Site icon Vistara News

ಸ್ವಾತಂತ್ರ್ಯ ಅಮೃತ ಮಹೋತ್ಸವ | ಪ್ರತಿದಿನ 1.5 ಲಕ್ಷ ಧ್ವಜ ತಯಾರಿಸುವ ʻಬಾವುಟದ ಮಾಮʼ

flag

ಆಯಾ ಹಬ್ಬದ ಹೊತ್ತಿನಲ್ಲಿ ಅದಕ್ಕೆ ಸಂಬಂಧಿಸಿದ ವಸ್ತುಗಳಿಗೆ ಬೇಡಿಕೆ ಸಹಜವಾಗಿ ಹೆಚ್ಚು. ಚೌತಿಯ ಹೊತ್ತಿಗೆ ಗಣಪತಿ, ನವರಾತ್ರಿಯಲ್ಲಿ ದುರ್ಗೆ, ದೀಪಾವಳಿಯ ಹೊತ್ತಿಗೆ ಹಣತೆ… ಹೀಗೆ. ಅಂತೆಯೇ ಸ್ವಾತಂತ್ರ್ಯದ ಹಬ್ಬ ಬಂತೆಂದರೆ ತ್ರಿವರ್ಣ ಧ್ವಜಕ್ಕೂ ಎಲ್ಲಿಲ್ಲದ ಬೇಡಿಕೆ. ಅದರಲ್ಲೂ ಈ ಬಾರಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವಂತೆ ಕೇಂದ್ರ ಸರಕಾರ ಕರೆ ನೀಡಿರುವ ಹಿನ್ನೆಲೆಯಲ್ಲಿ, ಧ್ವಜ ತಯಾರಿಕೆಯನ್ನೇ ವೃತ್ತಿ ಮಾಡಿಕೊಂಡವರು ಉಸಿರಾಡಲೂ ಸಮಯವಿಲ್ಲ ಎಂಬಷ್ಟು ವ್ಯಸ್ತ.

ದೆಹೆಲಿಯ ಸದರ್‌ ಬಜಾರ್‌ನ ಸಣ್ಣ ಕೋಣೆಯಲ್ಲಿ ಹೊಲಿಗೆ ಯಂತ್ರದ ಮುಂದೆ ಕುಳಿತಿರುವ, ʻಬಾವುಟದ ಮಾಮʼ ಎಂದೇ ಕರೆಸಿಕೊಳ್ಳುವ ಅಬ್ದುಲ್‌ ಗಫಾರ್‌ ಅವರ ಕತೆಯೂ ಇದಕ್ಕಿಂತ ಹೊರತಲ್ಲ. ೭೧ ವರ್ಷದ ಗಫಾರ್‌ ಕಳೆದ ೬೦ ವರ್ಷಗಳಿಂದ ತ್ರಿವರ್ಣ ಧ್ವಜ ತಯಾರಿಸುವ ಕಾಯಕದಲ್ಲೇ ತೊಡಗಿದವರು. ಸದ್ಯಕ್ಕೆ ದಿನವೊಂದಕ್ಕೆ ೧.೫ ಲಕ್ಷ ಧ್ವಜಗಳನ್ನು ಅವರ ʻಭಾರತ್‌ ಹ್ಯಾಂಡ್‌ಲೂಮ್ಸ್‌ʼ ಎನ್ನುವ ಸಣ್ಣ ಉದ್ದಿಮೆ ತಯಾರಿಸುತ್ತಿದೆಯಂತೆ. ಗಫಾರರ ಧ್ವಜಗಳು ದೇಶದ ಎಲ್ಲಾ ಸುಖ-ದುಃಖಗಳನ್ನೂ ಕಂಡಿವೆ. ತುರ್ತುಪರಿಸ್ಥಿತಿಯಿಂದ ಹಿಡಿದು, ವಾಜಪೇಯಿ ಸರಕಾರ, ಅಣ್ಣಾ ಹಜಾರೆಯವರ ಆಂದೋಲನ… ಹೀಗೆ ಬಹಳಷ್ಟನ್ನು ಕಂಡಿವೆ. ಭಾರತ್‌ ಹ್ಯಾಂಡ್‌ಲೂಮ್ಸ್‌ನ ನಾಲ್ಕೂ ಕೋಣೆಗಳು ಈಗ ತ್ರಿವರ್ಣ ಬಾವುಟಗಳಿಂದಲೇ ತುಂಬಿಹೋಗಿವೆ.

