Site icon Vistara News

Ayodhya Ram Mandir: ಅಯೋಧ್ಯೆ ರಾಮ ಮಂದಿರಕ್ಕೆ ತೆರಳುವ ಯೋಚನೆಯಲ್ಲಿದ್ದೀರಾ? ಈ ಅಂಶಗಳು ಗಮನದಲ್ಲಿರಲಿ

balak ram

balak ram

ಅಯೋಧ್ಯೆ: ಕೋಟ್ಯಂತರ ಹಿಂದೂಗಳ ಬಹು ಕಾಲದ ಕನಸು ನನಸಾಗಿಸಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರದ (Ayodhya Ram Mandi) ಉದ್ಘಾಟನೆ ನೆರವೇರಿದೆ. ಗಣ್ಯರ ಸಮ್ಮುಖದಲ್ಲಿ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರಾಣ ಪ್ರತಿಷ್ಠೆ ನೆರವೇರಿಸಿದ್ದಾರೆ. ಅದಾದ ಬಳಿಕ ಜನವರಿ 23ರಂದು ಈ ಭವ್ಯ ರಾಮ ದೇಗುಲ ಸಾವರ್ಜನಿಕ ಪ್ರವೇಶಕ್ಕೆ ಮುಕ್ತವಾಗಿದೆ. ಅಂದಿನಿಂದ ರಾಮ ಮಂದಿರಕ್ಕೆ ಪ್ರತಿದಿನ ಲಕ್ಷಾಂತರ ಮಂದಿ ಭೇಟಿ ನೀಡುತ್ತಿದ್ದಾರೆ. ಎರಡು ವಾರದಲ್ಲಿ ಸುಮಾರು 30 ಲಕ್ಷ ಮಂದಿ ಅಯೋಧ್ಯೆಗೆ ತೆರಳಿ ಬಾಲಕ ರಾಮನ ದರ್ಶನ ಮಾಡಿದ್ದಾರೆ ಎಂದು ಅಂಕಿ-ಅಂಶ ತಿಳಿಸುತ್ತದೆ.

ದಾಖಲೆಯ ಪ್ರಮಾಣದಲ್ಲಿ ಭಕ್ತರ ಭೇಟಿ

ಅಯೋಧ್ಯೆಗೆ ಪ್ರತಿ ದಿನ ಸರಾಸರಿ 2.5 ಲಕ್ಷ ಮಂದಿ ಭೇಟಿ ನೀಡುತ್ತಿದ್ದಾರೆ. ಪ್ರಪಂಚದ ಯಾವುದೇ ಧಾರ್ಮಿಕ ಕ್ಷೇತ್ರವೊಂದಕ್ಕೆ ಇದುವರೆಗೆ ನಿರಂತರವಾಗಿ ಇಷ್ಟೊಂದು ಪ್ರಮಾಣದಲ್ಲಿ ಈ ಭಕ್ತರು ಭೇಟಿ ನೀಡಿರಲಿಲ್ಲ. ಈ ವಿಚಾರದಲ್ಲಿ ಅಯೋಧ್ಯೆ ರಾಮ ಮಂದಿರ ದಾಖಲೆ ನಿರ್ಮಿಸಿದೆ. ಸದ್ಯಕ್ಕಂತೂ ಅಯೋಧ್ಯೆಯಲ್ಲಿನ ಈ ಜನ ಸಂದಣಿ ಕಡಿಮೆಯಾಗುವ ಲಕ್ಷಣಗಳಿಲ್ಲ. ಇನ್ನು ಏಪ್ರಿಲ್‌ನಲ್ಲಿ ನಡೆಯುವ ರಾಮ ನವಮಿ ಮತ್ತು ಬೇಸಗೆ ರಜೆಯ ಹಿನ್ನೆಲೆಯಲ್ಲಿ ಭೇಟಿ ನೀಡುವ ಭಕ್ತರ ಸಂಖ್ಯೆ ವೃದ್ಧಿಸಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಹೀಗಾಗಿ ನೀವು ಅಯೋಧ್ಯೆಗೆ ತೆರಳುವವರಿದ್ದರೆ ಕೆಲವೊಂದು ವಿಚಾರಗಳಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಆ ಕುರಿತಾದ ವಿವರ ಇಲ್ಲಿದೆ.

