ನವದೆಹಲಿ: ಜಿ20 ಶೃಂಗ ಸಭೆ (G20 Summit 2023) ಆರಂಭಕ್ಕಿಂತ ಮುಂಚೆ ಶುರುವಾದ ಇಂಡಿಯಾ ವರ್ಸಸ್ ಭಾರತ್ (India vs Bharat) ವಿವಾದವೂ ಈವರೆಗೂ ಮುಂದುವರಿದಿದೆ. ಈ ಮಧ್ಯೆ, ಜಿ20 ಗೆಸ್ಟ್ ಮ್ಯಾಗ್‌ಜಿನ್‌ನಲ್ಲಿ (G20 Guest Magazine) ನಮ್ಮ ದೇಶದ ಅಧಿಕೃತ ಹೆಸರು ಭಾರತ (Bharat Official Name) ಎಂದು ನರೇಂದ್ರ ಮೋದಿ ಸರ್ಕಾರ ಘೋಷಿಸಿದೆ. ಭಾರತ ಎಂಬುದು ದೇಶದ ಅಧಿಕೃತ ಹೆಸರು. ಸಂವಿಧಾನದಲ್ಲಿ ಹಾಗೂ 1946-48ರ ಸಂವಿಧಾನ ರಚನಾ ಚರ್ಚೆಗಳಲ್ಲಿ ಇದನ್ನು ಉಲ್ಲೇಖಿಸಲಾಗಿದೆ ಎಂದು ಜಿ20 ಗೆಸ್ಟ್ ಮ್ಯಾಗ್‌ಜಿನ್‌ನ 2ನೇ ಪುಟದಲ್ಲಿ ಉಲ್ಲೇಖಿಸಲಾಗಿದೆ. ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರ ನಾಮಫಲಕದಲ್ಲಿ ‘ಇಂಡಿಯಾ’ ಬದಲಿಗೆ ‘ಭಾರತ’ ಎಂದೇ ಬರೆಯಲಾಗಿತ್ತು.
ಭಾರತ ಮಂಟಪದಲ್ಲಿ ಜಿ 20 ಶೃಂಗಸಭೆಗೆ (G20 Summit 2023) ಶನಿವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅದ್ಧೂರಿಯಾಗಿ ಚಾಲನೆ ನೀಡಿದ್ದರು. ಈ ವೇಳೆ, ಸಭೆಗೆ ಜಾಗತಿಕ ನಾಯಕರನ್ನು ಸ್ವಾಗತಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಭೆಯನ್ನುದ್ದೇಶಿಸಿ ಮಾತನಾಡಿದರು. ಇದೇ ವೇಳೆ ಅವರ ಮುಂದಿನ ನೇಮ್‌ಪ್ಲೇಟ್‌ನಲ್ಲಿ ಇಂಡಿಯಾ ಬದಲು “ಭಾರತ” ಎಂಬುದಾಗಿಯೇ ಇದ್ದಿದ್ದು ಗಮನ ಸೆಳೆದಿತ್ತು.
ಈ ಸುದ್ದಿಯನ್ನೂ ಓದಿ: G20 Summit 2023: ಶೃಂಗಸಭೆಯಲ್ಲಿ ಭಾರತದ ಶ್ರೀಮಂತ ವಾಸ್ತುಶಿಲ್ಪ ಪರಂಪರೆ ಅನಾವರಣ!
‘ಇಂಡಿಯಾಟ ಎಂಬ ಹೆಸರನ್ನು ‘ಭಾರತ’ ಎಂಬುದಾಗಿ ಬದಲಿಸುವ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿರುವ ಮಧ್ಯೆಯೇ ನೇಮ್‌ಪ್ಲೇಟ್‌ನಲ್ಲಿ ಇಂಡಿಯಾ ಬದಲು ಭಾರತ ಎಂಬುದಾಗಿಯೇ ಬರೆಸಿರುವುದು ಅಚ್ಚರಿ ಮೂಡಿಸಿತ್ತು. ನರೇಂದ್ರ ಮೋದಿ ಅವರು ಇತ್ತೀಚೆಗೆ ಇಂಡೋನೇಷ್ಯಾಗೆ ತೆರಳುವ ಮೊದಲು ಹೊರಡಿಸಿದ ಅಧಿಸೂಚನೆಯಲ್ಲೂ ಪ್ರೈಮ್ ಮಿನಿಸ್ಟರ್ ಆಫ್ ಭಾರತ್ ಎಂದೇ ಮುದ್ರಿಸಲಾಗಿತ್ತು. ಈಗ ಜಿ 20 ಶೃಂಗಸಭೆಯಲ್ಲೂ ಭಾರತ ಎಂಬ ನೇಮ್‌ಪ್ಲೇಟ್ ಇಡುವ ಮೂಲಕ ಹೆಸರು ಬದಲಾವಣೆ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದ್ದರು. ಇದೀಗ ಜಿ20 ಗೆಸ್ಟ್ ಮ್ಯಾಗಜಿನ್‌ನಲ್ಲಿ ಭಾರತ ಅಧಿಕೃತ ಹೆಸರು ಎಂದು ಹೇಳುವ ಮೂಲಕ ತನ್ನ ಇರಾದೆಯನ್ನು ಸ್ಪಷ್ಟಪಡಿಸಿದೆ.