Site icon Vistara News

Ayodhya Ram Mandir: ಅಮೆರಿಕದಲ್ಲಿ ರಾಮ ಮಂದಿರ ಪ್ರತಿಷ್ಠಾಪನೆಯ 40 ಬಿಲ್‌ಬೋರ್ಡ್

ram mandir bilbords

ವಾಷಿಂಗ್ಟನ್: ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram Mandir) ನಡೆಯುತ್ತಿರುವ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಹಿನ್ನೆಲೆಯಲ್ಲಿ, ಭಾರತದಿಂದ ಸಾವಿರಾರು ಮೈಲುಗಳ ದೂರದಲ್ಲಿರುವ ಅಮೆರಿಕದಲ್ಲಿಯೂ ಸಂಭ್ರಮ ಮೇಳೈಸಿದೆ. ಇಲ್ಲಿನ 10 ರಾಜ್ಯಗಳಲ್ಲಿ 40ಕ್ಕೂ ಹೆಚ್ಚು ಬೃಹತ್‌ ಜಾಹೀರಾತು ಫಲಕಗಳನ್ನು ಹಾಕಲಾಗಿದೆ.

ಪ್ರಾಣ ಪ್ರತಿಷ್ಠೆಯ ನಿಮಿತ್ತವಾಗಿ ಪ್ರಪಂಚದಾದ್ಯಂತ ನೂರಾರು ಕಡೆ ಹಲವು ಕಾರ್ಯಕ್ರಮಗಳು ಮತ್ತು ಆಚರಣೆಗಳು ನಡೆಯುತ್ತಿವೆ. ಅವುಗಳಲ್ಲಿ, ಅಮೆರಿಕದಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅಲ್ಲಿನ ಹಿಂದೂ ಸಮುದಾಯದ ಸಹಯೋಗದೊಂದಿಗೆ, 10 ರಾಜ್ಯಗಳಲ್ಲಿ 40ಕ್ಕೂ ಹೆಚ್ಚು ಬಿಲ್‌ಬೋರ್ಡ್‌ಗಳನ್ನು ಸ್ಥಾಪಿಸಿದೆ. ಇದು ಅಯೋಧ್ಯೆಯಲ್ಲಿ ನಡೆಯಲಿರುವ ಭವ್ಯವಾದ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದ ಕುರಿತ ಸಂದೇಶವನ್ನು ಪ್ರದರ್ಶಿಸುತ್ತಿವೆ.

ಟೆಕ್ಸಾಸ್, ಇಲಿನಾಯ್ಸ್, ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ಜಾರ್ಜಿಯಾ ಮತ್ತಿತರ ರಾಜ್ಯಗಳಲ್ಲಿ ಜಾಹೀರಾತು ಫಲಕಗಳು ಕಂಡುಬಂದಿವೆ. ವಿಹಿಂಪದ ಪ್ರಕಾರ ಜನವರಿ 15ರ ಸೋಮವಾರದಿಂದ ಪ್ರಾರಂಭವಾಗುವ ಈ ಕಾರ್ಯಕ್ರಮಗಳ ಆಚರಣೆಗೆ ಅರಿಜೋನಾ ಮತ್ತು ಮಿಸೌರಿ ರಾಜ್ಯಗೂ ಕೂಡ ಸೇರಲು ಸಿದ್ಧವಾಗಿವೆ.

“ಈ ಜಾಹೀರಾತು ಫಲಕಗಳು ಸಾರುವ ಸಂದೇಶವೆಂದರೆ ಹಿಂದೂ ಅಮೇರಿಕನ್ನರು ಜೀವನದಲ್ಲಿ ಒಮ್ಮೆ ಮಾತ್ರ ನಡೆಯುವ ಈ ಇವೆಂಟ್‌ನಲ್ಲಿ ಉತ್ಸಾಹದಿಂದ ಮತ್ತು ಸಂತೋಷದಿಂದ ಭಾಗವಹಿಸುತ್ತಿದ್ದಾರೆ. ಅವರು ಪವಿತ್ರ ಸಮಾರಂಭದ ಮಂಗಳಕರ ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ” ಎಂದು ಅಮೆರಿಕದ ಹಿಂದೂ ಪರಿಷತ್‌ ಪ್ರಧಾನ ಕಾರ್ಯದರ್ಶಿ ಅಮಿತಾಭ್ ವಿಡಬ್ಲ್ಯೂ ಮಿತ್ತಲ್ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯ ಸ್ಮರಣಾರ್ಥ ಅಮೆರಿಕದಾದ್ಯಂತ ಹಿಂದೂ ಅಮೆರಿಕನ್ ಸಮುದಾಯವು ಹಲವಾರು ಕಾರ್ ರ್ಯಾಲಿಗಳನ್ನು ಹಾಗೂ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಯೋಜಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನವರಿ 22ರಂದು ಭವ್ಯ ಮಂದಿರದ ಗರ್ಭಗುಡಿಯಲ್ಲಿ ಶ್ರೀರಾಮ ಲಲ್ಲಾ ವಿಗ್ರಹದ ವಿಧ್ಯುಕ್ತ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂದಿರ ಉದ್ಘಾಟನೆಗೆ ಸಮಾಜದ ಎಲ್ಲಾ ಕ್ಷೇತ್ರಗಳ ನಾಯಕರು ಮತ್ತು ಗಣ್ಯರನ್ನು ಆಹ್ವಾನಿಸಲಾಗಿದೆ. ದೇವಾಲಯದ ಅಧಿಕಾರಿಗಳ ಪ್ರಕಾರ ಸಮಾರಂಭ ಜನವರಿ 16ರಿಂದ ಏಳು ದಿನಗಳ ಕಾಲ ನಡೆಯಲಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜನವರಿ 22ರಂದು ಮಧ್ಯಾಹ್ನ ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮ ಲಲ್ಲಾನನ್ನು ಸಿಂಹಾಸನಾರೋಹಣ ಮಾಡಲು ನಿರ್ಧರಿಸಿದೆ.

Exit mobile version