Site icon Vistara News

Bangladesh Unrest: ಬಾಂಗ್ಲಾದೇಶಕ್ಕೆ ಎಂದಿನಂತೆ ವಿಮಾನ ಹಾರಾಟ; ಢಾಕಾದಿಂದ ದಿಲ್ಲಿಗೆ ಬಂದಿಳಿದ 205 ಭಾರತೀಯರು

Bangladesh Unrest

ನಬದೆಹಲಿ: ನಿರಂತರ ಪ್ರತಿಭಟನೆ, ಗಲಭೆಗಳ (Bangladesh Unrest) ಬಳಿಕ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಬಾಂಗ್ಲಾದೇಶವನ್ನು (Bangladesh) ತೊರೆದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿರುವ ತಮ್ಮ ನಿವಾಸಿಗಳ ಸುರಕ್ಷತೆ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಈ ಮಧ್ಯೆ ಏರ್ ಇಂಡಿಯಾ, ವಿಸ್ತಾರ ಮತ್ತು ಇಂಡಿಗೋ ವಿಮಾನಗಳು ಬುಧವಾರ (ಆಗಸ್ಟ್‌ 7) ದಿಲ್ಲಿಯಿಂದ ಬಾಂಗ್ಲಾದೇಶದ ರಾಜಧಾನಿ ಢಾಕಾಗೆ ನಿಗದಿಯಂತೆ ಹಾರಾಟ ನಡೆಸಲು ತೀರ್ಮಾನಿಸಿವೆ. ಜತೆಗೆ ಏರ್ ಇಂಡಿಯಾ ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಭಾರತೀಯರನ್ನು ಮರಳಿ ಕರೆತರಲು ವಿಶೇಷ ವಿಮಾನ ಸೇವೆಯನ್ನೂ ಒದಗಿಸಲಿದೆ ಎಂದು ಮೂಲಗಳು ತಿಳಿಸಿವೆ.

ಏರ್ ಇಂಡಿಯಾ ಬುಧವಾರ ದಿಲ್ಲಿಯಿಂದ ಢಾಕಾಗೆ ತನ್ನ ನಿಗದಿತ ಎರಡು ದೈನಂದಿನ ವಿಮಾನಗಳ ಹಾರಾಟ ನಡೆಸಲಿದೆ. ಜತೆಗೆ ವಿಸ್ತಾರ ಮತ್ತು ಇಂಡಿಗೋ ಬುಧವಾರದಿಂದ ಬಾಂಗ್ಲಾದೇಶದ ರಾಜಧಾನಿಗೆ ನಿಗದಿಪಡಿಸಿದ ಸೇವೆಗಳನ್ನು ನಿರ್ವಹಿಸಲಿವೆ. ವಿಸ್ತಾರ ಮತ್ತು ಇಂಡಿಗೋ ಎರಡೂ ವಿಮಾನಯಾನ ಸಂಸ್ಥೆಗಳು ಮಂಗಳವಾರ ಢಾಕಾಗೆ ತೆರಳುವ ವಿಮಾನ ಸಂಚಾರವನ್ನು ರದ್ದುಗೊಳಿಸಿದ್ದವು.

ವಿಸ್ತಾರ ವಿಮಾನ ಢಾಕಾಗೆ ಮುಂಬೈನಿಂದ ಪ್ರತಿದಿನ ಮತ್ತು ದಿಲ್ಲಿಯಿಂದ ವಾರಕ್ಕೆ ಮೂರು ಸೇವೆಗಳನ್ನು ಒದಗಿಸುತ್ತದೆ. ಇಂಡಿಗೋ ಒಂದು ವಿಮಾನ ಪ್ರತಿ ದಿನ ದಿಲ್ಲಿ, ಮುಂಬೈ ಮತ್ತು ಚೆನ್ನೈನಿಂದ ಢಾಕಾಗೆ ತೆರಳುತ್ತದೆ. ಜತೆಗೆ ಕೋಲ್ಕತ್ತಾದಿಂದ ಬಾಂಗ್ಲಾದೇಶಕ್ಕೆ ಪ್ರತಿದಿನ ಎರಡು ಸೇವೆಗಳನ್ನು ಒದಗಿಸುತ್ತದೆ.

