ಮುಂಬೈ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ತಲೆ ಎತ್ತಿ ನಿಂತಿರುವ ಭವ್ಯ ರಾಮ ಮಂದಿರವನ್ನು (Ayodhya Ram Mandir) ಜನವರಿ 22ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಉದ್ಘಾಟಿಸಿದ್ದಾರೆ. ಈ ಮೂಲಕ ಕೋಟ್ಯಂತರ ಭಕ್ತರ ಹಲವು ವರ್ಷಗಳ ಕನಸು ನನಸಾಗಿದೆ. ಇದೀಗ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅಯೋಧ್ಯೆ ರಾಮ ಮಂದಿರ ಉದ್ಘಾಟಿಸಿದ್ದಕ್ಕೆ ಮೋದಿ ಅವರಿಗೆ ಧನ್ಯವಾದ ತಿಳಿಸಿ ಬರೆದ ಪತ್ರ ವೈರಲ್ ಆಗಿದೆ.
ಮಹಾರಾಷ್ಟ್ರ ಬಿಜೆಪಿಯ ಅಧಿಕೃತ ಎಕ್ಸ್ ಪೇಜ್‌ನಲ್ಲಿ ಶಿಲ್ಪಾ ಶೆಟ್ಟಿ ಹಿಂದಿಯಲ್ಲಿ ಬರೆದಿರುವ ಪತ್ರವನ್ನು ಪೋಸ್ಟ್ ಮಾಡಲಾಗಿದೆ. ರಾಮ ಮಂದಿರದ ಕನಸು ನನಸಾಗಿಸಿದ ಮೋದಿ ಅವರ ಕಾರ್ಯಕ್ಕೆ ಶಿಲ್ಪಾ ಶೆಟ್ಟಿ ಮೆಚ್ಚುಗೆ ಸೂಚಿಸಿರುವುದು ಪತ್ರದಲ್ಲಿ ಕಂಡು ಬಂದಿದೆ. ರಾಮ ಮಂದಿರ ನಿರ್ಮಾಣದ ಮೂಲಕ ಪ್ರಧಾನಿ ಮೋದಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಶಿಲ್ಪಾ ಶೆಟ್ಟಿ ಪತ್ರದಲ್ಲಿ ಶ್ಲಾಘಿಸಿದ್ದಾರೆ. ದೇವಾಲಯವನ್ನು ತೆರೆದಿದ್ದಕ್ಕಾಗಿ ಅವರು ಪ್ರಧಾನಿಗೆ ಧನ್ಯವಾದ ಅರ್ಪಿಸಿದ್ದಾರೆ. ಮೋದಿ ಯಾವಾಗಲೂ ದೇವಾಲಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ ಎಂದೂ ಬರೆದುಕೊಂಡಿದ್ದಾರೆ.
#धन्यवाद_मोदीजी
— भाजपा महाराष्ट्र (@BJP4Maharashtra) February 12, 2024
सुप्रसिध्द अभिनेत्री @TheShilpaShetty जी यांनी नुकताच पंतप्रधान नरेंद्र मोदीजींना पत्र लिहून त्यांचे आभार मानले.
५ शतकांपासून श्रीरामांना वनवास घडत होता. अखेर तो वनवास संपला. तेही मोदीजींच्या प्रयत्नांमुळे.. यासाठीच शिल्पाजींनी पंतप्रधानांचे आभार मानले आहेत.… pic.twitter.com/LTqpjGolLK
ಪತ್ರದಲ್ಲಿ ಏನಿದೆ?
