ಹೊಸದಿಲ್ಲಿ: ಅಯೋಧ್ಯೆ ರಾಮ ಮಂದಿರದ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆಯ ಗಳಿಗೆ ಸಮೀಪಿಸುತ್ತಿರುವಂತೆ, 2024ನ್ನೂ ಶ್ರೀರಾಮನನ್ನೂ ಜೋಡಿಸಿದ ಒಂದು ಅಂಚೆ ಚೀಟಿಯ ಫೋಟೋ ಎಲ್ಲೆಡೆ ವೈರಲ್ (Viral Story) ಆಗುತ್ತಿದೆ. ಈ ಅಂಚೆ ಚೀಟಿ (Nepa Postal Stamp) 57 ವರ್ಷಗಳ ಹಿಂದಿನದಾಗಿದ್ದು, ರಾಮ ಮಂದಿರ ಉದ್ಘಾಟನೆಯ ಸಮಯವನ್ನು ಅಷ್ಟು ಹಿಂದೆಯೇ ಸೂಚಿಸಿತ್ತು ಎಂದು ಹೇಳಲಾಗುತ್ತಿದೆ.
ಇದು ನೇಪಾಳದ ಅಂಚೆ ಚೀಟಿ. ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಅಂಚೆ ಚೀಟಿಯನ್ನು 1967ರಲ್ಲಿ ನೇಪಾಳದಲ್ಲಿ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಶ್ರೀರಾಮ ಹಾಗೂ ಸೀತೆಯರ (Ram and Sita) ಚಿತ್ರವಿದೆ. ಜೊತೆಗೆ 2024 ಎಂದು ಇಸವಿಯನ್ನು ನಮೂದಿಸಲಾಗಿದೆ!
ಈ ಅಪರೂಪದ ಅಂಚೆ ಚೀಟಿ ಲಖನೌದ ಅಶೋಕ್ ಕುಮಾರ್ ಎಂಬವರ ಬಳಿ ಇದೆ. ಅವರು ಅದನ್ನು ತಮ್ಮ ʼದಿ ಲಿಟಲ್ ಮ್ಯೂಸಿಯಂʼನಲ್ಲಿ ಇರಿಸಿದ್ದಾರೆ. ಈ ಅಂಚೆಚೀಟಿಯನ್ನು ಅಪರೂಪ ಎಂದು ಕರೆಯಲಾಗುತ್ತಿದೆ. ಏಕೆಂದರೆ ಇದರ ಇತಿಹಾಸದಲ್ಲಿ ರಹಸ್ಯ ಅಡಗಿದೆ.
1967ರಲ್ಲಿ ಬಿಡುಗಡೆಯಾದ ಈ ಅಂಚೆ ಚೀಟಿಯನ್ನು ಭಗವಾನ್ ರಾಮ ಮತ್ತು ಸೀತೆಗೆ ಸಮರ್ಪಿಸಲಾಗಿದೆ. ಆಗ ಇದರ ಬೆಲೆ 15 ಪೈಸೆ ಇತ್ತು. ಈ ಅಂಚೆ ಚೀಟಿಯ ಮೇಲೆ ʼರಾಮ ನವಮಿ 2024ʼ ಎಂದು ಛಾಪಿಸಲಾಗಿದೆ. ಅಂಚೆ ಚೀಟಿಯನ್ನು ಏಪ್ರಿಲ್ 18, 1967ರಂದು ರಾಮನವಮಿಯ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ.
ಆದರೆ ಏನಿದು 2024? ಇಲ್ಲೇ ಇರುವುದು ರಹಸ್ಯ. ಇದರಲ್ಲಿ ನಮೂದಿಸಿರುವುದು ಕ್ರಿಸ್ತಶಕ ಅಲ್ಲ. ಕ್ರಿಸ್ತಶಕ ಆಗಿದ್ದರೆ 1967 ಎಂದು ಬರೆಯಬೇಕಾಗಿತ್ತು. ಆದರೆ ಇದರಲ್ಲಿ ನಮೂದಿಸಿರುವುದು ವಿಕ್ರಮ ಶಕ ಅಥವಾ ವಿಕ್ರಮ ಸಂವತ್ಸರ. ವಿಕ್ರಮ ಶಕವು ಕ್ರಿಸ್ತ ಶಕಕ್ಕಿಂತ 57 ವರ್ಷಗಳಿಗೆ ಮುಂದೆ ಇದೆ. ಹೀಗಾಗಿ 1967ನೇ ಇಸವಿ, ವಿಕ್ರಮ ಶಕದ ಪ್ರಕಾರ 2024 ಆಗುತ್ತದೆ. ಹೀಗಾಗಿ ನೇಪಾಳಿ ಸರ್ಕಾರ ಈ ಶಕೆಯನ್ನು ನಮೂದಿಸಿದೆ.
ಇದನ್ನೂ ಓದಿ: Ayodhya Ram Mandir: ಅಯೋಧ್ಯೆಯಲ್ಲಿ ಜನಮನ ರಂಜಿಸಿದ ಹೊಸಪೇಟೆ ತಂಡದ ರಾಮಾಯಣ ಬಯಲಾಟ!