ಬೆಂಗಳೂರು, ಕರ್ನಾಟಕ: ಮರು ಬಳಕೆ ರಾಕೆಟ್ ವಿಷಯದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಮತ್ತೊಂದು ಹಂತಕ್ಕೆ ಏರಿದೆ. ಚಿತ್ರದುರ್ಗದ ಇಸ್ರೋ ಏರೋನಾಟಿಕಲ್ ಟೆಸ್ಟ್ ರೇಂಜ್(ATR)ನಲ್ಲಿ ಮರುಬಳಕೆ ಮಾಡಬಹುದಾದ ವಾಹನ(RLV)ದ ಆಟಾನಮಸ್ ಲ್ಯಾಂಡಿಂಗ್ ಮಿಷನ್ ಯಶಸ್ವಿಯಾಗಿ ಭಾನುವಾರ ಬೆಳಗ್ಗೆ ಪರೀಕ್ಷೆ ಮಾಡಲಾಗಿದೆ. ಈ ವಿಷಯವನ್ನು ಇಸ್ರೋ ತಿಳಿಸಿದೆ.
ಈ ಸಂಬಂಧ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಇಸ್ರೋ, ಭಾರತವು ಪ್ರಮುಖ ಸಾಧನೆಯನ್ನು ಮಾಡಿದೆ. ಡಿಆರ್‌ಡಿಒ ಜತೆಗೂಡಿ ಇಸ್ರೋ ಭಾನುವಾರ ಬೆಳಗ್ಗೆ, ಕರ್ನಾಟಕದ ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ರಿಯೂಸ್‌ಬಲ್ ಲಾಂಚ್ ವೆಹಿಕಲ್ ಆಟಾನಮಸ್ ಲ್ಯಾಂಡಿಂಗ್ ಮಿಷನ್(RLV LEX) ಯಶಸ್ವಿ ಪರೀಕ್ಷೆ ಮಾಡಲಾಗಿದೆ. ಭಾರತೀಯ ವಾಯು ಪಡೆಯ ಚೆನೋಕ್ ಹೆಲಿಕಾಪ್ಟ್ ಮೂಲಕ ಆರ್‌ಎಲ್‌ವಿ ಬೆಳಗ್ಗೆ 7.10ಕ್ಕೆ ಟೇಕ್ ಆಫ್ ಆಯ್ತು. ಆರ್‌ಎಲ್‌ವಿ ಬಿಡುಗಡೆಯು ಸ್ವಾಯತ್ತವಾಗಿತ್ತು. ನಂತರ ಇಂಟಿಗ್ರೇಟೆಡ್ ನ್ಯಾವಿಗೇಷನ್, ಗೈಡೆನ್ಸ್ ಮತ್ತು ಕಂಟ್ರೋಲ್ ಸಿಸ್ಟಮ್ ಅನ್ನು ಬಳಸಿಕೊಂಡು 7:40ಕ್ಕೆ ಆಟಾನಮಸ್ ಲ್ಯಾಂಡಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿತು. ಈ ಮೂಲಕ ಬಾಹ್ಯಾಕಾಶ ವಾಹನದ ಆಟಾನಮಸ್ ಲ್ಯಾಂಡಿಂಗ್ ಅನ್ನು ಇಸ್ರೋ ಯಶಸ್ವಿಯಾಗಿ ಸಾಧಿಸಿ, ಮತ್ತೊಂದು ಹಂತಕ್ಕೆ ಏರಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಒಂದು ವೇಳೆ, ಬಾಹ್ಯಾಕಾಶದಿಂದ ರಾಕೆಟ್ ಬಂದರೆ ಯಾವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆಯೋ ಅಂಥದ್ದೇ ಪರಿಸ್ಥಿತಿಯಲ್ಲಿ ಮರ ಬಳಸಬಹುದಾದ ಉಡಾವಣಾ ವಾಹನದ ಸ್ವಾಯತ್ತ ಲ್ಯಾಂಡಿಂಗ್ ಪರೀಕ್ಷೆಯನ್ನು ಕೈಗೊಳ್ಳಲಾಯಿತು. ಅಂದರೆ, ಮಾನವ ರಹಿತ ರಾಕೆಟ್, ಲ್ಯಾಂಡಿಂಗ್ ಹೈ ಸ್ಪೀಡ್ ಮತ್ತು ರಿಟರ್ನಿಂಗ್ ಸೇಮ್ ಪಾಥ್‌ನ ಸ್ಥಿತಿಗಳಲ್ಲಿ ಈ ಪರೀಕ್ಷೆಯನ್ನು ಕೈಗೊಳ್ಳಲಾಯಿತು. ಸ್ವಾಯತ್ತ ಲ್ಯಾಂಡಿಂಗ್ ಪರೀಕ್ಷೆಗೆ ಸ್ಥಳೀಯ ನ್ಯಾವಿಗೇಷನ್, ಉಪಕರಣಗಳು, ಸಂವೇದಕಗಳು ಸೇರಿದಂತೆ ಇತ್ಯಾದಿ ಸ್ಥಳೀಯ ವ್ಯವಸ್ಥೆಗಳನ್ನು ಬಳಸಿಕೊಂಡು ಮಾಡಿರುವುದು ಇಸ್ರೋದ ಹೆಚ್ಚುಗಾರಿಕೆಯಾಗಿದೆ. ಈ ಎಲ್ಲ ವ್ಯವಸ್ಥೆಗಳನ್ನು ಇಸ್ರೋ ಅಭಿವೃದ್ದಿಪಡಿಸಿದೆ.
ಇದನ್ನೂ ಓದಿ: ISRO YUVIKA: ಇಸ್ರೋ ಯುವ ವಿಜ್ಞಾನಿ ಕಾರ್ಯಕ್ರಮ ಯುವಿಕಾಗೆ ನೋಂದಣಿ ಶುರು, ಯಾವ ವಿದ್ಯಾರ್ಥಿಗಳು ಅರ್ಹರು?
ವಿಎಸ್‌ಎಸ್‌ಸಿ ನಿರ್ದೇಶಕ ಡಾ ಎಸ್ ಉನ್ನಿಕೃಷ್ಣನ್ ನಾಯರ್ ಮತ್ತು ಎಟಿಎಸ್‌ಪಿ ಕಾರ್ಯಕ್ರಮ ನಿರ್ದೇಶಕ ಶ್ಯಾಮ್ ಮೋಹನ್ ಎನ್ ತಂಡಗಳಿಗೆ ಮಾರ್ಗದರ್ಶನ ನೀಡಿದರು. ಆರ್‌ಎಲ್‌ವಿ ಯೋಜನಾ ನಿರ್ದೇಶಕ ಡಾ.ಜಯಕುಮಾರ್ ಎಂ ಅವರು ಮಿಷನ್ ನಿರ್ದೇಶಕರಾಗಿದ್ದರು. ಆರ್‌ಎಲ್‌ವಿಯ ಸಹಾಯಕ ಯೋಜನಾ ನಿರ್ದೇಶಕರಾದ ಮುತ್ತುಪಾಂಡಿಯನ್ ಜೆ ಮಿಷನ್‌ಗೆ ವಾಹನ ನಿರ್ದೇಶಕರಾಗಿದ್ದರು. ಈ ಸಂದರ್ಭದಲ್ಲಿ ISTRAC ನಿರ್ದೇಶಕ ರಾಮಕೃಷ್ಣ ಉಪಸ್ಥಿತರಿದ್ದರು. ಅಧ್ಯಕ್ಷರು, ಇಸ್ರೋ/ಕಾರ್ಯದರ್ಶಿ, ಡಿಒಎಸ್ ಸೋಮನಾಥ್ ಅವರು ಪರೀಕ್ಷೆಯನ್ನು ವೀಕ್ಷಿಸಿದರು ಮತ್ತು ತಂಡವನ್ನು ಅಭಿನಂದಿಸಿದರು.