Site icon Vistara News

ಸ್ವಾತಂತ್ರ್ಯದ ಅಮೃತ ಮಹೋತ್ಸವ | ಇಂದಿನಿಂದ ಸಂಭ್ರಮ ಆರಂಭ, ಏನೇನು ನಡೆಯಲಿದೆ?

azadi ka amrit mahotsav

ಸ್ವಾತಂತ್ರ್ಯದ 75 ವರ್ಷಗಳ ಆಚರಣೆಯ ʻಆಜಾದಿ ಕಾ ಅಮೃತ ಮಹೋತ್ಸವʼ ಆಗಸ್ಟ್‌ 2ರಿಂದ ದೇಶದ ಎಲ್ಲ ಕಡೆ ಆರಂಭವಾಗಲಿದೆ. 1947ರ ಆಗಸ್ಟ್‌ 15ರಿಂದ 2022ರ ಆಗಸ್ಟ್‌ 15ಕ್ಕೆ ಸ್ವತಂತ್ರ ಭಾರತಕ್ಕೆ 75 ವರ್ಷಗಳು ತುಂಬುತ್ತವೆ. 75 ತುಂಬಿದ ಸಂಭ್ರಮಾಚರಣೆಯು ಮುಂದಿನ 2023 ಆಗಸ್ಟ್‌ 15ರವರೆಗೂ ನಾನಾ ರೀತಿಯಲ್ಲಿ ನಡೆಯಲಿದೆ. ಆಗಸ್ಟ್‌ 13ರಿಂದ 15ರವರೆಗೆ ʼಹರ್‌ ಘರ್‌ ತಿರಂಗಾʼ ಉಪಕ್ರಮದ ಅಡಿಯಲ್ಲಿ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಾಡಿಸಲು ಪ್ರಧಾನಿ ಕರೆ ನೀಡಿದ್ದಾರೆ. ಸೋಶಿಯಲ್‌ ಅಕೌಂಟ್‌ಗಳಲ್ಲೂ ತ್ರಿವರ್ಣಧ್ವಜದ ಫೋಟೋ ಹಾಕುವುದು, ರಾಷ್ಟ್ರಧ್ವಜದ ಜತೆಗೆ ಸೆಲ್ಫಿ ಇತ್ಯಾದಿಗಳಿಗೆ ಕರೆ ನೀಡಲಾಗಿದೆ.

ಈ ಕುರಿತು ಒಂದು ರಾಷ್ಟ್ರೀಯ ಸಮಿತಿಯನ್ನು ರಚಿಸಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅದರ ಅಧ್ಯಕ್ಷರಾಗಿರುತ್ತಾರೆ. ಈಗಾಗೇ ಅದರ ಮೊದಲ ಸಭೆ ನಡೆದಿದ್ದು, ಸಭೆಯಲ್ಲಿ ಮಹೋತ್ಸವ ಆಚರಿಸುವ ಬಗ್ಗೆ ಹಲವು ಯೋಜನೆಗಳು, ಯೋಚನೆಗಳನ್ನು ಚರ್ಚಿಸಲಾಗಿದೆ. ಸ್ವಾತಂತ್ರ್ಯದ 75 ವರ್ಷಗಳ ಸಂಭ್ರಮವನ್ನು ಐತಿಹಾಸಿಕ ಸ್ವರೂಪ, ವೈಭವ ಮತ್ತು ಮಹತ್ವಕ್ಕೆ ತಕ್ಕಂತೆ ಭವ್ಯವಾಗಿ ಉತ್ಸಾಹದಿಂದ ಆಚರಿಸುವುದು ಉದ್ದೇಶ. ಆಡಳಿತ ಪಕ್ಷದಂತೆಯೇ, ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯನ್ನು ಹೊಂದಿರುವ ಪ್ರತಿಪಕ್ಷ ಕಾಂಗ್ರೆಸ್‌ ಕೂಡ ಅಷ್ಟೇ ಹುಮ್ಮಸ್ಸಿನಿಂದ ಇದರಲ್ಲಿ ಭಾಗವಹಿಸುತ್ತಿರುವುದು ವಿಶೇಷ.

75 ವರ್ಷಗಳ ಆಚರಣೆಗೆ 5 ವಲಯಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ ಸ್ವಾತಂತ್ರ್ಯ ಹೋರಾಟದ ನೆನಪು, 75ರ ಐಡಿಯಾಗಳು, 75ರ ಸಾಧನೆಗಳು, 75ರ ಕ್ರಿಯೆಗಳು ಮತ್ತು 75ರ ಸಂಕಲ್ಪಗಳು.

