Site icon Vistara News

Bangladesh Protest: ರಫೇಲ್ ಯುದ್ಧ ವಿಮಾನಗಳ ಹಾರಾಟ, ರಾಡಾರ್‌ ಮೂಲಕ ಮೇಲ್ವಿಚಾರಣೆ; ಶೇಖ್‌ ಹಸೀನಾ ಸುರಕ್ಷತೆಗೆ ಭಾರತ ಕೈಗೊಂಡ ಕ್ರಮಗಳಿವು

Bangladesh Protest

ಢಾಕಾ: ಬಾಂಗ್ಲಾದೇಶದಲ್ಲಿ ಕಳೆದ 15 ವರ್ಷಗಳಿಂದ ಅಧಿಕಾರದ ಗದ್ದುಗೆ ಹಿಡಿದಿದ್ದ ಶೇಖ್‌ ಹಸೀನಾ (Sheik Hasina) ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೀಸಲಾತಿ ವಿಷಯಕ್ಕೆ ಸಂಬಂಧಿಸಿದ ಪ್ರತಿಭಟನೆಯು (Bangladesh Protest) ದೇಶಾದ್ಯಂತ ಹಿಂಸಾರೂಪ ತಾಳಿದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ ಅವರು ಪ್ರಾಣಭಯದ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿದ್ದಾರೆ. ಹಸೀನಾ ಅವರು ವಾಯುಪಡೆಯ ಜೆಟ್‌ನಲ್ಲಿ ಭಾರತಕ್ಕೆ ಆಗಮಿಸಿದ್ದು, ಈ ವೇಳೆ ಅವರಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು.

ಹಸೀನಾ ಅವರು ಬಾಂಗ್ಲಾದಿಂದ ಹೊರಡುತ್ತಿದ್ದಂತೆ ಭಾರತೀಯ ವಾಯುಪಡೆ (Indian Air Force)ಯ ರಾಡಾರ್‌ಗಳು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದ್ದವು. ಸಂಜೆ 6ರ ಸುಮಾರಿಗೆ ಹಸೀನಾ ಮತ್ತು ಅವರ ಸಹೋದರಿಯನ್ನು ಹೊತ್ತ ಬಾಂಗ್ಲಾದೇಶ ವಾಯುಪಡೆಯ ಸಿ -130 ಸಾರಿಗೆ ವಿಮಾನ AJAX1413 ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಯನ್ನು ತಲುಪಿತು. ಈ ಸಂದರ್ಭದಲ್ಲಿ ಯಾವುದೇ ತುರ್ತು ಅಗತ್ಯಕ್ಕಾಗಿ ಭಾರತೀಯ ವಾಯುಪಡೆಯ ಸಿಬ್ಬಂದಿ ಎರಡು ರಫೇಲ್ ಯುದ್ಧ ವಿಮಾನಗಳನ್ನು ಸಜ್ಜುಗೊಳಿಸಿದ್ದರು.

ಹಸೀನಾ ಅವರ ಜೆಟ್ ವಿಮಾನಕ್ಕೆ ಸುರಕ್ಷತೆ ಒದಗಿಸಲು ಪಶ್ಚಿಮ ಬಂಗಾಳದ ಹಶಿಮಾರಾ ವಾಯುನೆಲೆಯಿಂದ 101 ಸ್ಕ್ವಾಡ್ರನ್‌ನ ಎರಡು ರಫೇಲ್ ಯುದ್ಧ ವಿಮಾನಗಳು ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಹಾರಾಟ ನಡೆಸಿದವು. ಐಎಎಫ್ ಮತ್ತು ಸೇನಾ ಮುಖ್ಯಸ್ಥರಾದ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಮತ್ತು ಜನರಲ್ ಉಪೇಂದ್ರ ದ್ವಿವೇದಿ ಅವರು ಇದರ ಮೇಲ್ವಿಚಾರಣೆ ನಡೆಸಿದರು. ಈಗಲೂ ಅವರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಎಂದು ಮೂಲಗಳು ತಿಳಿಸಿವೆ.

ಹಸೀನಾ ಅವರಿಗೆ ಭದ್ರತೆ ಒದಗಿಸುವ ಕುರಿತು ಇಂಟೆಲ್ ಏಜೆನ್ಸಿ ಮುಖ್ಯಸ್ಥ ಜನರಲ್ ದ್ವಿವೇದಿ ಮತ್ತು ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಜಾನ್ಸನ್ ಫಿಲಿಪ್ ಮ್ಯಾಥ್ಯೂ ಅವರೊಂದಿಗೆ ಉನ್ನತ ಭದ್ರತಾ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗಿತ್ತು.

ಹಸೀನಾ ಹಿಂಡನ್ ವಾಯುನೆಲೆಗೆ ತಲುಪುತ್ತಿದ್ದಂತೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಸ್ವಾಗತಿಸಿದರು. ಬಳಿಕ ಅವರು ಅವರೊಂದಿಗೆ ಒಂದು ಗಂಟೆ ಸಭೆ ನಡೆಸಿದರು. ಈ ವೇಳೆ ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿ ಮತ್ತು ಹಸೀನಾ ಅವರ ಭವಿಷ್ಯದ ಕ್ರಮದ ಬಗ್ಗೆಯೂ ಚರ್ಚಿಸಲಾಯಿತು.

ನಂತರ ನಡೆದ ಭದ್ರತಾ ಕ್ಯಾಬಿನೆಟ್ ಸಮಿತಿ ಸಭೆಗೆ ಅಜಿತ್‌ ದೋವಲ್ ಅವರು ಇಡೀ ಪ್ರಕರಣದ ಬಗ್ಗೆ ವಿವರ ನೀಡಿದರು. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಿದ್ದರು. ಬಾಂಗ್ಲಾದೇಶದ ಹಿಂಸಾಚಾರದಿಂದ ಭಾರತದ ಮೇಲಾಗುವ ಪರಿಣಾಮಗಳು ಏನು? ಗಡಿಯಲ್ಲಿ ಭದ್ರತೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು, ಒಳನುಸುಳುವಿಕೆ ನಿಯಂತ್ರಣ, ಬಾಂಗ್ಲಾದೇಶದ ಜತೆಗಿನ ವ್ಯಾಪಾರ-ಒಪ್ಪಂದ, ಹಿಂಸಾಚಾರ ಇನ್ನೂ ಜಾಸ್ತಿಯಾದರೆ ಏನಾಗಬಹುದು, ಭಾರತ ತೆಗೆದುಕೊಳ್ಳಬೇಕಾದ ಕ್ರಮಗಳು ಯಾವುವು ಎಂಬುದು ಸೇರಿ ಹಲವು ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಇದನ್ನೂ ಓದಿ: Bangladesh Protest: ಬಾಂಗ್ಲಾದೇಶ ಹಿಂಸಾಚಾರ ಕುರಿತು ಮೋದಿ ಮಹತ್ವದ ಸಭೆ; ಚರ್ಚಿಸಿದ ವಿಷಯಗಳೇನು?

Exit mobile version