ನವದೆಹಲಿ: ರಸ್ ಮಲಾಯಿ (Ras malai) ಯಾರಿಗೆ ಇಷ್ಟ ಇಲ್ಲ ಹೇಳಿ? ಇದರ ಹೆಸರು ಕೇಳುತ್ತಿದ್ದಂತೆ ಬಾಯಲ್ಲಿ ನೀರೂರುತ್ತದೆ. ಪಶ್ಚಿಮ ಬಂಗಾಳ ಪರಿಚಯಿಸಿದ ಈ ಸಿಹಿ ತಿಂಡಿ ಬಹುತೇಕ ಎಲ್ಲ ಭಾರತೀಯರಿಗೆ ಅಚ್ಚುಮೆಚ್ಚು. ಇದೀಗ ರಸ್ ಮಲಾಯಿ ಸ್ವಾದ ಇಡೀ ಪ್ರಪಂಚಕ್ಕೇ ಗೊತ್ತಾಗಿದೆ. ವಿಶ್ವದ ಬೆಸ್ಟ್ ಚೀಸ್ ಡೆಸರ್ಟ್ (Best cheese desserts in the world)ಗಳ ಪಟ್ಟಿಯಲ್ಲಿ ರಸ್ ಮಲಾಯಿ ಎರಡನೇ ಸ್ಥಾನ ಪಡೆದುಕೊಂಡಿದೆ. ಆ ಮೂಲಕ ಭಾರತದ ಸಿಹಿ ತಿಂಡಿಗೆ ಜಾಗತಿಕ ಮನ್ನಣೆ ಲಭಿಸಿದೆ. ಅನುಭವಿ ಟ್ರಾವೆಲ್ ಆನ್‌ಲೈನ್ ಮಾರ್ಗದರ್ಶಿ ಟೇಸ್ಟ್‌ಅಟ್ಲಾಸ್ (TasteAtlas) ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಪೋಲೆಂಡ್‌ನ ಸೆರ್ನಿಕ್ (Sernik) ಮೊದಲ ಸ್ಥಾನದಲ್ಲಿದೆ. ರಸ್ ಮಲಾಯಿ ಎರಡನೇ ರ‍್ಯಾಂಕ್ ಪಡೆದಿದೆ.
ಟಾಪ್ 10 ಪಟ್ಟಿ
- ಸೆರ್ನಿಕ್ (Sernik)-ಪೋಲೆಂಡ್
- ರಸ್ ಮಲಾಯಿ (Ras malai)-ಭಾರತ
- ಸ್ಫಕಿಯನೋಪಿತ (Sfakianopita)-ಗ್ರೀಸ್
- ನ್ಯೂಯಾರ್ಕ್ ಶೈಲಿಯ ಚೀಸ್‌ಕೇಕ್ (New York-style cheesecake)-ಅಮೆರಿಕ
- ಜಪಾನೀಸ್ ಚೀಸ್‌ಕೇಕ್ (Japanese cheesecake)-ಜಪಾನ್
- ಬಾಸ್ಕ್ಯೂ ಚೀಸ್‌ಕೇಕ್ (Basque Cheesecake)-ಸ್ಪೈನ್
- ರಾಕೊಝಿ ಟ್ಯುರೋಸ್ (Rákóczi túrós)-ಹಂಗೇರಿ
- ಮೆಲೋಪಿತ (Melopita)-ಗ್ರೀಸ್
- ಕಾಸೆಕುಚೇನ್ (Käsekuchen)-ಜರ್ಮನಿ
- ಮೀಸ್ಸ ರೇಝಿ (Míša řezy)-ಚೆಕ್ ಗಣರಾಜ್ಯ
ಏನಿದು ರಸ ಮಲಾಯಿ?
ಜನಪ್ರಿಯ ಡೆಸರ್ಟ್ ಆಗಿರುವ ರಸ್ ಮಲಾಯಿಯನ್ನು ವೈಟ್ ಕ್ರೀಮ್, ಸಕ್ಕರೆ, ಹಾಲು ಮತ್ತು ಫ್ಲೇವರ್ ಹೊಂದಿದ ಪನೀರ್ ಚೀಸ್‌ನಿಂದ ತಯಾರಿಸಲಾಗುತ್ತದೆ. ಜತೆಗೆ ಬಾದಾಮಿ, ಗೋಡಂಬಿ, ಏಲಕ್ಕಿ ಮತ್ತು ಕೇಸರಿಯನ್ನು ಸೇರಿಸಲಾಗುತ್ತದೆ. ಇದರ ಉಗಮ ಪಶ್ಚಿಮ ಬಂಗಾಳ.
