ನವದೆಹಲಿ: ಪ್ರತಿಷ್ಠಿತ ಟೈಮ್ ಮ್ಯಾಗ್‌ಜಿನ್ (TIME Magazine) 2023ರ ಸಾಲಿನ ಜಗತ್ತಿನ ಅತ್ಯುತ್ತಮ 100 ಕಂಪನಿಗಳ ಪಟ್ಟಿಯನ್ನು (World’s Best 100 Companies List) ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಇನ್ಫೋಸಿಸ್ ಮಾತ್ರ ಸ್ಥಾನ ಪಡೆದ ಭಾರತದ ಏಕೈಕ ಕಂಪನಿಯಾಗಿದೆ(Infosys – Only Indian Company). ಕನ್ನಡಿಗರಾದ ಎನ್ ಆರ್ ನಾರಾಯಣಮೂರ್ತಿ ಅವರ ಈ ಕಂಪನಿಯ ಸಹ ಸಂಸ್ಥಾಪಕರು. ಮೈಕ್ರೋಸಾಫ್ಟ್(Microsoft), ಆ್ಯಪಲ್ (Apple) ಮತ್ತು ಅಲ್ಪಾಬೆಟ್ (Alphabet) ಈ ಪಟ್ಟಿಯ ಅಗ್ರ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ(Best Company of 2023).
ಟೈಮ್ ಮ್ಯಾಗಜಿನ್ ಪ್ರಕಾರ ಸುಸ್ಥಿರತೆಯ ಪ್ರಕಾರ ಇನ್ಫೋಸಿಸ್ 135 ಹಾಗೂ ಉದ್ಯೋಗಿಗಳ ತೃಪ್ತಿಯ ವಿಷಯದಲ್ಲಿ ಕಂಪನಿಯು 103 ನೇ ಸ್ಥಾನದಲ್ಲಿದೆ. ಹಾಗೆಯೇ, ಕಂಪನಿಯ ಬೆಳವಣಿಗೆಯ ದರವು ಹೆಚ್ಚಾಗಿದೆ. ಇನ್ಫೋಸಿಸ್ ವಿಶ್ವದ ಅಗ್ರ 3 ವೃತ್ತಿಪರ ಸೇವಾ ಕಂಪನಿಗಳಲ್ಲಿ ಒಂದಾಗಿದೆ ಎಂದು ತಿಳಿಸಲಾಗಿದೆ.
ಆದಾಯದ ಸೂತ್ರವನ್ನು ಆಧರಿಸಿದ ಸ್ಟ್ಯಾಟಿಸ್ಟಾ ಮತ್ತು ಟೈಮ್‌ನಿಂದ ವಿಶ್ವದ ಅತ್ಯುತ್ತಮ ಕಂಪನಿಗಳ 750ರ ಹೊಸ ಅಂಕಿಅಂಶಗಳ ಶ್ರೇಯಾಂಕದಲ್ಲಿ ಮೈಕ್ರೋಸಾಫ್ಟ್, ಆ್ಯಪಲ್, ಆಲ್ಫಾಬೆಟ್ (ಗೂಗಲ್ ಮಾಲೀಕತ್ವದ ಕಂಪನಿ) ಮತ್ತು ಮೆಟಾ ಪ್ಲಾಟ್‌ಫಾರ್ಮ್‌ಗಳು (ಫೇಸ್‌ಬುಕ್) ಅಗ್ರ ನಾಲ್ಕು ಕಂಪನಿಗಳಾಗಿವೆ. ಬೆಳವಣಿಗೆ, ಉದ್ಯೋಗಿ ತೃಪ್ತಿ ಸಮೀಕ್ಷೆಗಳು ಮತ್ತು ಕಠಿಣ ಪರಿಸರ, ಸಾಮಾಜಿಕ ಮತ್ತು ಕಾರ್ಪೊರೇಟ್ ಆಡಳಿತ ಮುಂತಾದ ಸಂಗತಿಗಳನ್ನು ಆಧರಿಸಿ ಈ ಪಟ್ಟಿಯನ್ನು ಸಿದ್ದಪಡಿಸಲಾಗಿದೆ ಎಂದು ಟೈಮ್ ಮ್ಯಾಗಜಿನ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Rafael Nadal: ಇನ್ಫೋಸಿಸ್ಗೆ ಟೆನಿಸ್ ದಿಗ್ಗಜ ರಫೆಲ್ ನಡಾಲ್ ರಾಯಭಾರಿ
750 ಕಂಪನಿಗಳ ಪಟ್ಟಿಯಲ್ಲಿ ಇನ್ಫೋಸಿಸ್ ಹೊರತಾಗಿ ಭಾರತದ 7 ಕಂಪನಿಗಳಿವೆ. ದೈತ್ಯ ಟೆಕ್ ಕಂಪನಿ ವಿಪ್ರೋ ಪಟ್ಟಿಯಲ್ಲಿ 174ನೇ ಸ್ಥಾನದಲ್ಲಿದ್ದರೆ, ಆನಂದ್ ಮಹೀಂದ್ರಾ ನೇತೃತ್ವದ ಮಹೀಂದ್ರಾ ಗ್ರೂಪ್ 210ನೇ ಸ್ಥಾನದಲ್ಲಿದೆ. ರಿಲಯನ್ಸ್ ಇಂಡಸ್ಟ್ರೀಸ್ 248 ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ 262ನೇ ಸ್ಥಾನದಲ್ಲಿವೆ. ಎಚ್‌ಡಿಎಫ್‌ಸಿ ಬ್ಯಾಂಕ್ 418ನೇ ಶ್ರೇಯಾಂಕದಲ್ಲಿ, ಡಬ್ಲ್ಯುಎನ್‌ಎಸ್ ಗ್ಲೋಬಲ್ ಸರ್ವಿಸಸ್ 596, ಐಟಿಸಿ 672ನೇ ಸ್ಥಾನದಲ್ಲಿವೆ ಎಂದು ಟೈಮ್ ಮ್ಯಾಗಜಿನ್ ತಿಳಿಸಿದೆ.