ಸ್ವಾತಂತ್ರ್ಯ ಹೋರಾಟದ ನೆನಪುಗಳು: ಸ್ವಾತಂತ್ರ್ಯ ಹೋರಾಟದಲ್ಲಿ ಕಾಣಿಸುವ ದೊಡ್ಡ ದೊಡ್ಡ ಹೆಸರುಗಳು ಮಾತ್ರವಲ್ಲ, ತೆರೆಮರೆಯ ಸ್ವಾತಂತ್ರ್ಯ ಹೋರಾಟಗಾರರನ್ನು ಕೂಡ ನೆನೆಯುವ ಕಾಲವಿದು. ಅವರ ಕಥೆಗಳನ್ನು ಗೌರವಿಸುವ ಮತ್ತು ಅವುಗಳನ್ನು ಜನರಿಗೆ ತಲುಪಿಸುವ ಅಗತ್ಯವಿದೆ. ದೇಶದ ಮೂಲೆ ಮೂಲೆಗಳೂ ಇಂಥವರ ತ್ಯಾಗದಿಂದ ತುಂಬಿವೆ. ಅವರ ಕಥೆಗಳು ರಾಷ್ಟ್ರಕ್ಕೆ ಶಾಶ್ವತವಾದ ಸ್ಫೂರ್ತಿಯ ಸೆಲೆಯಾಗಿವೆ. ಪ್ರತಿಯೊಂದು ವರ್ಗದ ಕೊಡುಗೆಯನ್ನೂ ನಾವು ಮುನ್ನೆಲೆಗೆ ತರಬೇಕಾಗಿದೆ. ಈ ಐತಿಹಾಸಿಕ ಮಹೋತ್ಸವವು ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಸಾಕಾರಗೊಳಿಸುವ, ಭಾರತವನ್ನು ಅವರು ಬಯಸಿದ ಎತ್ತರಕ್ಕೆ ಏರಿಸುವ ಪ್ರಯತ್ನ.

75ರ ಐಡಿಯಾಗಳು (Ideas@75): ಮುಂದಿನ 25 ವರ್ಷಗಳನ್ನು, ಅಂದರೆ ಸ್ವಾತಂತ್ರ್ಯದ 75ನೇ ವರ್ಷದಿಂದ 100ನೇ ವರ್ಷವರೆಗಿನ ಕಾಲವನ್ನು ʻಅಮೃತಕಾಲʼ ಎಂದು ಕರೆಯಬಹುದು. ದೇಶ ಇನ್ನಷ್ಟು ಸ್ಫೂರ್ತಿಯಿಂದ ಮುನ್ನಡೆಯಬೇಕಿರುವ ಕಾಲವಿದು. ದೇಶವನ್ನು ಪ್ರಗತಿಯ ಹಾದಿಯಲ್ಲಿ ಇನ್ನಷ್ಟು ಮುಂದಕ್ಕೆ ಕೊಂಡೊಯ್ಯುವ ಹೊಸ ಐಡಿಯಾಗಳು, ಚಿಂತನೆಗಳು, ಯೋಜನೆಗಳು ಬೇಕಿವೆ. ಇರುವುದನ್ನು ಗುರುತಿಸಬೇಕಿವೆ. ಜಗತ್ತಿಗೆ ದೇಶದ ಕೊಡುಗೆಯನ್ನು ಗುರುತಿಸುವುದೂ ಆಗಬೇಕಿದೆ. ಇದರ ಯೋಜನೆಗಳಲ್ಲಿ ʻಕಾಶಿ ಉತ್ಸವʼ (ಕಾಶಿಯಲ್ಲಿ ಸಾಹಿತ್ಯೋತ್ಸವ) ಹಾಗೂ ದೇಶದ 75 ಲಕ್ಷ ವಿದ್ಯಾರ್ಥಿಗಳು ಪ್ರಧಾನಿಗೆ 2047ರ ಭಾರತದ ಬಗ್ಗೆ ಪತ್ರ ಬರೆಯುವುದು ಸೇರಿದೆ.

ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ | ಎಲ್ಲ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಾಟ: ಎನ್. ರವಿಕುಮಾರ್

75ರ ಸಾಧನೆಗಳು: ದೇಶ ಸ್ವತಂತ್ರಗೊಂಡ ಕಳೆದ ಎಪ್ಪತ್ತೈದು ವರ್ಷಗಳಲ್ಲಿ ವೈಯಕ್ತಿಕವಾಗಿ, ಸಾಮೂಹಿಕವಾಗಿ ಹಲವು ಸಾಧನೆಗಳನ್ನು ಮಾಡಿದೆ. ಇವುಗಳನ್ನು ಗುರುತಿಸುವ, ಅವುಗಳ ಬಗ್ಗೆ ಹೆಮ್ಮೆಪಡುವುದರೊಂದಿಗೆ ರಾಷ್ಟ್ರೀಯ ಸ್ವಾಭಿಮಾನವನ್ನು ಹೆಚ್ಚಿಸುವ ಕೆಲಸ ಆಗಬೇಕಿದೆ. ಇದಕ್ಕಾಗಿ 1971ರ ವಿಜಯವನ್ನು ನೆನಪಿಸುವ ʼಸ್ವರ್ಣಿಮ ವಿಜಯ ವರ್ಷʼ ಆಚರಣೆ, ಮಹಾಪರಿನಿರ್ವಾಣ ದಿನವಸದಂದು ಶ್ರೇಷ್ಠತಾ ಯೋಜನೆಯ ಆರಂಭ ಇತ್ಯಾದಿಗಳು ಸೇರಿವೆ.

