ಅಯೋಧ್ಯೆ: ಒಂದು ಕಡೆ ದೇವಾಲಯ ನಗರಿ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆ ಆಗುತ್ತಿದ್ದು, ಇಡೀ ದೇಶದ ಗಮನ ಅತ್ತ ತಿರುಗಿದೆ. ಅದೇ ನಗರದ ಇನ್ನೊಂದು ಕಡೆ, ಇದೇ ಶ್ರೀರಾಮ ಜನ್ಮಭೂಮಿ ಪ್ರಕರಣ ಇತ್ಯರ್ಥದ ಸಂದರ್ಭದಲ್ಲಿ ಮಸೀದಿ (Ayodhya Masjid, Ayodhya Mosque) ನಿರ್ಮಾಣಕ್ಕಾಗಿ ನೀಡಲಾದ ಜಾಗದಲ್ಲಿ ಏನಾಗುತ್ತಿದೆ?
ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು (ADA) ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಜಾಗವನ್ನು ಮಂಜೂರು ಮಾಡಿತ್ತು. ಇದೀಗ ಆ ಜಾಗ ಯಾವುದೇ ಕಟ್ಟಡಗಳಿಲ್ಲದೇ ಖಾಲಿ ಉಳಿದಿದ್ದು, ಅಲ್ಲಿ ಆಡುಗಳು, ದನಗಳು ಮೇಯುತ್ತಿವೆ!
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಪ್ರಕರಣ ಇತ್ಯರ್ಥದ ಸಂದರ್ಭದಲ್ಲಿ ಮಸೀದಿ ನಿರ್ಮಾಣಕ್ಕೆ ಪರ್ಯಾಯ ಸ್ಥಳವನ್ನು ಒದಗಿಸಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅದರಂತೆ 5 ಎಕರೆ ಪರ್ಯಾಯ ಜಾಗವನ್ನು ಒದಗಿಸಲಾಗಿದ್ದು, ಧನ್ನಿಪುರ ಮಸೀದಿ ನಿರ್ಮಾಣಕ್ಕೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಅನುಮೋದನೆ ನೀಡಿ ಒಂದು ವರ್ಷ ಕಳೆದಿದೆ. ಆದರೆ ಈ ಜಾಗ ಇನ್ನೂ ಅಭಿವೃದ್ಧಿಯಾಗದೆ ಉಳಿದಿದೆ.
ಈ ಮಸೀದಿ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳಬೇಕಾಗಿರುವ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (IICF) ಸದಸ್ಯರ ಪ್ರಕಾರ, ಪ್ರಾರಂಭದಲ್ಲಿ ಜಾಗದ ನಿರಾಕ್ಷೇಪಣಾ ಪ್ರಮಾಣಪತ್ರ ವಿಳಂಬವಾಗಿತ್ತು. ನಂತರ ಇದೀಗ ಮಸೀದಿ ಕಟ್ಟಲು ಹಣಕಾಸಿನ ಕೊರತೆ ತಲೆದೋರಿದೆ. ಈ ಸ್ಥಳ ಅಯೋಧ್ಯೆಯ ಮುಖ್ಯ ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿದೆ. ಪ್ರಸ್ತುತ ಈ ಜಾಗದಲ್ಲಿ ಕೇವಲ ಸೈನ್‌ಬೋರ್ಡ್ ಮಾತ್ರ ಇದೆ.
ಧನ್ನಿಪುರ ಮಸೀದಿ ಸೈಟ್ ನಿರ್ಮಾಣಕ್ಕೆ ಅಗತ್ಯವಾದ ಅನುಮೋದನೆಗಳು ಮತ್ತು ಹಣಕ್ಕಾಗಿ ಐಐಸಿಎಫ್ ಕಾಯುತ್ತಿದೆ. 2024ರ ಮೇ ತಿಂಗಳಿನಲ್ಲಿ ಜಾಗ ಅಭಿವೃದ್ಧಿಯ ಮುಂದಿನ ಹಂತವನ್ನು ಆರಂಭಿಸಲು ಟ್ರಸ್ಟ್ ಯೋಜಿಸುತ್ತಿದೆ. ಈ ಮಸೀದಿ ಯೋಜನೆಗೆ ದೇಣಿಗೆ ಸಂಗ್ರಹಿಸಲು ರಾಜ್ಯವಾರು ಪ್ರತಿನಿಧಿಗಳನ್ನು ನೇಮಿಸಿದೆ.