ರಸ್ ಮಲಾಯಿ ಎರಡು ಹಿಂದಿ ಪದಗಳಿಂದ ಉಂಟಾದ ಹೆಸರು. ರಸ್ ಎಂದರೆ ಜ್ಯೂಸ್ ಮತ್ತು ಮಲಾಯಿ ಎಂದರೆ ಕ್ರೀಮ್. ಫ್ರಿಡ್ಜ್‌ನಲ್ಲಿಟ್ಟು, ತಂಪಾಗಿರುವಾಗಲೇ ಇದನ್ನು ಸೇವಿಸಲಾಗುತ್ತದೆ. ಹೋಳಿ ಮತ್ತು ದೀಪಾವಳಿ ಸಂದರ್ಭದಲ್ಲಿ ಈ ಸಿಹಿ ತಿಂಡಿಯ ಬಳಕೆ ಅಧಿಕ.
ದಕ್ಷಿಣ ಭಾರತದ ಫಿಲ್ಟರ್ ಕಾಫಿ ವಿಶ್ವದಲ್ಲೇ ಟಾಪ್ 2
ಕೆಲವು ದಿನಗಳ ಹಿಂದೆ ಜಗತ್ತಿನ ಅಗ್ರ 28 ಕಾಫಿಗಳ ಪೈಕಿ ದಕ್ಷಿಣ ಭಾರತದ ಫಿಲ್ಟರ್ ಕಾಫಿ ದ್ವಿತೀಯ ಸ್ಥಾನ ಪಡೆದಿತ್ತು. ಟೇಸ್ಟ್‌ಅಟ್ಲಾಸ್ ಬಿಡುಗಡೆ ಮಾಡಿದ್ದ ಈ ಪಟ್ಟಿಯಲ್ಲಿ ಕ್ಯೂಬಾದ ಕೆಫೆ ಕ್ಯೂಬಾನೋ ಕಾಫಿಯು ಅಗ್ರಸ್ಥಾನ ಪಡೆದಿದೆ. ಡಾರ್ಕ್ ರೋಸ್ಟ್ ಕಾಫಿ ಹಾಗೂ ಸಕ್ಕರೆ ಬಳಸಿ ಕ್ಯೂಬಾದ ಕ್ಯೂಬಾನೋ ಕಾಫಿಯನ್ನು ತಯಾರಿಸಲಾಗುತ್ತದೆ. ಇದು ಕ್ಯೂಬಾ ಸೇರಿ ಜಗತ್ತಿನಾದ್ಯಂತ ಖ್ಯಾತಿ ಗಳಿಸಿದೆ.
ಇದನ್ನೂ ಓದಿ: ಪ್ರಪಂಚದ ಎಲ್ಲ ಕಾಫಿಗಳ ಪೈಕಿ ನಮ್ಮ ಫಿಲ್ಟರ್ ಕಾಫಿಗೆ ಎರಡನೇ ಸ್ಥಾನ!
ರೇಟಿಂಗ್ ಆಧಾರದ ಮೇಲೆ ಕಾಫಿಗೆ ರ‍್ಯಾಂಕ್ ನೀಡಲಾಗಿದೆ. ಕ್ಯೂಬಾದ ಕೆಫೆ ಕ್ಯೂಬಾನೊ, ಭಾರತದ ಫಿಲ್ಟರ್ ಕಾಫಿ, ಗ್ರೀಸ್‌ನ ಎಕ್ಸ್‌ಪ್ರೆಸ್ಸೋ ಫೆಡ್ಡೋಗೆ 4.5 ರೇಟಿಂಗ್ ಸಿಕ್ಕಿದ್ದು, ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿವೆ. ಗ್ರೀಸ್‌ನ ಫ್ರೆಡ್ಡೋ ಕ್ಯಾಪಚಿನೋ 4.4, ಸ್ಪೇನ್‌ನ ಕೆಫೆ ಬೊಂಬೊನ್ 4.4, ಇಟಲಿಯ ಕ್ಯಾಪಚಿನೋ 4.3, ಟರ್ಕಿಯ ಟರ್ಕಿಶ್ ಕಾಫಿ 4.3, ಇಟಲಿಯ ರೆಸ್ಟ್ರಿಟ್ಟೋ 4.3, ಗ್ರೀಸ್‌ನ ಫ್ರೇಪ್ ಕಾಫಿ 4.3 ಹಾಗೂ ವಿಯೇಟ್ನಾಂನ ವಿಯೇಟ್ಮಾಮೀಸ್ ಐಸ್ಡ್ ಕಾಫಿಯು 4.3 ರೇಟಿಂಗ್ ಪಡೆದು ಟಾಪ್ 10 ಕಾಫಿಗಳ ಪಟ್ಟಿ ಸೇರಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