ಆಗಸ್ಟ್‌ ೧೩ರಿಂದ ೧೫ರವರೆಗೆ ಮನೆಮನೆಯಲ್ಲಿ ತ್ರಿವರ್ಣ ಬಾವುಟ ಹಾರಿಸಬೇಕೆಂಬ ಕೇಂದ್ರ ಸರಕಾರದ ಕರೆಗೆ ಪೂರಕವಾಗಿ, ಅತಿ ಹೆಚ್ಚಿನ ಬೇಡಿಕೆ ಧ್ವಜಗಳಿಗೆ ಈಗಿದೆ ಎನ್ನುತ್ತಾರೆ ತಮ್ಮ ಕುಲಕಸುಬನ್ನೇ ಮುಂದುವರಿಸುತ್ತಿರುವ ಗಫಾರ್.‌ ʻʻ೧೯೭೫ ಮತ್ತು ಮುಂದಿನ ಹತ್ತು ವರ್ಷಗಳಲ್ಲಿ ಧ್ವಜಗಳಿಗೆ ಸಾಕಷ್ಟು ಬೇಡಿಕೆ ಕಂಡ ದಿನಗಳು. ಆದರೆ ಈಗಿನ ಬೇಡಿಕೆ ಕಂಡುಕೇಳರಿಯದ್ದು. ಸಾಮಾನ್ಯವಾಗಿ ಆಗಸ್ಟ್‌ ೧೫ರ ಹೊತ್ತಿಗೆ ದಿನವೊಂದಕ್ಕೆ ನಾಲ್ಕರಿಂದ ಐದು ಸಾವಿರ ಬಾವುಟಗಳಿಗೆ ಬೇಡಿಕೆ ಬರುತ್ತಿತ್ತು. ಆದರೆ ಈ ಬಾರಿ ದಿನಕ್ಕೆ ಒಂದೂವರೆ ಲಕ್ಷ ಬಾವುಟಗಳನ್ನು ತಯಾರಿಸುತ್ತಿದ್ದೇವೆ. ಬೇಡಿಕೆ ಎಷ್ಟಿದೆಯೆಂದರೆ ಎಲ್ಲಾ ತಯಾರಿಕಾ ಘಟಕಗಳು ಹಗಲಿರುಳು ದುಡಿಯುತ್ತಿವೆ. ನೌಕರರು ನಾಲ್ಕು ಪಾಳಿಗಳಲ್ಲಿ ಎಡೆಬಿಡದೆ ಶ್ರಮಿಸುತ್ತಿದ್ದಾರೆʼʼ ಎನ್ನುತ್ತಾರೆ ಗಫಾರ್‌.

ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ | ಇಂದಿನಿಂದ ಸಂಭ್ರಮ ಆರಂಭ, ಏನೇನು ನಡೆಯಲಿದೆ?

ಗಫಾರ್‌ ಅವರ ತಮ್ಮ ಅಬ್ದುಲ್‌ ಮಲಿಕ್‌ ಸದರ್‌ ಅವರ ಪ್ರಕಾರ, ತಮ್ಮ ಹಿರಿಯ ಸಹೋದರನಿಗೆ ದಿನಕ್ಕೆ ೫೦೦ರಂತೆ ಬೇಡಿಕೆಯ ಕರೆಗಳು ಬರುತ್ತಿವೆ. ಆರು ಸಹೋದರರ ಪೈಕಿ ಕಿರಿಯವನಾದ ಸದರ್‌ ಸಹ ತಮ್ಮ ಈ ಕುಲಕಸುಬನ್ನೇ ಮಾಡುತ್ತಿದ್ದಾರೆ. ದಿನವೊಂದಕ್ಕೆ ತಯಾರಾಗುವ ಬಾವುಟಗಳ ಸಂಖ್ಯೆ ಸದ್ಯದಲ್ಲೇ ಎರಡು ಲಕ್ಷ ತಲುಪಲಿದೆ ಎಂದು ಅಂದಾಜಿಸುವ ಗಫಾರ್‌, ಇದು ಈವರೆಗಿನ ದಾಖಲೆಯಾಗಲಿದೆ ಎಂದು ಕಣ್ಣರಳಿಸುತ್ತಾರೆ.

