ಪಶ್ಚಿಮ ಬಂಗಾಳ: ಇಡೀ ರಾಜ್ಯದಲ್ಲೇ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿದ್ದ ತೃಣಮೂಲ ಕಾಂಗ್ರೆಸ್(Trinamool Congress) ಮುಖಂಡರ ವಿರುದ್ಧದ ಅತ್ಯಾಚಾರ ಪ್ರಕರಣ(Atrocity on women)ದಲ್ಲಿ ಮಹತ್ವದ ಬೆಳವಣಿಗೆಯೊಂದು ಆಗಿದೆ. ಅತ್ಯಾಚಾರದ ದೂರು ನೀಡಿದ್ದ ಮೂವರು ಮಹಿಳೆಯರಲ್ಲಿ ಒಬ್ಬ ಸಂತ್ರಸ್ತೆ ಯೂ ಟರ್ನ್ ಹೊಡೆದಿದ್ದು, ಸುಳ್ಳು ದೂರು ನೀಡುವಂತೆ ಸ್ಥಳೀಯ ಬಿಜೆಪಿ ಮುಖಂಡರು(BJP Leaders) ಒತ್ತಾಯಿಸಿದ್ದರು ಎಂದು ಹೇಳಿಕೆ ನೀಡಿದ್ದಾಳೆ. ಅಲ್ಲದೇ ತನ್ನ ದೂರನ್ನು ಹಿಂಪಡೆದಿದ್ದಾಳೆ.
ಏನಿದು ಪ್ರಕರಣ?
ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಸಂದೇಶ್‌ಖಲಿಯಲ್ಲಿ ತೃಣ ಮೂಲ ಕಾಂಗ್ರೆಸ್ ನಾಯಕ ಶೇಖ್ ಷಹಜಹಾನ್ ಮತ್ತು ಅವರ ಸಹಚರರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಯುವತಿಯರ ಮೇಲೆ ‘ವ್ಯವಸ್ಥಿತ ಅತ್ಯಾಚಾರ’ ಎಸಗಿದ ಆರೋಪ ಕೇಳಿಬಂದಿದ್ದು, ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ಟಿಎಂಸಿ ಪಕ್ಷದ ಮುಖಂಡರು ಸುಂದರವಾದ ಹೆಂಡತಿ ಅಥವಾ ಚಿಕ್ಕ ಹೆಣ್ಣುಮಕ್ಕಳು ಇರುವ ಮನೆಗಳಿಗೆ ಸಮೀಕ್ಷೆ ನೆಪದಲ್ಲಿ ಬರುತ್ತಿದ್ದರು. ಮಹಿಳೆಯರನ್ನು ಪಕ್ಷದ ಕಚೇರಿಗೆ ಕರೆದೊಯ್ಯುತ್ತಿದ್ದರು. ಹಲವಾರು ರಾತ್ರಿಯವರೆಗೂ ತಮಗೆ ತೃಪ್ತಿಯಾಗುವವರೆಗೂ ಅವರನ್ನು ಅಲ್ಲಿಯೇ ಇರಿಸಿಕೊಳ್ಳುತ್ತಿದ್ದರು ಎಂದು ಮಹಿಳೆಯೊಬ್ಬರು ಹೇಳಿರುವ ವಿಡಿಯೋ ವೈರಲ್ ಆಗಿದ್ದು ಇಡೀ ದೇಶದಲ್ಲಿ ಸುದ್ದಿಯಾಗಿತ್ತು.
ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯ ಶೇಖ್ ಷಹಜಹಾನ್ ವಿರುದ್ಧ ‘ವ್ಯವಸ್ಥಿತ ಲೈಂಗಿಕ ದೌರ್ಜನ್ಯ’ ಮತ್ತು ಭೂ ಕಬಳಿಕೆಯ ಆರೋಪ ಕೇಳಿಬಂದಿತ್ತು. ಈತನೇ ಮುಖ್ಯ ತಪ್ಪಿತಸ್ಥ ಎಂದು ಮಹಿಳೆಯರು ಆರೋಪಿಸಿದ್ದಾರೆ. ಬಹಳ ಪ್ರಭಾವಿ ಟಿಎಂಸಿ ನಾಯಕರಾಗಿರುವ ಷಹಜಹಾನ್ ಶೇಖ್ ಮತ್ತು ಅವರ ಸಹಚರರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳನ್ನು ಮಾಡಿ ಸಂದೇಶ್‌ಖಾಲಿಯ ಮಹಿಳೆಯರು ನಡೆಸುತ್ತಿದ್ದ ಪ್ರತಿಭಟನೆ, ಇತ್ತೀಚೆಗೆ ಉಗ್ರ ಸ್ವರೂಪ ಪಡೆದುಕೊಂಡಿತ್ತು. ಇದಾದ ಮೇಲೆ ಷಹಜಹಾನ್ ಮೇಲೆ ಇಡಿ ರೇಡ್ ಕೂಡ ನಡೆದಿತ್ತು.
ಯೂಟರ್ನ್ ಹೊಡೆದ ಮಹಿಳೆ ಹೇಳೋದೇನು?
ಷಹಜಹಾನ್ ಮತ್ತು ಆತನ ಸಹಚರರ ವಿರುದ್ಧ ದೂರು ದಾಖಲಿಸಿದ್ದ ಮೂವರು ಮಹಿಳೆಯರಲ್ಲಿ ಒಬ್ಬಳು ತನ್ನ ದೂರನ್ನು ವಾಪಾಸ್ ಪಡೆದಿದ್ದು, ಬಿಜೆಪಿಯ ಕುಮ್ಮಕ್ಕು ಎಂದು ಹೇಳಿದ್ದಾಳೆ.ಬಿಜೆಪಿಯ ಸ್ಥಳೀಯ ಮುಖಂಡರು ನನ್ನನ್ನು ಬೆದರಿಸಿ ಖಾಲಿ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದರು. ಬಿಜೆಪಿ ಮಹಿಳಾ ಮೋರ್ಛಾದ ನಾಯಕರು ನಮ್ಮ ಮನೆಗೆ ಬಂದು ಸುಳ್ಳು ಅತ್ಯಾಚಾರ ದೂರಿಗೆ ಸಹಿ ಮಾಡುವಂತೆ ಒತ್ತಾಯಿಸಿದ್ದರು. ಇದಾದ ಮೇಲೆ ಪೊಲೀಸ್ ಠಾಣೆಗೂ ಕರೆದೊಯ್ದು ಅತ್ಯಾಚಾರ ಪ್ರಕರಣ ದಾಖಲಿಸಿದರು. ನನ್ನ ಮೇಲೆ ಯಾವ ಟಿಎಂಸಿ ಮುಖಂಡನೂ ಅತ್ಯಾಚಾರ ಮಾಡಿಲ್ಲ. ರಾತ್ರಿ ವೇಳೆ ಟಿಎಂಸಿ ಕಚೇರಿಗೆ ಬರುವಂತೆ ಯಾರೂ ಒತ್ತಾಯಿಸಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಅಲ್ಲದೇ ಇದೀಗ ಆಕೆ ಬಿಜೆಪಿ ವಿರುದ್ಧವೇ ದೂರು ನೀಡಿದ್ದಾಳೆ. ಮತ್ತೊಂದೆಡೆ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಹಾಗೂ ಬಿಜೆಪಿ ನಾಯಕರ ವಿರುದ್ಧ ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು ನೀಡಿದೆ.