Site icon Vistara News

Ayodhya Ram Mandir: ರಾಮ ಲಲ್ಲಾ ಹೆಸರು ಬದಲಾಯಿತು; ಇನ್ನಿವನು ʼಬಾಲಕ ರಾಮʼ

balak ram Ayodhya Ram Mandir

ಹೊಸದಿಲ್ಲಿ: ಜನವರಿ 22ರಂದು ಪ್ರಾಣ ಪ್ರತಿಷ್ಠಾ (Pran Prathistha) ಸಮಾರಂಭದಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram Mandir) ಪ್ರತಿಷ್ಠಾಪಿಸಲಾದ ಐದು ವರ್ಷದ ರಾಮ್ ಲಲ್ಲಾ (Ram lalla Idol) ಮೂರ್ತಿಯನ್ನು ಇನ್ನು ಮುಂದೆ “ಬಾಲಕ ರಾಮ” (Balak Ram) ಎಂದು ಕರೆಯಲಾಗುತ್ತದೆ.

ಪ್ರತಿಷ್ಠಾಪನೆ ಸಮಾರಂಭದ ವಿಧಿ ವಿಧಾನಗಳನ್ನು ನಡೆಸಿಕೊಟ್ಟ ಅರ್ಚಕ ಅರುಣ್ ದೀಕ್ಷಿತ್ ಇದನ್ನು ತಿಳಿಸಿದ್ದಾರೆ. ಮೂರ್ತಿಯು 5 ವರ್ಷದ ಬಾಲಕನ ಸ್ವರೂಪದ ಭಗವಾನ್ ರಾಮನದಾಗಿರುವುದರಿಂದ ಈ ಹೆಸರನ್ನು ಆಯ್ಕೆ ಮಾಡಲಾಗಿದೆ.

“ಭಗವಂತನ ಸ್ವರೂಪ ಐದು ವರ್ಷದ ರಾಮನದಾಗಿದೆ. ಹೀಗಾಗಿ ಬಾಲಕ ರಾಮ ಎಂದು ಕರೆಯಲಾಗುತ್ತದೆ” ಎಂದು ಅವರು ಹೇಳಿದ್ದಾರೆ. ಮೂರ್ತಿಯನ್ನು ಮೊದಲ ಬಾರಿಗೆ ನೋಡಿದಾಗ ಅವರು ಭಾವುಕರಾದರಂತೆ. “ರೋಮಾಂಚನಗೊಂಡೆ. ಕಣ್ಣೀರು ತಾನೇ ತಾನಾಗಿ ಹರಿಯತೊಡಗಿತು. ಆಗ ನಾನು ಅನುಭವಿಸಿದ ಭಾವನೆಯನ್ನು ವಿವರಿಸಲಾಗದು” ಎಂದು ಅವರು ಹೇಳುತ್ತಾರೆ.

ವಾರಣಾಸಿ ಮೂಲದ ಅರುಣ್‌ ದೀಕ್ಷಿತ್‌, ಇದುವರೆಗೂ 50-60 ಪ್ರಾಣಪ್ರತಿಷ್ಠೆಗಳನ್ನು ನೆರವೇರಿಸಿದ್ದಾರೆ. “ಇದುವರೆಗಿನ ಪ್ರಾಣ ಪ್ರತಿಷ್ಠೆಗಳಲ್ಲೆಲ್ಲಾ ಇದು ಅತ್ಯಂತ ಅಲೌಕಿಕವಾಗಿತ್ತು. ಸರ್ವೋಚ್ಚವಾಗಿತ್ತು” ಎಂದಿದ್ದಾರೆ. ಜನವರಿ 18ರಂದು ಅವರು ಈ ಮೂರ್ತಿಯನ್ನು ಮೊದಲ ಬಾರಿಗೆ ನೋಡಿದ್ದರಂತೆ.

Ram Lalla Idol

ಜ.22ರಂದು ಬಾಲಕ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠೆಯನ್ನು ಪ್ರಧಾನಿ ಮೋದಿ ನೆರವೇರಿಸಿದ್ದರು. ಶಿಲ್ಪವನ್ನು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿದ್ದರು. ಎಚ್‌ಡಿ ಕೋಟೆಯ ಬಳಿಯಿಂದ ತರಿಸಲಾದ 300 ಕೋಟಿ ವರ್ಷ ಹಿಂದಿನ ಶಿಲೆಯಿಂದ ಮೂರ್ತಿಯನ್ನು ಕೆತ್ತಲಾಗಿದೆ. ಮುಕುಟ, ತಿಲಕ, ಮುತ್ತುರತ್ನದ ಉಂಗುರಗಳು, ಕಂಠೀಹಾರ, ಪಂಚ್ಲಾದ, ಕಮರ್‌, ಬಾಜು ಬಂದ್, ಕಡಗ, ಒಡ್ಯಾಣ, ನೂಪುರ ಇತ್ಯಾದಿ 14 ಬಗೆಯ ಆಭರಣಗಳಿಂದ ಮೂರ್ತಿಯನ್ನು ಸಿಂಗರಿಸಲಾಗಿದೆ.