ದಿಲ್ಲಿಗೆ ಬಂದಿಳಿದ 205 ಭಾರತೀಯರು

ಈ ಮಧ್ಯೆ ಬುಧವಾರ ಏರ್‌ ಇಂಡಿಯಾದ ವಿಶೇಷ ವಿಮಾನದಲ್ಲಿ 205 ಭಾರತೀಯರು ಢಾಕಾದಿಂದ ದಿಲ್ಲಿಗೆ ಬಂದಿಳಿದಿದ್ದಾರೆ. ಮಂಗಳವಾರ ತಡರಾತ್ರಿ ಢಾಕಾದಿಂದ ಈ ಎ 321 (A321) ವಿಮಾನ ಟೇಕ್‌ ಆಫ್‌ ಆಗಿತ್ತು. ಈ ವಿಮಾನದಲ್ಲಿ 6 ಮಕ್ಕಳೂ ಇದ್ದರು.

ಮೇಘಾಲಯ, ಮಣಿಪುರಗಳಲ್ಲಿ ರಾತ್ರಿ ಕರ್ಫ್ಯೂ

ಬಾಂಗ್ಲಾದೇಶದಲ್ಲಿ ಹಿಂಸಾಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಮೀಪದ ಮಣಿಪುರ ಮತ್ತು ಮೇಘಾಲಯಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಬಾಂಗ್ಲಾದೇಶದಲ್ಲಿನ ಗಲಭೆ ಕಾರಣದಿಂದ ಅಲ್ಲಿನ ಜನರು ಮಣಿಪುರಕ್ಕೆ ಒಳನುಸುಳುವ ಸಾಧ್ಯತೆ ಇದೆ ಎಂದು ಎಂದು ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ತಿಳಿಸಿದ್ದಾರೆ. ಮಣಿಪುರವು ಮ್ಯಾನ್ಮಾರ್‌ನೊಂದಿಗೆ 398 ಕಿ.ಮೀ. ಅಂತಾರಾಷ್ಟ್ರೀಯ ಗಡಿಗಳನ್ನು ಹೊಂದಿದೆ. ಅದಾಗ್ಯೂ ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿಲ್ಲ. ಆದರೆ ಮಣಿಪುರವು ಬಾಂಗ್ಲಾದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ದಕ್ಷಿಣ ಅಸ್ಸಾಂನೊಂದಿಗೆ ಅಂತಾರಾಜ್ಯ ಗಡಿಗಳನ್ನು ಹೊಂದಿದೆ. ಈ ಕಾರಣಕ್ಕೆ ಇಲ್ಲಿ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Bangladesh Unrest: ಭಾರತದಲ್ಲೂ ಬಾಂಗ್ಲಾ ಮಾದರಿ ಗಲಭೆಗೆ ಸಂಚು; ಪಾಕ್‌ ಮಾಜಿ ಕ್ರಿಕೆಟಿಗನ ಸ್ಫೋಟಕ ಮಾಹಿತಿ

ಇನ್ನು ಬಾಂಗ್ಲಾದೇಶದೊಂದಿಗೆ 445 ಕಿ.ಮೀ. ಗಡಿಯನ್ನು ಹಂಚಿಕೊಂಡಿರುವ ಮೇಘಾಲಯದಲ್ಲಿ ಸೋಮವಾರ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ನಿರಾಶ್ರಿತರ ಚಲನೆಯನ್ನು ತಡೆಗಟ್ಟಲು ಗಡಿಯಿಂದ 200 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ ಎಂದು ಮೇಘಾಲಯ ಉಪಮುಖ್ಯಮಂತ್ರಿ ಪ್ರೆಸ್ಟೋನ್ ಟಿನ್ಸಾಂಗ್ ಹೇಳಿದ್ದಾರೆ. ರಾಜ್ಯದ ಭಾರತ-ಬಾಂಗ್ಲಾದೇಶ ಗಡಿಯುದ್ದಕ್ಕೂ ಬಿಎಸ್ಎಫ್ ಕಟ್ಟುನಿಟ್ಟಾದ ಜಾಗ್ರತೆ ವಹಿಸಲಿದೆ ಎಂದೂ ವಿವರಿಸಿದ್ದಾರೆ.

Exit mobile version