ಲಕ್ನೋ: ಉತ್ತರ ಪ್ರದೇಶದ (Uttar Pradesh) ಬಾರಾಬಂಕಿ ಜಿಲ್ಲೆಯಲ್ಲಿ ಆಮಿಷದ ಮೂಲಕ ಹಿಂದೂಗಳ ದೊಡ್ಡ ಗುಂಪೊಂದನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲು ಪ್ರಯತ್ನಿಸಿದ (Attempting to Convert) ಆರೋಪದ ಮೇಲೆ ಚರ್ಚ್ ಪಾದ್ರಿ ಸೇರಿದಂತೆ ಹತ್ತು ಜನರನ್ನು ಬಂಧಿಸಲಾಗಿದೆ. ರಾಜ್ಯದ ಮತಾಂತರ ತಡೆ ಕಾನೂನು ಪ್ರಕಾರ (Anti-conversion law) ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ
ಸೋಮವಾರ (ಫೆಬ್ರವರಿ 5) ಬಾರಾಬಂಕಿ ಜಿಲ್ಲೆಯ ದೇವಾ ಪ್ರದೇಶದ ಸೈಂಟ್ ಮ್ಯಾಥ್ಯೂಸ್ ಮೆಥೋಡಿಸ್ಟ್ ಚರ್ಚ್‌ನಲ್ಲಿ ಜನರನ್ನು ಒಟ್ಟುಗೂಡಿಸಿ ಸಾಮೂಹಿಕ ಮತಾಂತರಕೆ ಯತ್ನಿಸಲಾಗಿತ್ತು. ಇದನ್ನು ವಿಫಲಗೊಳಿಸಿದ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದಾರೆ.
ʼʼಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ವಿಜಯ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ವೇಳೆ ಚರ್ಚ್‌ನ ಹಾಲ್‌ನಲ್ಲಿ 200ಕ್ಕಿಂತಲೂ ಅಧಿಕ ಮಂದಿ ಸೇರಿದ್ದರು. ಇವರೆಲ್ಲ ಪರಿಶಿಷ್ಟ ಜಾತಿ ವಿಭಾಗಕ್ಕೆ ಸೇರಿದವರು. ಚರ್ಚ್‌ನ ಪಾದ್ರಿಯ ಆಹ್ವಾನದ ಮೇರೆಗೆ ಇವರೆಲ್ಲ ಆಗಮಿಸಿದ್ದರುʼʼ ಎಂದು ಬಾರಾಬಂಕಿ (ಸಿಟಿ) ಸರ್ಕಲ್ ಆಫೀಸರ್ ಬೀನು ಸಿಂಗ್ ತಿಳಿಸಿದ್ದಾರೆ. ʼʼಧಾರ್ಮಿಕ ಚಟುವಟಿಕೆಗಳ ಮೂಲಕ ಕಾಯಿಲೆಗೆ ಚಿಕಿತ್ಸೆ ನೀಡುವ ನೆಪದಲ್ಲಿ ಈ ಜನರನ್ನು ಅಯೋಧ್ಯೆಯಿಂದ ಕರೆತರಲಾಗಿತ್ತು. ಅಲ್ಲದೆ ಅವರಿಗೆ ಉದ್ಯೋಗದ ಆಮಿಷವನ್ನೂ ಒಡ್ಡಲಾಗಿತ್ತು. ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಮಾಡುವ ಮೂಲಕ ಪಾದ್ರಿ ಮತ್ತು ಇತರರು ಅವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲು ಪ್ರಯತ್ನಿಸುತ್ತಿದ್ದರು” ಎಂದು ಬೀನು ಸಿಂಗ್ ವಿವರಿಸಿದ್ದಾರೆ.
ʼʼಈ ಪೈಕಿ ಬಹುತೇಕರು ಅನಕ್ಷರಸ್ಥರು. ತಾವು ಯಾಕಾಗಿ ಆಗಮಿಸಿದ್ದೇವೆ ಎನ್ನುವುದು ಕೂಡ ಅವರಿಗೆ ತಿಳಿದಿರಲಿಲ್ಲ. ಪಾದ್ರಿ ಸುಳ್ಳು ಭರವಸೆ ಮೂಲಕ ಅವರ ಹಾದಿ ತಪ್ಪಿಸುವ ಪ್ರಯತ್ನದಲ್ಲಿದ್ದರು. ಧಾರ್ಮಿಕ ಚಟುವಟಿಕೆ ಮೂಲಕ ಅವರ ಅನಾರೋಗ್ಯವನ್ನು ಹೋಗಲಾಡಿಸುವುದಾಗಿ ಅವರನ್ನು ನಂಬಿಸಿದ್ದರುʼʼ ಎಂದು ಬೀನು ಸಿಂಗ್ ಹೇಳಿದ್ದಾರೆ.
ಬಂಧಿತರು
ಚರ್ಚ್‌ನ ಪಾದ್ರಿ ಫಾದರ್ ಡೊಮೆನಿಕ್, ಸರ್ಜು ಪ್ರಸಾದ್ ಗೌತಮ್, ಪವನ್ ಕುಮಾರ್, ಸುನಿಲ್ ಪಾಸಿ, ಘನಶ್ಯಾಮ್ ಗೌತಮ್, ಸುರೇಂದ್ರ ಪಾಸ್ವಾನ್, ರಾಹುಲ್ ಪಾಸ್ವಾನ್, ರಾಮಚಂದ್ರನ್ ರಾವತ್, ಧರ್ಮೇಂದ್ರ ಕೋರಿ ಮತ್ತು ಸೂರಜ್ ಗೌತಮ್ ಬಂಧಿತರು.
ಇದನ್ನೂ ಓದಿ: Religious Conversion: ಶಿವಮೊಗ್ಗದಲ್ಲಿ ಆಮಿಷವೊಡ್ಡಿ ಮತಾಂತರಕ್ಕೆ ಯತ್ನ; ಪಾದ್ರಿ ಸೇರಿ ಹಲವರು ಪೊಲೀಸ್ ವಶಕ್ಕೆ
ʼʼಈ ಪ್ರಕರಣದಲ್ಲಿ 15 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಮುಖ್ಯಸ್ಥ ಬ್ರಿಜೇಶ್ ಕುಮಾರ್ ವೈಷ್ ಮತ್ತು ಭಜರಂಗ ದಳದ ಜಿಲ್ಲಾ ಸಂಚಾಲಕ ಅಖಂಡ ಪ್ರತಾಪ್ ಸಿಂಗ್ ಅವರ ದೂರಿನ ಮೇಲೆ ಪ್ರಕರಣ ದಾಖಲಿಸಲಾಗಿದೆʼʼ ಎಂದು ಬೀನು ಸಿಂಗ್ ತಿಳಿಸಿದ್ದಾರೆ. ʼʼಇನ್ನು 5 ಮಂದಿ ತಲೆ ಮರೆಸಿಕೊಂಡಿದ್ದಾರೆ. ಈ ಪೈಕಿ ಲಕ್ನೋ ಮೂಲದ ಇಬ್ಬರು ಪ್ರಮುಖ ಅರೋಪಿಗಳು. ಜನರನ್ನು ಕರೆತರುವಲ್ಲಿ ಇವರು ಪ್ರಧಾನ ಪಾತ್ರ ವಹಿಸಿದ್ದರು. ಇವರ ಪತ್ತೆಗೆ ಬಲೆ ಬೀಸಲಾಗಿದ್ದು, ಶೀಘ್ರದಲ್ಲಿಯೇ ಇವರನ್ನೂ ಬಂಧಿಸಲಾಗುವುದುʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