75ರ ಕ್ರಿಯೆಗಳು (Actions@75): ತಾನು ಕೈಗೊಂಡ ಕಾರ್ಯಕ್ರಮಗಳು, ಯೋಜನೆಗಳ ಸಮರ್ಪಕ ಜಾರಿ, ಸರ್ವಾಂಗೀಣ ಪ್ರಗತಿಯ ಹಾದಿಯ ಕಾರ್ಯಕ್ರಮಗಳ ಪುನರಾವಲೋಕನ ಹಾಗೂ ಹೊಸ ಯೋಜನೆಗಳ ಜಾರಿ ಇದರ ಉದ್ದೇಶ. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಇದರ ಪ್ರಾಥಮಿಕ ಆಶಯ. ಗತಿಶಕ್ತಿ ಯೋಜನೆಯ ಮುಂದಿನ ಹಂತವನ್ನು ಇದರಲ್ಲಿ ನೆರವೇರಿಸಲಾಗುತ್ತದೆ.

75ರ ಆಶಯಗಳು (Resolves@75): ಈ ಥೀಮ್ ನಮ್ಮ ಸಾಮೂಹಿಕ ಸಂಕಲ್ಪ ಮತ್ತು ನಮ್ಮ ಮಾತೃಭೂಮಿಯ ಭವಿಷ್ಯವನ್ನು ರೂಪಿಸುವ ನಿರ್ಣಯದ ಮೇಲೆ ಕೇಂದ್ರೀಕರಿಸುತ್ತದೆ. 2047ರ ಪ್ರಯಾಣಕ್ಕೆ ನಾವು ಪ್ರತಿಯೊಬ್ಬರೂ ವೈಯಕ್ತಿಕ ಹಾಗೂ ಸಂಘಟನಾತ್ಮಕವಾಗಿ ನಮ್ಮ ಪಾತ್ರವನ್ನು ನಿರ್ವಹಿಸುವ ಅಗತ್ಯವಿದೆ. ನಮ್ಮ ಸಾಮೂಹಿಕ ಸಂಕಲ್ಪ, ಉತ್ತಮವಾಗಿ ರೂಪಿಸಲಾದ ಯೋಜನೆಗಳು ಮತ್ತು ದೃಢ ಪ್ರಯತ್ನಗಳ ಮೂಲಕ ಆಲೋಚನೆಗಳು ಕ್ರಿಯೆಗಳಾಗುತ್ತವೆ. ಈ ವಿಷಯದ ಅಡಿಯಲ್ಲಿ ಸಂವಿಧಾನದ ದಿನ, ಉತ್ತಮ ಆಡಳಿತ ವಾರ ಮುಂತಾದ ಹಲವು ಉಪಕ್ರಮಗಳು, ಇನ್ನಷ್ಟು ಹೊಸ ಉಪಕ್ರಮಗಳೂ ಇವೆ.

ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಹಲವಾರು ಹೊಸ ಯೋಜನೆಗಳನ್ನೂ ಘೋಷಿಸಲಿವೆ. ಬೇರೆ ಬೇರೆ ಇಲಾಖೆಗಳು ಹೊಸ ಹೊಸ ಉಪಕ್ರಮಗಳನ್ನು ಘೋಷಿಸುತ್ತಿವೆ. ಯುವಜನತೆಗೆ ಅಮೃತ ಮಹೋತ್ಸವದ ಲೋಗೋ ರಚಿಸುವ ಸ್ಪರ್ಧೆ ಸೇರಿದಂತೆ ಹಲವಾರು ಕ್ರಿಯೇಟಿವ್‌ ಸ್ಪರ್ಧೆಗಳನ್ನು ರೂಪಿಸಲಾಗಿದೆ.

ಇದನ್ನೂ ಓದಿ: Modi Mann ki Baat| ಆಗಸ್ಟ್‌ 2ರಿಂದ 15ರವರೆಗೆ ತಿರಂಗಾ ನಿಮ್ಮ ಪ್ರೊಫೈಲ್‌ ಪಿಕ್ಚರ್‌ ಆಗಿರಲಿ

Exit mobile version