“ಹಣದ ಕೊರತೆ ಹಾಗೂ ಆಡಳಿತಾತ್ಮಕ ವಿಳಂಬದಿಂದಾಗಿ ಧನ್ನಿಪುರದಲ್ಲಿ ಮಸೀದಿ ನಿರ್ಮಾಣ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈಗ ಮಸೀದಿ ನಿರ್ಮಾಣಕ್ಕಾಗಿ ರಾಮಮಂದಿರದಂತಹ ಅಭಿಯಾನವನ್ನು ಆರಂಭಿಸುವುದಾಗಿ” ಐಐಸಿಎಫ್ ಹೇಳಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ನೇಮಕಗೊಂಡ ಮಸೀದಿ ಅಭಿವೃದ್ಧಿ ಸಮಿತಿಯ ನೂತನ ಮುಖ್ಯಸ್ಥ ಹಾಜಿ ಅರಾಫತ್ ಶೇಖ್ ಅವರು ಹೊಸ ಮಸೀದಿಯ ಅಭಿವೃದ್ಧಿಗೆ ಮುಂದಾಗಿದ್ದಾರೆ. ಶೇಖ್ ಅವರು ಮಹಾರಾಷ್ಟ್ರದ ಬಿಜೆಪಿ ನಾಯಕ. ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಕಾರ್ಯವನ್ನು ಮುಂದಕ್ಕೆ ಕೊಂಡೊಯ್ಯಲು ಟ್ರಸ್ಟ್ ರಚಿಸಲಾಗಿದೆ ಎಂದು ಐಐಸಿಎಫ್ ಅಧ್ಯಕ್ಷ ಜಾಫರ್ ಅಹ್ಮದ್ ಫಾರೂಕ್ ಹೇಳಿದ್ದಾರೆ. ಆದರೆ ಮಸೀದಿಗೆ ಮಸ್ಜಿದ್-ಎ-ಅಯೋಧ್ಯ ಎಂದು ಹೆಸರಿಸುವ ಪ್ರಸ್ತಾಪವನ್ನು ಶೇಖ್ ವಿರೋಧಿಸಿದ್ದಾರೆ. ಅದನ್ನು ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿ ಎಂದು ಬದಲಾಯಿಸಿದ್ದಾರೆ.
4,500 ಚದರ ಮೀಟರ್ ವಿಸ್ತೀರ್ಣದಲ್ಲಿ ರಚಿಸಲು ಉದ್ದೇಶಿಸಲಾಗಿರುವ ಮಸೀದಿಯೊಂದಿಗೆ ಆಸ್ಪತ್ರೆ, ಸಮುದಾಯ ಅಡುಗೆಮನೆ, ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರ ಇರುತ್ತದಂತೆ. ಪ್ರತಿಷ್ಠಾನವು ಭಾರತದ ಅತಿದೊಡ್ಡ ಮಸೀದಿಯನ್ನು ನಿರ್ಮಿಸಲು ಉದ್ದೇಶಿಸಿದೆ. “ಇದು ತಾಜ್ ಮಹಲ್‌ಗಿಂತಲೂ ದೊಡ್ಡಗಿರುತ್ತದೆ” ಎಂದು ಅದು ಹೇಳಿದೆ.
ಇದರ ಜೊತೆಗೆ, “ಸುಮಾರು 21 ಅಡಿಗಳಷ್ಟು ಉದ್ದವಾಗಿರುವ ವಿಶ್ವದ ಅತಿದೊಡ್ಡ ಕುರಾನ್ ಅನ್ನು ಮಸೀದಿಯಲ್ಲಿ ಇರಿಸಲಾಗುವುದು” ಎಂದು ಶೇಖ್ ಹೇಳಿದ್ದಾರೆ. ಈ ಮಸೀದಿಯು ಐದು ಮಿನಾರ್‌ಗಳನ್ನು ಹೊಂದಿರುವ ಭಾರತದ ಮೊದಲ ಮಸೀದಿಯಾಗಿದೆ. ಆಜಾನ್ ಸಮಯದಲ್ಲಿ ನೀರು ಮತ್ತು ಬೆಳಕಿನ ಪ್ರದರ್ಶನವನ್ನು ಆಯೋಜಿಸಲು, ಭಾರಿ ದೀಪಾಲಂಕಾರವನ್ನು, ದುಬೈನಲ್ಲಿರುವಂಥ ಅಕ್ವೇರಿಯಂ ಅನ್ನು ರಚಿಸಲು ಕೂಡ ಇಲ್ಲಿ ಯೋಜಿಸಲಾಗುತ್ತಿದೆ.
ಇದನ್ನೂ ಓದಿ: Ayodhya Mosque: ಅಯೋಧ್ಯೆ ಮಸೀದಿಯ ವಿನ್ಯಾಸವೇ ದಿಢೀರ್ ಬದಲು; ಏನಿದಕ್ಕೆ ಕಾರಣ?