ಸಂಚಾರ ವ್ಯವಸ್ಥೆ

ವಿಮಾನದ ಮೂಲಕ ಅಯೋಧ್ಯೆಗೆ ನೇರವಾಗಿ ಮತ್ತು ಸುಲಭವಾಗಿ ತೆರಳಬಹುದು. ಇಂಡಿಗೋ, ಏರ್‌ ಇಂಡಿಯಾ ಮತ್ತು ಸ್ಪೈಸ್‌ ಜೆಟ್‌ ವಿಮಾನಯಾನ ಸಂಸ್ಥೆಗಳು ಭಾರತದ ವಿವಿಧ ನಗರಗಳಾದ ಮುಂಬೈ, ಬೆಂಗಳೂರು, ಅಹ್ಮದಾಬಾದ್‌, ಕೋಲ್ಕತ್ತಾ, ಚೆನ್ನೈ, ಜೈಪುರ, ಪಾಟ್ನಾ ಮತ್ತು ದರ್ಭಾಂಗಗಳಿಂದ ಪ್ರತಿ ದಿನ ಅಯೋಧ್ಯೆಗೆ ಹಾರಾಟ ನಡೆಸುತ್ತವೆ. ಅಲ್ಲದೆ ಅಯೋಧ್ಯಯಲ್ಲಿ ರೈಲು ಸೇವೆಯೂ ಉತ್ತಮವಾಗಿದೆ. ವಂದೇ ಭಾರತ್‌ ಮತ್ತು ಅಮೃತ್‌ ಭಾರತ್‌ ಸೇವೆಗಳು ಲಭ್ಯ. ಅಲ್ಲದೆ ನೀವು ರಸ್ತೆ ಮಾರ್ಗವಾಗಿಯೂ ಅಯೋಧ್ಯೆಗೆ ತೆರಳಬಹುದು. ಲಕ್ನೋಗೆ ತೆರಳಿದರೆ ಅಲ್ಲಿಂದ ಅಯೋಧ್ಯೆಗೆ ರಸ್ತೆ ಮೂಲಕ ಕೇವಲ 2.5 ಗಂಟೆಗಳ ಪಯಣ. ಇನ್ನೊಂದು ಮುಖ್ಯ ವಿಚಾರ ಎಂದರೆ ಅಯೋಧ್ಯೆಯಲ್ಲಿ ಸೀಮಿತ ಸಂಖ್ಯೆಯಲ್ಲಿ ಹೋಟೆಲ್‌ಗಳಿರುವುದರಿಂದ ಮೊದಲೇ ರೂಮ್‌ ಬುಕ್‌ ಮಾಡುವುದು ಅತ್ಯಗತ್ಯ. ಅಲ್ಲದೆ ಧರ್ಮಶಾಲೆಯನ್ನು ಆಯ್ಕೆ ಮಾಡಬಹುದು. ಹೋಲಿ ಅಯೋಧ್ಯಾ (Holy Ayodhya) ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡರೆ ಹೋಮ್‌ಸ್ಟೇ ಬುಕ್‌ ಮಾಡಿಕೊಳ್ಳಬಹುದು.

ಎರಡು ದಿನಗಳ ಪ್ರವಾಸ

ಗೊಂದಲ, ಜನ ಸಂದಣಿ ತಪ್ಪಿಸಲು ಅಯೋಧ್ಯೆಗೆ ಒಂದು ದಿನದ ಬದಲು ಎರಡು ದಿನಗಳ ಪ್ರವಾಸ ಕೈಗೊಳ್ಳಿ. ಇದರಿಂದ ರಾಮ ಮಂದಿರದ ಸುತ್ತಮುತ್ತಲಿರುವ ಇತರ ದೇವಸ್ಥಾನಗಳಿಗೂ ಭೇಟಿ ನೀಡಬಹುದು. ರಾಮ್‌ ಕಿ ಪೌಡಿ, ಹನುಮಾನ್ ಗರ್ಹಿ ದೇವಸ್ಥಾನಗಳಿಗೂ ತೆರಳಬಹುದು. ಹನುಮಾನ್ ಗರ್ಹಿ ದೇವಸ್ಥಾನದಲ್ಲಿ ದೊರೆಯುವ ಲಾಡು ಪ್ರಸಾದವನ್ನು ಕೊಂಡುಕೊಳ್ಳಲು ಮರೆಯದಿರಿ.

