Site icon Vistara News

Bangladesh Unrest: ಪ್ರಧಾನಿ ಮೋದಿಗೆ ಬಾಂಗ್ಲಾದೇಶದ ಮೊಹಮ್ಮದ್‌ ಯೂನಸ್‌ ಕರೆ; ಹಿಂದೂಗಳ ರಕ್ಷಣೆ ಬಗ್ಗೆ ಭರವಸೆ

bangladesh unrest

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(Prime Minister Narendra Modi)ಗೆ ಬಾಂಗ್ಲಾದೇಶ ಸರ್ಕಾರದ ಹಂಗಾಮಿ ಮುಖ್ಯ ಸಲಹೆಗಾರ ಮೊಹಮ್ಮದ್‌ ಯೂನಸ್‌(Muhammad Yunus) ಕರೆ ಮಾಡಿ ಬಾಂಗ್ಲಾದೇಶ(Bangladesh Unrest)ದ ಪ್ರಸ್ತುತ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಿದ್ದಾರೆ.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ಪ್ರೊಫೆಸರ್ ಮುಹಮ್ಮದ್ ಯೂನಸ್ ಅವರಿಂದ ದೂರವಾಣಿ ಕರೆ ಸ್ವೀಕರಿಸಲಾಗಿದೆ, ಅವರು ಪ್ರಸ್ತುತ ತಲೆದೋರಿರುವ ಪರಿಸ್ಥಿತಿಯ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಪ್ರಜಾಸತ್ತಾತ್ಮಕ, ಸ್ಥಿರ, ಶಾಂತಿಯುತ ಮತ್ತು ಪ್ರಗತಿಪರ ಬಾಂಗ್ಲಾದೇಶಕ್ಕೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದರು. ಬಾಂಗ್ಲಾದೇಶದಲ್ಲಿರುವ ಹಿಂದೂಗಳು ಮತ್ತು ಎಲ್ಲಾ ಅಲ್ಪಸಂಖ್ಯಾತರ ರಕ್ಷಣೆ, ಸುರಕ್ಷತೆ ಮತ್ತು ಭದ್ರತೆಯನ್ನು ಅವರು ಭರವಸೆ ನೀಡಿದರು ಎಂದು ಹೇಳಿದ್ದಾರೆ.

ಉದ್ಯೋಗ ಕೋಟಾಗಳ ವಿರುದ್ಧ ವಿದ್ಯಾರ್ಥಿ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ ನಂತರ ಢಾಕಾದಿಂದ ದೆಹಲಿಗೆ ಪಲಾಯನ ಮಾಡಿದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಲಾಗಿತ್ತು. ಇದಾದ ನಂತರ ಬಾಂಗ್ಲಾದೇಶದ ಹಿಂದೂ ಸಮುದಾಯದವರ ಮೇಲೆ ದಾಳಿಗಳು ನಡೆಯುತ್ತಲೇ ಇದೆ.

ಬಾಂಗ್ಲಾದೇಶ (Bangladesh Unrest)ದಲ್ಲಿ ತಲೆದೋರಿರುವ ಅರಾಜಕತೆ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಜೀವಕ್ಕೆ ಅಪಾಯವನ್ನು ತಂದೊಡ್ಡಿದೆ. ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದ್ದು, ಮತ್ತೊಂದು ಹಿಂದೂ ದೇವಾಲಯ ಮತ್ತು ಮನೆಗೆ ಬೆಂಕಿ ಹಚ್ಚಲಾಗಿದೆ. ಮಂಗಳವಾರ (ಆಗಸ್ಟ್‌ 13) ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಕುರಿಗ್ರಾಮ್ ಜಿಲ್ಲೆಯ ಮುಕುಲ್ ಚಂದ್ರರಾಯ್ ಎಂಬವರ ಮನೆ ಮತ್ತು ದೇವಾಲಯದ ಮೇಲೆ ದಾಳಿ ನಡೆದಿದೆ. ರಾಯ್‌ ಅವರ ಮನೆ ಮತ್ತು ದೇವಸ್ಥಾನ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ ಎಂದು ಮೂಲಗಳು ತಿಳಿಸಿವೆ.

ದುಷ್ಕರ್ಮಿಗಳು ಬೆಂಕಿ ಹಚ್ಚಿದ ತಕ್ಷಣ ಸ್ಥಳೀಯರು ಧಾವಿಸಿ ಬಂದು ನಂದಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಅಷ್ಟೊತ್ತಿಗಾಗಲೇ ಎಲ್ಲವೂ ಹೊತ್ತಿ ಉರಿದಿತ್ತು. ಮನೆಯಲ್ಲಿದ್ದ ಎಲ್ಲವೂ ನಾಶವಾಗಿದೆ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಮುಕುಲ್ ಚಂದ್ರರಾಯ್ ಅವರು ಕುರಿಗ್ರಾಮ್ ಜಿಲ್ಲೆಯ ರಾಜರ್ಹತ್ ಉಪಜಿಲಾದ ಚಕೀರ್ ಪೋಷಾ ಯೂನಿಯನ್ ಅಡಿಯಲ್ಲಿ ಪಟೋವರಿ ಪ್ಯಾರಾ ಗ್ರಾಮದಲ್ಲಿ ವಾಸವಾಗಿದ್ದಾರೆ. ಅವರ ಪತ್ನಿ ಮತ್ತು ಮಗ ತಮ್ಮ ಸುಟ್ಟ ಮನೆ ಮತ್ತು ದೇವಾಲಯದ ಮುಂದೆ ಅಳುತ್ತಿರುವುದು ಕಂಡು ಬಂದಿದೆ.

ಇದನ್ನೂ ಓದಿ:Bangladesh Unrest: ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂಗಳ ಮೇಲಿನ ದೌರ್ಜನ್ಯ; ಮತ್ತೊಂದು ದೇಗುಲ, ಮನೆಗೆ ಬೆಂಕಿ

Exit mobile version