Site icon Vistara News

Ayodhya Ram Mandir: ಕಾಂಗ್ರೆಸ್‌ನ ಬಹಿಷ್ಕಾರ ಮನಸ್ಥಿತಿಯಿಂದಾಗಿಯೇ ಜನ ಆ ಪಕ್ಷವನ್ನು ಬಹಿಷ್ಕರಿಸಿದ್ದಾರೆ ಎಂದ ಬಿಜೆಪಿ

trivedi

trivedi

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ (Ayodhya Ram Mandir)ದ ಉದ್ಘಾಟನೆಯ ದಿನ ಸಮೀಪಿಸುತ್ತಿದೆ. ಜನವರಿ 22ರಂದು ರಾಮ ಮಂದಿರದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಮಧ್ಯೆ ಕಾಂಗ್ರೆಸ್‌ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದೆ. ಕೈ ಪಡೆಯ ಈ ನಿರ್ಧಾರವನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. ಇದು ಗಾಂಧಿ ಕಾಂಗ್ರೆಸ್‌ ಅಲ್ಲ; ಬದಲಾಗಿ ನೆಹರೂ ಕಾಂಗ್ರೆಸ್‌ ಎಂದು ಬಿಜೆಪಿ ಗೇಲಿ ಮಾಡಿದೆ.

ಬಿಜೆಪಿ ಹೇಳಿದ್ದೇನು?

ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರನ್ನು ಉಲ್ಲೇಖಿಸಿದ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, “ಇದು ನೆಹರೂ ಅವರ ಕಾಂಗ್ರೆಸ್. ಇದು ಮಹಾತ್ಮ ಗಾಂಧಿ ಅವರ ಕಾಂಗ್ರೆಸ್ ಅಲ್ಲ. ಮಹಾತ್ಮ ಗಾಂಧಿ ‘ರಘುಪತಿ ರಾಘವ ರಾಜಾ ರಾಮ್’ ಹಾಡುತ್ತಿದ್ದರು. ಆದರೆ ಈಗಿನ ಕಾಂಗ್ರೆಸ್ ‘ಪ್ರಾಣ ಪ್ರತಿಷ್ಠಾ’ ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲ. ಇದು ಕಾಂಗ್ರೆಸ್ ಹಿಂದೂ ಧರ್ಮ ಮತ್ತು ಹಿಂದುತ್ವಕ್ಕೆ ವಿರುದ್ಧವಾಗಿದೆ ಎನ್ನುವುದನ್ನು ಮತ್ತೆ ಸಾಬೀತು ಪಡಿಸಿದೆʼʼ ಎಂದು ಟೀಕಿಸಿದ್ದಾರೆ.

ʼʼಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ನಡೆಸಿದ 1998ರ ಪೋಖ್ರಾನ್‌ ಪರಮಾಣು ಪರೀಕ್ಷೆಯ ನಂತರ 10 ದಿನಗಳವರೆಗೆ ಕಾಂಗ್ರೆಸ್ ಯಾವುದೇ ಹೇಳಿಕೆ ನೀಡಿರಲಿಲ್ಲʼʼ ಎಂದೂ ತ್ರಿವೇದಿ ವಾಗ್ದಾಳಿ ನಡೆಸಿದ್ದಾರೆ. ʼʼಕಾಂಗ್ರೆಸ್‌ ನಾಯಕರು ತಮ್ಮದೇ ಪಕ್ಷದ ಸದಸ್ಯರಾಗಿದ್ದ ಪ್ರಣಬ್ ಮುಖರ್ಜಿ ಅವರ ಭಾರತರತ್ನ ಸಮಾರಂಭದಲ್ಲಿ ಭಾಗವಹಿಸಲು ನಿರಾಕರಿಸಿದ್ದರು. ಈ ಬಹಿಷ್ಕಾರದ ಮನಸ್ಥಿತಿಯಿಂದಾಗಿಯೇ ಸಾರ್ವಜನಿಕರು ಕಾಂಗ್ರೆಸ್‌ನನ್ನೂ ಬಹಿಷ್ಕರಿಸುತ್ತಿದ್ದಾರೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.

“ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕಿ ಸೋನಿಯಾ ಗಾಂಧಿ, ಅಧೀರ್‌ ರಂಜನ್‌ ಚೌಧರಿ ಅವರಿಗೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಲಾಗಿದೆ. ಭಗವಾನ್‌ ಶ್ರೀರಾಮನನ್ನು ಕೋಟ್ಯಂತರ ಜನ ಆರಾಧಿಸುತ್ತಾರೆ. ಅಷ್ಟಕ್ಕೂ, ರಾಮಮಂದಿರ ಉದ್ಘಾಟನೆ ಕಾರ್ಯಕ್ರಮವನ್ನು ಬಿಜೆಪಿ-ಆರ್‌ಎಸ್‌ಎಸ್‌ ಕಾರ್ಯಕ್ರಮವನ್ನಾಗಿ ರೂಪಿಸಲಾಗಿದೆ. ಚುನಾವಣೆಯಲ್ಲಿ ಲಾಭ ಪಡೆಯಲು ಬಿಜೆಪಿ ಕಾರ್ಯಕ್ರಮವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಹಾಗಾಗಿ ಕಾಂಗ್ರೆಸ್‌ ನಾಯಕರು ರಾಮಮಂದಿರ ಉದ್ಘಾಟನೆಗೆ ತೆರಳದಿರಲು ತೀರ್ಮಾನಿಸಿದ್ದಾರೆ” ಎಂದು ಕಾಂಗ್ರೆಸ್‌ ಪ್ರಕಟಣೆ ತಿಳಿಸಿದೆ.

ಕಾಂಗ್ರೆಸ್‌ನ ಈ ನಿಲುವನ್ನು ಬಿಜೆಪಿಯ ಹಲವು ನಾಯಕರು ಖಂಡಿಸಿದ್ದಾರೆ. “ಕಾಂಗ್ರೆಸ್‌ನ ರಾಮ ವಿರೋಧಿ ಮುಖ ರಾಷ್ಟ್ರದ ಮುಂದೆ ಅನಾವರಣ ಆಗಿದೆ. ಭಗವಾನ್ ರಾಮ ಕಾಲ್ಪನಿಕ ಪಾತ್ರ ಎಂದು ಸೋನಿಯಾ ಗಾಂಧಿ ಅವರ ನಾಯಕತ್ವದಲ್ಲಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಲಾಗಿತ್ತು. ಅಂತಹ ಪಕ್ಷ ರಾಮ ಮಂದಿರದ ‘ಪ್ರಾಣ ಪ್ರತಿಷ್ಠಾ’ ಕಾಯಗಕ್ರಮದ ಆಹ್ವಾನವನ್ನು ನಿರಾಕರಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ” ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಬುಧವಾರ ಹೇಳಿದ್ದರು.

ಇದನ್ನೂ ಓದಿ: Ayodhya Ram Mandir: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದುಬಾರಿಯಾಗಲಿದೆಯಾ ಬಾಯ್ಕಾಟ್‌ ನಿರ್ಧಾರ?

“ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ನಾಯಕತ್ವದಲ್ಲಿ ಇಂಡಿಯ ಮೈತ್ರಿಕೂಟವು ಸನಾತನ ಧರ್ಮವನ್ನು ಪದೇ ಪದೆ ಅವಮಾನಿಸುತ್ತಿದೆ. ಈಗ ಈ ಮೈತ್ರಿಕೂಟದ ನಾಯಕರು ‘ಪ್ರಾಣಪ್ರತಿಷ್ಠಾ’ಕ್ಕೆ ಆಹ್ವಾನವನ್ನು ನಿರಾಕರಿಸಿರುವುದು ಅದಕ್ಕೆ ಸ್ಪಷ್ಟ ಉದಾಹರಣೆʼʼ ಟೀಕಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version