ಬೆಳಗಿನ ದರ್ಶನ ಪಡೆಯಲು ಪ್ರಯತ್ನಿಸಿ

ರಾಮ ಮಂದಿರದ ಬಾಗಿಲು ಬೆಳಗ್ಗೆ 6.30ಕ್ಕೆ ತೆರೆಯುತ್ತದೆ. ಮಧ್ಯೆ 12 ಮತ್ತು 2 ಗಂಟೆಯ ನಡುವೆ (2 ಗಂಟೆ) ದೇವರ ದರ್ಶನಕ್ಕೆ ಅವಕಾಶವಿಲ್ಲ. ಬಳಿಕ ಅಪರಾಹ್ನ 2 ಗಂಟೆಯಿಂದ ರಾತ್ರಿ 10ರ ವರೆಗೆ ಬಾಲಕ ರಾಮನ ದರ್ಶನ ಮಾಡಬಹುದು. ಬೆಳಗಿನ ಜಾವದ ಸಮಯದಲ್ಲಿ ಅಷ್ಟೊಂದು ಜನ ಸಂದಣಿ ಕಂಡು ಬರುವುದಿಲ್ಲ. ಹೀಗಾಗಿ ಆದಷ್ಟು ಬೆಳಗಿನ ಜಾವವೇ ದೇವಾಲಯಕ್ಕೆ ತೆರಳಿ. ಗಮನಿಸಿ ದೇವಸ್ಥಾನದ ಒಳಗೆ ಮೊಬೈಲ್‌ ಫೋನ್‌, ಎಲೆಕ್ಟ್ರಾನಿಕ್ಸ್‌ ವಸ್ತು, ಬ್ಯಾಗ್‌ಗಳನ್ನು ಕೊಂಡೊಯ್ಯುವಂತಿಲ್ಲ. ಚಿಕ್ಕ ಪರ್ಸ್‌ಗೆ ಮಾತ್ರ ಅವಕಾಶ ನೀಡಲಾಗಿದೆ. ದೇವಸ್ಥಾನದ ಮುಖ್ಯ ಗೇಟ್‌ ಸಮೀಪದ ತೀರ್ಥ ಯಾತ್ರಿ ಸುವಿಧಾ ಕೇಂದ್ರದಲ್ಲಿ ನಿಮ್ಮೆಲ್ಲ ವಸ್ತುಗಳನ್ನು ಇಡಬೇಕಾಗುತ್ತದೆ. ಜತೆಗೆ ದೇವರಿಗೆ ಅರ್ಪಿಸಲು ಹೂ ಕೊಂಡೊಯ್ಯುವಂತಿಲ್ಲ. ದೇವಸ್ಥಾನದ ಒಳಗೆ ಪ್ರಸಾದ ವಿತರಿಸುತ್ತಾರೆ.

ಕಾಲ್ನಡಿಗೆ ಮೂಲಕ ಸಾಗಬೇಕು

ಭಕ್ತ ಜನ ಸಂದಣಿ ಕಾರಣದಿಂದ ದೇಗುಲದ 3-4 ಕಿ.ಮೀ. ದೂರಲ್ಲಿಯೇ ಪೊಲೀಸ್‌ ಚೆಕ್‌ ಪೋಸ್ಟ್‌ ಇದೆ. ಇಲ್ಲಿಯೇ ವಾಹನಗಳನ್ನು ನಿಲ್ಲಿಸಬೇಕಾಗುತ್ತದೆ. ಹೀಗಾಗಿ ಕಾಲ್ನಡಿಗೆಗೆ ತಯಾರಾಗಿಯೇ ಹೊರಡಿ. ಅಯೋಧ್ಯೆ ಜಿಲ್ಲೆಯಲ್ಲಿ ಶ್ರೀ ರಾಮ್ ಜನ್ಮಭೂಮಿ ದೇವಾಲಯದ ನಿರ್ಮಾಣದೊಂದಿಗೆ ಪ್ರವಾಸಿಗರು ಮತ್ತು ಭಕ್ತರ ಸಂಖ್ಯೆಯ ಏರಿಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ವಿಶಾಲ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಕೈಗೊಂಡಿದೆ.

ಇದನ್ನೂ ಓದಿ: Ayodhya Ram Mandir: ರಾಮ ಮಂದಿರ ಪ್ರವೇಶಕ್ಕೆ ಹೆಚ್ಚುವರಿ ಸಮಯಾವಕಾಶ; ಇಲ್ಲಿದೆ ಹೊಸ ವೇಳಾಪಟ್ಟಿ

ಸರತಿ ಸಾಲು

ಮೊದಲೇ ಹೇಳಿದಂತೆ ಪ್ರತಿದಿನ ರಾಮ ಮಂದಿರಕ್ಕೆ ಸುಮಾರು 2.5 ಲಕ್ಷ ಭಕ್ತರು ಭೇಟಿ ನೀಡುತ್ತಿದ್ದಾರೆ. ಹೀಗಾಗಿ ದೇವರ ದರ್ಶನಕ್ಕೆ ಉದ್ದದ ಕ್ಯೂ ನಿರೀಕ್ಷಿತ. ತಾಸುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗಬಹುದು. ರಾಮ ಮಂದಿರಕ್ಕೆ ತೆರಳುವ ಈ ರಾಮ್‌ ಜನ್ಮಭೂಮಿ ಪಥದ ಅಲ್ಲಲ್ಲಿ ಖುರ್ಚಿ, ಚಾಪೆ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ. ಹಂತ ಹಂತವಾಗಿ ದೇಗುಲದ ಒಳಗೆ ಪ್ರವೇಶಿಸಲು ವ್ಯವಸ್ಥೆ ಇಲ್ಲಿದೆ. ಗರ್ಭಗೃಹದಲ್ಲಿ ಕೆಲವೇ ಕ್ಷಣಗಳವರೆಗೆ ಮಾತ್ರ ರಾಮನ ದರ್ಶನ ಭಾಗ್ಯ ಸಿಗಲಿದೆ. ನಿಮ್ಮ ಸಹಾಯಕ್ಕೆ ಅಲ್ಲಲ್ಲಿ ಸಿಬ್ಬಂದಿಗಳಿರುತ್ತಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version