ನವದೆಹಲಿ: ದಂಗೆ ಪೀಡಿತ ಬಾಂಗ್ಲಾದೇಶ(Bangladesh Unrest)ದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳು ಹಾಗೂ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳು(Hindu Minorities) ದಿನೇ ದಿನೇ ಭಾರೀ ಸಂಕಷ್ಟ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ವಹಣೆಗಾಗಿ ಭಾರತ ಸರ್ಕಾರ ಸಮಿತಿಯೊಂದು ರಚಿಸಿದೆ. ಶೇಖ್ ಹಸೀನಾ(Sheikh hasina) ಸರ್ಕಾರದ ಪತನದ ನಂತರ ಉಗ್ರ ಪ್ರತಿಭಟನೆಗಳ ಮಧ್ಯೆ ಈ ಸಮಿತಿಯು ದೇಶದಲ್ಲಿ ಭಾರತೀಯರು ಮತ್ತು ಇತರ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸುತ್ತದೆ.
“ಭಾರತ ಸರ್ಕಾರವು ಇಂಡೋ-ಬಾಂಗ್ಲಾದೇಶ ಗಡಿಯಲ್ಲಿ (IBB) ಪ್ರಸ್ತುತ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಬಾಂಗ್ಲಾದೇಶದಲ್ಲಿರುವ ಭಾರತೀಯ ನಾಗರಿಕರು ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬಾಂಗ್ಲಾದೇಶದಲ್ಲಿರುವ ತಮ್ಮ ಸಹವರ್ತಿ ಅಧಿಕಾರಿಗಳೊಂದಿಗೆ ಸಂವಹನ ನಡೆಸಲಿದೆ” ಎಂದು ಸರ್ಕಾರ ಹೇಳಿದೆ.
“ಸಮಿತಿಯ ನೇತೃತ್ವವನ್ನು ಎಡಿಜಿ, ಗಡಿ ಭದ್ರತಾ ಪಡೆ (ಬಿಎಸ್ಎಫ್), ಪೂರ್ವ ಕಮಾಂಡ್ ವಹಿಸಲಿದೆ. ಇನ್ನು ದಕ್ಷಿಣ ಬಂಗಾಳ, ತ್ರಿಪುರ ಬಿಎಸ್‌ಎಫ್ ನ ಐಜಿಗಳು, ಲ್ಯಾಂಡ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(LPAI)ನ ಸೆಕ್ರೆಟರಿ ಈ ಸಮಿತಿಯ ಸದಸ್ಯರಾಗಿರಲಿದ್ದಾರೆ” ಎಂದು ಹೇಳಿದೆ.
ನೆರೆಯ ರಾಷ್ಟ್ರ ಬಾಂಗ್ಲಾದಲ್ಲಿ ಭುಗಿಲೆದ್ದಿರುವ ದಂಗೆಯಲ್ಲಿ ಅಲ್ಪಸಂಖ್ಯಾತ ಹಿಂದೂ ದಿನೇ ದಿನೇ ನರಕಯಾತನೆ ಅನುಭವಿಸುವಂತಾಗಿದೆ. ಕಂಡ ಕಂಡಲ್ಲಿ ಹಿಂದೂಗಳನ್ನು, ಅವರಿಗೆ ಸಂಬಂಧಿಸಿದ ಮನೆ ಅಂಗಡಿಗಳನ್ನು ಮತ್ತು ದೇಗುಲಗಳನ್ನು ಕಿಡಿಗೇಡಿಗಳು ಪುಡಿಗಟ್ಟಿದ್ದಾರೆ. ಕೈಗೆ ಸಿಕ್ಕವಸ್ತುಗಳನ್ನು ದೋಚುತ್ತಿದ್ದಾರೆ. ಇದೀಗ ಬಾಂಗ್ಲಾದೇಶದ ಖ್ಯಾತ ಗಾಯಕನ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.
