Site icon Vistara News

Pervez Musharraf: ಭಾರತ ವಿರೋಧಿ ಪರ್ವೇಜ್‌ ಮುಷರ‍್ರಫ್‌ಗೆ ಕೇರಳ ಬ್ಯಾಂಕ್‌ ಗೌರವ; ಭುಗಿಲೆದ್ದ ವಿವಾದ

Pervez Musharraf

ತಿರುವನಂತಪುರಂ: ಭಾರತ ವಿರೋಧಿಯಾಗಿದ್ದ, 1999ರಲ್ಲಿ ಕಾರ್ಗಿಲ್‌ ಯುದ್ಧಕ್ಕೆ ಕಾರಣನಾದ, ಜಮ್ಮು-ಕಾಶ್ಮೀರಕ್ಕೆ ಉಗ್ರರನ್ನು ಛೂ ಬಿಟ್ಟು ಅಶಾಂತಿಗೆ ಕಾರಣನಾದ ಪಾಕಿಸ್ತಾನದ (Pakistan) ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರ‍್ರಫ್‌ಗೆ (Pervez Musharraf) ಕೇರಳದ ಬ್ಯಾಂಕ್‌ ಆಫ್‌ ಇಂಡಿಯಾ (BOI) ನೌಕರರ ಒಕ್ಕೂಟದಲ್ಲಿ ಗೌರವ ನಮನ ಸಲ್ಲಿಸಲು ತೀರ್ಮಾನಿಸಿದ್ದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಜುಲೈ 27ರಂದು ಕೇರಳದ ಆಲಪ್ಪಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರ್ವೇಜ್‌ ಮುಷರ‍್ರಫ್‌ಗೆ ಗೌರವ ಸಲ್ಲಿಸಲು ಕಾರ್ಯಕ್ರಮಕ್ಕೂ ಮೊದಲೇ ತೀರ್ಮಾನಿಸಿತ್ತು ಎಂದು ತಿಳಿದುಬಂದಿದೆ.

ಕಾರ್ಗಿಲ್‌ ಯುದ್ಧದ ವಿಜಯಕ್ಕೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಾಂಕ್‌ ಆಫ್‌ ಇಂಡಿಯಾದ ಉದ್ಯೋಗಿಗಳ ಒಕ್ಕೂಟವು ಜುಲೈ 27ರಂದು ಆಲಪ್ಪುಳದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಇದೇ ವೇಳೆ, ರಾಜ್ಯ ಸಮಾವೇಶವೂ ನಡೆದಿದೆ. ಸಮಾವೇಶದಲ್ಲಿ ಹಲವು ಮಹನೀಯರಿಗೆ ಗೌರವ ಸಲ್ಲಿಸುವ ಪಟ್ಟಿಯಲ್ಲಿ ಪರ್ವೇಜ್‌ ಮುಷರ‍್ರಫ್‌ ಹೆಸರು ಕೂಡ ಸೇರಿಸಿತ್ತು. ಇದರಿಂದಾಗಿ ಬ್ಯಾಂಕ್‌ ಆಫ್‌ ಇಂಡಿಯಾದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಬ್ಯಾಂಕ್‌ಗಳ ಎದುರು ಜನ ಪ್ರತಿಭಟನೆ ನಡೆಸಿದ್ದಾರೆ. ಇದಾದ ನಂತರ, ಒಕ್ಕೂಟವು ಗೌರವಕ್ಕೆ ಪಾತ್ರರಾಗುವವರ ಪಟ್ಟಿಯಿಂದ ಪರ್ವೇಜ್‌ ಮುಷರ‍್ರಫ್‌ ಹೆಸರು ತೆಗೆದಿದ್ದಾರೆ ಎಂದು ತಿಳಿದುಬಂದಿದೆ.

ಪಾಲಿ ಜಾರ್ಜ್‌ ನಗರದಲ್ಲಿ ಬ್ಯಾಂಕ್‌ ಆಫ್‌ ಇಂಡಿಯಾದ 23ನೇ ರಾಜ್ಯ ಸಮಾವೇಶ ನಡೆದಿದೆ. ಕಾಂಗ್ರೆಸ್‌ ಸಂಸದ ಕೆ.ಸಿ.ವೇಣುಗೋಪಾಲ್‌ ಅವರು ಸಮಾವೇಶವನ್ನು ಉದ್ಘಾಟಿಸಿದರು. ಇದೇ ವೇಳೆ, ಕಾರ್ಗಿಲ್‌ ಯುದ್ಧದ ವಿಜಯ, ಯೋಧರ ತ್ಯಾಗ, ಬಲಿದಾನವನ್ನು ಸ್ಮರಿಸಲಾಯಿತು. ಅಲ್ಲದೆ, ನಟರು, ಗಾಯಕರು, ನೃತ್ಯಪಟುಗಳು, ಕ್ರೀಡಾಪಟುಗಳು, ಹೋರಾಟಗಾರರು ಸೇರಿ ಹಲವು ಸಾಧಕರನ್ನು ಸನ್ಮಾನಿಸಲಾಯಿತು.

ಪರ್ವೇಜ್‌ ಮುಷರ‍್ರಫ್‌ಗೆ ಗೌರವ ಸಲ್ಲಿಸಲು ಮುಂದಾಗಿದ್ದ ಬ್ಯಾಂಕ್‌ ಆಫ್‌ ಇಂಡಿಯಾದ ವಿರುದ್ಧ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬ್ಯಾಂಕ್‌ ಎದುರು ಪ್ರತಿಭಟನೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಬ್ಯಾಂಕ್‌ ಆಫ್‌ ಇಂಡಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ದೇಶದ್ರೋಹದ ಕೃತ್ಯ ಎಂದೆಲ್ಲ ಜನ ಟೀಕಿಸಿದ್ದಾರೆ. ರಾಜ್ಯ ಬಿಜೆಪಿ ಘಟಕದ ನಾಯಕರು ಕೂಡ ಇದನ್ನು ಖಂಡಿಸಿದ್ದಾರೆ.

ಇದನ್ನೂ ಓದಿ: Narendra Modi: ಮೋದಿ ಎಚ್ಚರಿಕೆಗೆ ಪಾಕಿಸ್ತಾನ ಥಂಡಾ; ಗಡಿಯಲ್ಲಿ ಹೆಚ್ಚುವರಿ ಸೈನಿಕರ ನಿಯೋಜನೆ!

Exit mobile version