ʻʻಧ್ವಜ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿಕೊಂಡಿರುವ ಅತ್ಯಂತ ಹಳೆಯ ಅಂಗಡಿ ನಮ್ಮದಿರಬಹುದು. ಕಳೆದ ೬೦ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಬಾವುಟಗಳ ತಯಾರಿಕೆ ಮತ್ತು ಮಾರಾಟ ನಡೆಯುತ್ತಿದೆ. ವ್ಯಾಪಾರ ಮತ್ತು ವಹಿವಾಟಿನ ದೃಷ್ಟಿಕೋನದ ಹೊರತಾಗಿ ಒಮ್ಮೆ ನೋಡಿದರೆ, ಹೆಚ್ಚಿನ ಜನರಿಗೆ ನೌಕರಿ ಕೊಟ್ಟು, ನೌಕರಿಯಲ್ಲಿರುವವರಿಗೆ ಹೆಚ್ಚಿನ ವೇತನವನ್ನೂ ನೀಡಲು ಸಾಧ್ಯವಾಗುತ್ತಿರುವ ಈ ದಿನಗಳು ಸ್ವರ್ಣಯುಗದಂತೆ ಅನಿಸುತ್ತಿವೆʼʼ ಎಂಬುದು ಗಫಾರ್‌ ಅವರ ಸಂಭ್ರಮಕ್ಕೆ ಕಾರಣ. ದಿನಕ್ಕೆ ಸುಮಾರು ೬೦೦ ನೌಕರರು ತಮ್ಮ ಉದ್ದಿಮೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಇವರು, ʻʻಮೊದಲೆಲ್ಲಾ ದಿನಕ್ಕೆ ೨೦೦-೨೫೦ ವೇತನ ಪಡೆಯುತ್ತಿದ್ದ ನೌಕರರು, ಈಗ ೮೦೦-೧೦೦೦ವರೆಗೂ ಪಡೆಯುತ್ತಿದ್ದಾರೆ. ಕೆಲಸ ಮಾಡುವವರಲ್ಲಿ ಹೆಚ್ಚಿನವರು ಮಹಿಳೆಯರುʼʼ ಎಂದು ವಿವರಿಸುತ್ತಾರೆ.

ಭಾರತ್‌ ಹ್ಯಾಂಡ್‌ಲೂಮ್ಸ್‌ನಲ್ಲಿ ಕಳೆದ ೩೦ ವರ್ಷಗಳಿಂದ ರಾಷ್ಟ್ರ ಧ್ವಜಗಳ ತಯಾರಿಕೆಯಲ್ಲಿ ನಿರತರಾಗಿರುವ ಜಹೂರ್‌ ಅಹ್ಮದ್‌ ತಾವೇ ದಿನವೊಂದಕ್ಕೆ ೫೦೦-೭೦೦ ಧ್ವಜಗಳವರೆಗೂ ತಯಾರಿಸುವುದಾಗಿ ಹೇಳುತ್ತಾರೆ. ʻʻಮೊದಲೆಲ್ಲಾ ಚೀನಾದಿಂದ ಬರುತ್ತಿದ್ದ ಈ ವಸ್ತುಗಳು ಈಗ ಭಾರತದಲ್ಲಿ ಭಾರತೀಯರಿಂದಲೇ ತಯಾರಿಸಲ್ಪಡುತ್ತಿವೆʼʼ ಎಂಬುದು ಸಮೀಪದ ಮಸೀದಿಯ ಇಮಾಂ ಮೊಹಮ್ಮದ್‌ ರಹ್ಮತುಲ್ಲಾ ಅವರ ಖುಷಿಗೆ ಕಾರಣ. ವ್ಯಾಪಾರ, ವಹಿವಾಟಿಗಿಂತಲೂ ಮುಖ್ಯವಾಗಿ ದೇಶಕ್ಕಾಗಿ ಈ ಧ್ವಜಗಳನ್ನು ತಯಾರಿಸುವುದಾಗಿ ಅಬ್ದುಲ್ ಗಫಾರ್‌ ಹೇಳುತ್ತಾರೆ.

ಇದನ್ನೂ ಓದಿ: ಅಮೃತ ಮಹೋತ್ಸವ | 750 ಬಾಲಕಿಯರು ಸಿದ್ಧಪಡಿಸಿದ ಪೇಲೋಡ್‌‌, ತ್ರಿವರ್ಣಧ್ವಜ ಬಾಹ್ಯಾಕಾಶಕ್ಕೆ

Exit mobile version