಅಂತಾರಾಜ್ಯ ಆರೋಪಿಗಳನ್ನು ಬಂಧಿಸಿ, ಅಕ್ರಮ ಗಾಂಜಾ ವಶಪಡಿಸಿಕೊಂಡಿದ್ದರು. ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಕ್ರಾಸಿಂಗ್‌ ಬಳಿ ಈ ಘಟನೆ ನಡೆದಿತ್ತು. ಆಂಧ್ರಪ್ರದೇಶದ ಹೆಂಜಾರಪ್ಪ, ಕರಿಯಪ್ಪ, ಚಂದ್ರಶೇಖರ್‌ ಎಂಬುವವರೇ ಬಂಧಿತ ಆರೋಪಿಗಳು. ಖಚಿತ ಮಾಹಿತಿಯ ಮೇರೆಗೆ ಪಟ್ಟನಾಯಕನಹಳ್ಳಿ ಠಾಣೆಯ ಪೊಲೀಸರು ದಾಳಿ ನಡೆಸಿ, ಸುಮಾರು 65 ಸಾವಿರ ರೂ ಬೆಲೆಬಾಳುವ 1 ಕೆ.ಜಿ. 144 ಗ್ರಾಂ ಕಡ್ಡಿ ಬೀಜ ಮಿಶ್ರಿತ ಗಾಂಜಾ ಸೊಪ್ಪು ಹಾಗೂ ಸುಮಾರು 30 ಸಾವಿರ ರೂ. ಬೆಲೆ ಬಾಳುವ 1 ಕೆಜಿ 600 ಗ್ರಾಂ ಹಸಿ ಗಾಂಜಾ ಗಿಡ ಹಾಗೂ ಮೋಟಾರ್‌ ಸೈಕಲ್‌ ಅನ್ನು ವಶ ಪಡಿಸಿಕೊಂಡಿದ್ದರು. ಈ ಕುರಿತು ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: Cyber Crime: ಪಾರ್ಟ್‌ ಟೈಂ ಜಾಬ್‌ ಆಮಿಷ; ಲಿಂಕ್‌ ಕ್ಲಿಕ್ಕಿಸಿ ಕಾಸು ಲೂಟಿ, ಹೋಯಿತು ಕೋಟಿ ಕೋಟಿ!

Exit mobile version