ಬಾಲರಾಮ ವಿಗ್ರಹಕ್ಕೆ ಚಾಮರಾಜನಗರ ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಬುಜ್ಜೆಗೌಡನಪುರ ಗ್ರಾಮದ ಕೃಷ್ಣ ಶಿಲೆ ಬಳಕೆ ಮಾಡಲಾಗಿದೆ. ಕೃಷ್ಣ ಶಿಲೆ ಅತ್ಯಂತ ಶಕ್ತಿಶಾಲಿಯಾಗಿದ್ದು ಆಸಿಡ್‌ ಹಾಕಿದರೂ ಏನೂ ಆಗುವುದಿಲ್ಲ. ಇದಕ್ಕೆ ಬೆಂಕಿ ತಗುಲುವುದಿಲ್ಲ, ತುಕ್ಕು ಹಿಡಿಯುವುದಿಲ್ಲ. ಮಳೆ, ಗಾಳಿ, ಬಿಸಿಲನ್ನೂ ತಡೆದುಕೊಳ್ಳುವ ಶಕ್ತಿಯ ಕಲ್ಲು ಇದು. ಹಿಂದೆ ಶಂಕರಾಚಾರ್ಯರ ಮೂರ್ತಿಯನ್ನು ಮಾಡಿದ ಎಚ್.ಡಿ.ಕೋಟೆಯ ಕೃಷ್ಣ ಶಿಲೆಯಲ್ಲೇ ಇದನ್ನು ರಚಿಸಲಾಗಿದೆ. ಈ ಎಲ್ಲ ಕಾರಣದಿಂದ ರಾಮಲಲ್ಲಾ ವಿಗ್ರಹಕ್ಕೆ ಕೃಷ್ಣ ಶಿಲೆಯನ್ನು ಬಳಸಲಾಗಿದೆ.

ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೆತ್ತನೆಯ ರಾಮ ಲಲ್ಲಾ ವಿಗ್ರಹವು ಆಯ್ಕೆಯಾಗಲು ಕಾರಣವಿದೆ. ಈ ವಿಗ್ರಹದ ಮುಖದಲ್ಲಿನ ತೇಜಸ್ಸು ಮುಖ್ಯ ಕಾರಣವಾಗಿದೆ. ಅದರಲ್ಲಿ ಹೆಚ್ಚು ದೈವಿಕ ಭಾವವಿದೆ ಎಂಬುದನ್ನು ತೀರ್ಪುಗಾರರು ಮನಗಂಡಿದ್ದಾರೆ. ಪ್ರಾಣಪ್ರತಿಷ್ಠೆಯಾಗಿರುವ ವಿಗ್ರಹವು ಬಾಲ ರಾಮನಾಗಿದೆ ಎಂಬುದು ಇಲ್ಲಿ ಗಮನಾರ್ಹ. ಅಂತೆಯೇ ಅರುಣ್ ಅವರ ಕೆತ್ತನೆಯ ವಿಗ್ರಹದಲ್ಲಿ ಮುಗ್ಧ ಮಗುವಿನ ಸುಂದರ ನೋಟವಿದೆ. ಬಾಲ ರಾಮದೇವರು ಸಾಕ್ಷಾತ್ ಮಂದೆ ನಿಂತಿರುವಂತೆ ಕಾಣುವ ಮೂರ್ತಿಯನ್ನು ಅವರು ಕೆತ್ತಿದ್ದಾರೆ. ಅಲ್ಲದೆ ಹೆಚ್ಚು ನೈಜತೆಯಿಂದ ಕೂಡಿದೆ.

ಅರುಣ್​ ಅವರು ಕೆತ್ತಿರುವ ಐದು ವರ್ಷದ ಬಾಲ ರಾಮನ ಮೂರ್ತಿಯ ಕೈಯಲ್ಲಿ ಧನಸ್ಸು ಹಾಗೂ ಬಾಣವಿದೆ. ರಾಮನ ಮೂರ್ತಿಯು 51 ಇಂಚು ಎತ್ತರವಿದ್ದರೆ ಪ್ರಭಾವಳಿ ಸೇರಿದಂತೆ ಒಟ್ಟು ವಿಗ್ರಹ 8 ಅಡಿ ಎತ್ತರ ಹಾಗೂ ಮೂರುವರೆ ಅಡಿ ಅಗಲವಿದೆ. ಇದು ತೇಜಸ್ಸಿನಿಂದ ಕಂಗೊಳಿಸುತ್ತಿದೆ. ಒಟ್ಟಾರೆಯಾಗಿ ಕೋಟ್ಯಂತರ ರಾಮಭಕ್ತರ ಪೂಜೆಗೆ ಅರ್ಹವಾಗಿದೆ ಎಂದು ತೀರ್ಪುಗಾರರು ಅದನ್ನೇ ಆಯ್ಕೆ ಮಾಡಿದ್ದರು.

ಇದನ್ನೂ ಓದಿ: Ram Mandir: ಬಾಲ ರಾಮನ ವಿಗ್ರಹಕ್ಕೆ ಕೃಷ್ಣ ಶಿಲೆಯನ್ನೇ ಏಕೆ ಬಳಸಿದ್ದು?

Exit mobile version