ನವದೆಹಲಿ: 2023ರ ಲೋಕಸಭೆ ಚುನಾವಣೆಗೆ (Lok Sabha Election 2024) ಐದೂ ರಾಜ್ಯಗಳ ವಿಧಾನಸಭೆ ಚುನಾವಣೆಯು ಸೆಮಿಫೈನಲ್ ಎಂದೇ ಹೇಳಲಾಗುತ್ತಿದೆ. ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಹಾಗೂ ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶವು (Election Results 2023) ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಮುನ್ನಡೆ ಸಿಗಬಹುದು, ಯಾರ ಪರ ಜನರ ಒಲವಿದೆ ಎಂಬುದರ ದಿಕ್ಸೂಚಿ ಎಂದೇ ಹೇಳಲಾಗುತ್ತಿದೆ.
ಛತ್ತೀಸ್‌ಗಢ 11, ಮಧ್ಯಪ್ರದೇಶ 29, ಮಿಜೋರಾಂ 1, ರಾಜಸ್ಥಾನ 25 ಹಾಗೂ ತೆಲಂಗಾಣದ 17 ಲೋಕಸಭೆ ಕ್ಷೇತ್ರ ಸೇರಿ ಐದೂ ರಾಜ್ಯಗಳಲ್ಲಿ ಒಟ್ಟು 83 ಲೋಕಸಭೆ ಕ್ಷೇತ್ರಗಳಿವೆ. ಈ ರಾಜ್ಯಗಳಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ, ಆ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರ ಗೆಲ್ಲಲು ಸಾಧ್ಯವಾಗಲಿದೆ. ಹಾಗೆಯೇ, ಜನರ ಒಲವು ಯಾವ ಪಕ್ಷದ ಕಡೆ ಇದೆ ಎಂಬುದರ ಮುನ್ಸೂಚನೆಯು ವಿಧಾನಸಭೆ ಚುನಾವಣೆಯಲ್ಲಿಯೇ ತಿಳಿಯಲಿದೆ. ಲೋಕಸಭೆ ಚುನಾವಣೆಯ ಪ್ರಚಾರಕ್ಕೂ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಮುನ್ನುಡಿ ಬರೆಯಲಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
ಐದೂ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶವು ಪ್ರತಿಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ ಹಾಗೂ ಆಡಳಿತಾರೂಢ ಮೈತ್ರಿಕೂಟಗಳ ಆಂತರಿಕ ಒಗ್ಗಟ್ಟು, ಲೋಕಸಭೆ ಚುನಾವಣೆಗೆ ಭರ್ಜರಿಯಾಗಿ ತಯಾರಾಗಲು ಬಲ ತುಂಬಲಿದೆ. ಇಂಡಿಯಾ ಒಕ್ಕೂಟದ ಪಕ್ಷಗಳಲ್ಲಿ ಸೀಟು ಹಂಚಿಕೆಯನ್ನೂ ವಿಧಾನಸಭೆ ಚುನಾವಣೆ ಫಲಿತಾಂಶ ನಿರ್ಧರಿಸಲಿದೆ. ಆಯಾ ರಾಜ್ಯಗಳಲ್ಲಿ, ಆಯಾ ಪಕ್ಷಗಳ ಆತ್ಮವಿಶ್ವಾಸವು ಹಿಮ್ಮಡಿಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಹಾಗಾಗಿಯೇ, ಎಲ್ಲರ ಗಮನವು ವಿಧಾನಸಭೆ ಚುನಾವಣೆಗಳ ಫಲಿತಾಂಶದ ಮೇಲಿದೆ.
ಆಯಾ ರಾಜ್ಯಗಳ ಲೆಕ್ಕಾಚಾರ ಹೀಗಿದೆ…
ರಾಜಸ್ಥಾನದಲ್ಲಿ ಜಾತಿ ಮತಗಳ ಲೆಕ್ಕಾಚಾರ
ರಾಜಸ್ಥಾನದಲ್ಲಿ ಜಾತಿವಾರು ಮತಗಳ ಲೆಕ್ಕಾಚಾರ ಜೋರಾಗಿದೆ. ಕಳೆದ ಬಾರಿ ಸಚಿನ್ ಪೈಲಟ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಬಿಂಬಿಸಿದ ಕಾರಣ ಪೂರ್ವ ರಾಜಸ್ಥಾನದಲ್ಲಿ ಪ್ರಾಬಲ್ಯ ಹೊಂದಿರುವ ಗುಜ್ಜರ್ ಸಮುದಾಯದ ಮತದಾರರು ಸಚಿನ್ ಪೈಲಟ್ ಅವರನ್ನು ಬೆಂಬಲಿಸಿದರು. ಇದರಿಂದಾಗಿ ಗುಜ್ಜರ್ ಸಮುದಾಯದವರು ಹೆಚ್ಚಿರುವ ಮೂರು ಜಿಲ್ಲೆಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿತು. ಈ ಬಾರಿಯೂ ಗುಜ್ಜರ್ ಸಮುದಾಯದ ಮತಗಳು ಕಾಂಗ್ರೆಸ್‌ಗೆ ನಿರ್ಣಾಯಕ ಎಂದೇ ಹೇಳಲಾಗುತ್ತಿದೆ.