ಅಲ್ಲಿನ ಸುಮಾರು 600 ಜನ ಅಕ್ರಮವಾಗಿ ಪಶ್ಚಿಮ ಬಂಗಾಳದ ಗಡಿಪ್ರದೇಶದೊಳಗೆ ಅಕ್ರಮವಾಗಿ ಒಳನುಸುಳಲು ಯತ್ನಿಸಿದ್ದು, ಅವರನ್ನು ತಡೆಯುವಲ್ಲಿ ಗಡಿ ಭದ್ರತಾ ಪಡೆ(BSF) ಯಶಸ್ವಿಯಾಗಿದೆ. ಬಾಂಗ್ಲಾದಲ್ಲಿ ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದ್ದು, ಕ್ಷಣ ಕ್ಷಣಕ್ಕೂ ಪ್ರಾಣಭೀತಿ ಎದುರಿಸುತ್ತಿರುವುದಾಗಿ ಹೇಳಿಕೊಂಡು ಅನೇಕ ಜನರು ಭಾರತದ ಗಡಿಯೊಳಗೆ ಪ್ರವೇಶಿಸಲು ಅವಕಾಶ ನೀಡುವಂತೆ ಬಿಎಸ್‌ಎಫ್ ಸಿಬ್ಬಂದಿ ಮನವಿ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ದಕ್ಷಿಣ್ ಬೆರುಬರಿ ಗ್ರಾಮದಲ್ಲಿ ಈ ಗುಂಪು ಭಾರತದ ಗಡಿ ದಾಟಲು ಪ್ರಯತ್ನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಗ್ಲಾದೇಶದ ಪತ್ರಿಕೆಗಳ ವರದಿ ಪ್ರಕಾರ 27 ಜಿಲ್ಲೆಗಳಲ್ಲಿ ಹಿಂದೂಗಳ ವ್ಯಾಪಾರ ಮಳಿಗೆ ಮತ್ತು ಮನೆಗಳ ಮೇಲೆ ದಾಳಿ ನಡೆದಿದೆ. ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬೆಲೆ ಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಇನ್ನು ಜಮಾತ್-ಎ- ಇಸ್ಲಾಮಿ ಹಿಂದೂ ದೇಗುಲಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿರುವುದನ್ನು ಒಪ್ಪಿಕೊಂಡಿದೆ.
ಬಾಂಗ್ಲಾದೇಶದ ಖುಲ್ನಾ ವಿಭಾಗದಲ್ಲಿರುವ ಮೆಹೆರೆಪುರದಲ್ಲಿರುವ ಇಸ್ಕಾನ್ ದೇಗುಲದ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಅಲ್ಲದೇ ಅಲ್ಲಿರುವ ಕಾಳಿ ಮಂದಿರವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಈ ಬಗ್ಗೆ ಇಸ್ಕಾನ್ ವಕ್ತಾರ ಯುಧಿಸ್ತಿರ್ ಗೋವಿಂದ ದಾಸ್ ಟ್ವೀಟ್ ಮಾಡಿದ್ದು, ಮೆಹರ್‌ಪುರದಲ್ಲಿರುವ ನಮ್ಮ ಇಸ್ಕಾನ್ ಕೇಂದ್ರಗಳಲ್ಲಿ ಒಂದನ್ನು (ಬಾಡಿಗೆಗೆ ನೀಡಲಾಗಿದೆ) ಭಗವಾನ್ ಜಗನ್ನಾಥ, ಬಲದೇವ್ ಮತ್ತು ಸುಭದ್ರಾ ದೇವಿ ದೇವತೆಗಳನ್ನು ಸುಟ್ಟು ಹಾಕಲಾಯಿತು. ಕೇಂದ್ರದಲ್ಲಿ ವಾಸವಾಗಿದ್ದ ಮೂವರು ಭಕ್ತರು ಹೇಗಾದರೂ ತಪ್ಪಿಸಿಕೊಂಡು ಬದುಕುಳಿದರು ಎಂದಿದ್ದಾರೆ.
ಇದನ್ನೂ ಓದಿ: Muhammad Yunus: ಹಿಂದುಗಳನ್ನು ಮೊದಲು ರಕ್ಷಿಸಿ; ಬಾಂಗ್ಲಾದೇಶದ ಮೊಹಮ್ಮದ್ ಯೂನಸ್‌ಗೆ ಮೋದಿ ಆಗ್ರಹ