“ಕೆಲವರು ಇತಿಹಾಸವನ್ನು ಓದಿದರೆ, ಇತರರು ಅದರಿಂದ ಕಲಿಯುತ್ತಾರೆ. ನಿಮ್ಮಂತಹ ವ್ಯಕ್ತಿಗಳು (ಪ್ರಧಾನಿ ನರೇಂದ್ರ ಮೋದಿ) ಅದನ್ನು ಮರು ಸೃಷ್ಟಿಸುವ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದ್ದಾರೆ. ನೀವು ರಾಮ ಜನ್ಮಭೂಮಿಯ 500 ವರ್ಷಗಳ ಇತಿಹಾಸವನ್ನು ಮತ್ತೆ ಬರೆದಿದ್ದೀರಿ. ಇದಕ್ಕಾಗಿ ಹೃತ್ಪೂರ್ವಕ ಕೃತಜ್ಞತೆಗಳು. ಈ ಶುಭ ಕಾರ್ಯದಿಂದಾಗಿ ನಿಮ್ಮ ಹೆಸರು ಭಗವಾನ್ ಶ್ರೀ ರಾಮನೊಂದಿಗೆ ಎಂದೆಂದಿಗೂ ಉಳಿಯಲಿದೆ” ಎಂದು ಶಿಲ್ಪಾ ಶೆಟ್ಟಿ ಹಿಂದಿಯಲ್ಲಿ ಬರೆದಿದ್ದಾರೆ.
ಬಿಜೆಪಿ ಮಾಹಾರಾಷ್ಟ್ರ ಘಟಕ ಈ ಪತ್ರವನ್ನು ಹಂಚಿಕೊಂಡು, ʼʼಇತ್ತೀಚೆಗೆ ಜನಪ್ರಿಯ ನಟಿ ಶಿಲ್ಪಾ ಶೆಟ್ಟಿ ಪತ್ರ ಬರೆದು ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಶ್ರೀ ರಾಮನು 5 ಶತಮಾನಗಳ ಕಾಲ ವನವಾಸದಲ್ಲಿದ್ದನು. ಇದೀಗ ವನವಾಸ ಕೊನೆಗೊಂಡಿದೆ. ಇದರ ಹಿಂದೆ ಮೋದಿಜಿ ಅವರ ಪ್ರಯತ್ನ ಪ್ರಮುಖ ಪಾತ್ರ ವಹಿಸಿದೆ. ಇದಕ್ಕಾಗಿ ಶಿಲ್ಪಾ ಶೆಟ್ಟಿ ಅವರು ಪ್ರಧಾನಿಗೆ ಧನ್ಯವಾದ ಅರ್ಪಿಸಿದ್ದಾರೆʼʼ ಎಂದು ಬರೆದುಕೊಂಡಿದೆ.
ಜ. 22ರಂದು ರಾಮ ಮಂದಿರಲ್ಲಿ ನಡೆದ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಬಾಲಿವುಡ್ ಸಹಿತ ವಿವಿಧ ರಂಗದ ಗಣ್ಯರು ಭಾಗವಹಿಸಿದ್ದರು. ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ಆಲಿಯಾ ಭಟ್, ರಣಬೀರ್ ಕಪೂರ್, ವಿಕ್ಕಿ ಕೌಶಲ್, ಕತ್ರೀನಾ ಕೈಫ್, ಅನುಪಮ್ ಖೇರ್, ಕಂಗನಾ ರಾಣಾವತ್ ಮತ್ತಿತರ ಬಾಲಿವುಡ್ ತಾರೆಯರು ಈ ಶುಭ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.
ಇದನ್ನೂ ಓದಿ: Ram Mandir : ಯೋಗಿ ನೇತೃತ್ವದಲ್ಲಿ ಆಯೋಧ್ಯೆಗೆ ಭೇಟಿ ನೀಡಿದ ಉತ್ತರ ಪ್ರದೇಶ ಶಾಸಕರು
ಮಂಗಳೂರು ಮೂಲದ ನಟಿ ಶಿಲ್ಪಾ ಶೆಟ್ಟಿ ನಟನೆಯ ಜತೆಗೆ ಯೋಗದ ಮೂಲಕವೂ ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ ಅವರು ನಟಿಸಿದ ʼಸುಖೀʼ ಬಾಲಿವುಡ್ ಚಿತ್ರ ತೆರೆಕಂಡಿತ್ತು. ಸದ್ಯ ಅವರು ಕನ್ನಡದ ʼಕೆಡಿʼ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸುವ ಮೂಲಕ ಹಲವು ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಪ್ರೇಮ್ ನಿರ್ದೇಶನದ ಈ ಚಿತ್ರದಲ್ಲಿ ಧ್ರುವ ಸರ್ಜಾ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದು, ರೀಷ್ಮಾ ನಾಣಯ್ಯ, ಸಂಜಯ್ ದತ್, ರವಿಚಂದ್ರನ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