ಗುಜ್ಜರ್ ಸಮುದಾಯದ ಜತೆಗೆ ಅಶೋಕ್ ಗೆಹ್ಲೋಟ್ ಅವರ ಮಾಲಿ ಸಮುದಾಯದ ಮತಗಳು ಕೂಡ ಪ್ರಮುಖವಾಗಿವೆ. ಹಾಗಾಗಿಯೇ, ಅಶೋಕ್ ಗೆಹ್ಲೋಟ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವ, ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂಬುದಾಗಿ ಘೋಷಿಸುವ ಗೋಜಿಗೆ ಕಾಂಗ್ರೆಸ್ ಹೋಗಿಲ್ಲ. ಈ ಎರಡೂ ಸಮುದಾಯದವರು ಸೇರಿ ಬಹುತೇಕ ಸಮುದಾಯಗಳು ಉಚಿತ ಗ್ಯಾರಂಟಿಗಳಿಗಿಂತ ಜಾತಿಗೆ ಹೆಚ್ಚು ಆದ್ಯತೆ ನೀಡುತ್ತಾರೆ ಎನ್ನಲಾಗುತ್ತಿದೆ.
ಮಧ್ಯಪ್ರದೇಶದಲ್ಲಿ ಒಬಿಸಿ ಮತಗಳೇ ನಿರ್ಣಾಯಕ
ಮಧ್ಯಪ್ರದೇಶದಲ್ಲಿ ಇತರೆ ಹಿಂದುಳಿದ ವರ್ಗಗಳ ಮತಗಳು ಯಾವುದೇ ಪಕ್ಷಕ್ಕೆ ಅಧಿಕಾರ ನೀಡುವಷ್ಟಿವೆ ಅಥವಾ ಒಬಿಸಿ ಮತಗಳು ಜಾಸ್ತಿ ಪಡೆದವರು ಅಧಿಕಾರಕ್ಕೇರುತ್ತಾರೆ ಎಂಬ ಮಾತಿದೆ. ಶಿವರಾಜ್ ಸಿಂಗ್ ಚೌಹಾಣ್ ಅವರು ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವ ವಿಶ್ವಾಸದಲ್ಲಿದ್ದರೆ, ಅದಕ್ಕೆ ಒಬಿಸಿ ಮತಗಳು ಅವರ ಪರವಾಗಿರುವುದೇ ಕಾರಣವಾಗಿದೆ. ಸಿದ್ಧಿಯಲ್ಲಿ ಬುಡಕಟ್ಟು ಸಮುದಾಯದವರ ವ್ಯಕ್ತಿಯೊಬ್ಬರ ಮೇಲೆ ದುಷ್ಕರ್ಮಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಬಳಿಕ ಶಿವರಾಜ್ ಸಿಂಗ್ ಚೌಹಾಣ್ ಅವರು ಕೂಡಲೇ ಸಿದ್ಧಿಗೆ ತೆರಳಿ, ಬುಡಕಟ್ಟು ಸಮುದಾಯದ ವ್ಯಕ್ತಿಯ ಪಾದ ತೊಳೆದಿದ್ದರ ಹಿಂದೆ ಇದೇ ಒಬಿಸಿ ರಣತಂತ್ರವಾಗಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ: Election Results 2023: ನಾಲ್ಕೂ ರಾಜ್ಯಗಳಲ್ಲಿ ಪೈಪೋಟಿ ಹೇಗಿದೆ? ಯಾರಿಗೆ ವಿಜಯಮಾಲೆ?
ತೆಲಂಗಾಣದಲ್ಲಿ ಮೋಡಿ ಮಾಡುವುದೇ ಮೋದಿ ಭರವಸೆ?
ತೆಲಂಗಾಣದಲ್ಲೂ ಗ್ಯಾರಂಟಿಗಳಿಗಿಂತ ಜಾತಿ ಮತಗಳೇ ಪ್ರಾಮುಖ್ಯತೆ ಪಡೆದಿವೆ. ಅದರಲ್ಲೂ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ (SC Quota) ಮಾದಿಗ ಸಮುದಾಯದವರಿಗೆ ಒಳ ಮೀಸಲಾತಿ ಕಲ್ಪಿಸಲಾಗುವುದು ಎಂದು ಘೋಷಿಸಿದ್ದಾರೆ. ಇದು ಹಿಂದುಳಿದ ವರ್ಗಗಳ ಮತಗಳನ್ನು ಕ್ರೋಡೀಕರಣಗೊಳಿಸುವ ತಂತ್ರವೇ ಆಗಿದೆ. ಛತ್ತೀಸ್‌ಗಢದಲ್ಲೂ ಇದೇ ಪರಿಸ್ಥಿತಿ ಇದೆ. ಹಾಗಾಗಿಯೇ, ಪ್ರತಿಯೊಂದು ರಾಜ್ಯದಲ್ಲೂ ಕಾಂಗ್ರೆಸ್, ಬಿಜೆಪಿ ಸೇರಿ ಎಲ್ಲ ಪ್ರಮುಖ ಪಕ್ಷಗಳು ಅಡುಗೆ ಅನಿಲ ಸಿಲಿಂಡರ್‌ಗಳಿಗೆ ಹೆಚ್ಚಿನ ಸಬ್ಸಿಡಿ ಘೋಷಿಸಿವೆ. ಹಾಗಾಗಿ, ನಾಲ್ಕೂ ರಾಜ್ಯಗಳಲ್ಲಿ ಜಾತಿ ಹಾಗೂ ಗ್ಯಾರಂಟಿಗಳು ಜನರಲ್ಲಿ ಮೋಡಿ ಮಾಡುತ್ತವೆ ಎಂದು ಹೇಳಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: http://vistaranews.com/tag/assembly-election-2023