Site icon Vistara News

Bharat Ratna: ದೇಶದ ಹಸಿವು ನೀಗಿಸಿದ `ಹಸಿರು ಕ್ರಾಂತಿ’ಯ ಪಿತಾಮಹನಿಗೆ ಭಾರತ ರತ್ನ ಗೌರವ

swaminathan

swaminathan

ನವದೆಹಲಿ: ಭಾರತದ ಹಸಿರು ಕ್ರಾಂತಿಯ (Green revolution) ಪಿತಾಮಹ ಎಂದೇ ಗುರುತಿಸಿಕೊಂಡಿದ್ದ ಖ್ಯಾತ ವಿಜ್ಞಾನಿ ಡಾ.ಎಂ.ಎಸ್‌.ಸ್ವಾಮಿನಾಥನ್‌ (M.S.Swaminathan) ಅವರಿಗೆ ಕೇಂದ್ರ ಸರ್ಕಾರ ಇಂದು ಭಾರತ ರತ್ನ (Bharat Ratna)ಪ್ರಶಸ್ತಿಯನ್ನು ಘೋಷಿಸಿದೆ. ಆಗಸ್ಟ್ 7, 1925ರಂದು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಜನಿಸಿದ್ದ ಅವರ ಪೂರ್ತಿ ಹೆಸರು ಮನ್ಕೊಂ‌ಬು ಸಾಂಬಶಿವನ್‌ ಸ್ವಾಮಿನಾಥನ್‌. ಕಳೆದ ವರ್ಷ ಸೆಪ್ಟೆಂಬರ್‌ 28ರಂದು ತಮ್ಮ 98ನೇ ವಯಸ್ಸಿನಲ್ಲಿ ನಿಧನ ಹೊಂದಿದ ಅವರಿಗೆ ಮರಣೋತ್ತರವಾಗಿ ಭಾರತ ಈ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಎಂ.ಎಸ್.ಸ್ವಾಮಿನಾಥನ್ ಅವರು ಹೆಚ್ಚು ಇಳುವರಿ ನೀಡುವ ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ಭಾರತದ ಕಡಿಮೆ ಆದಾಯದ ರೈತರು ಹೆಚ್ಚಿನ ಇಳುವರಿಯನ್ನು ಉತ್ಪಾದಿಸಲು ಸಹಾಯ ಮಾಡಿದ್ದಲ್ಲದೆ, ಆ ದಿನಗಳ ಭಾರತದ ಜನಸಂಖ್ಯೆಯ ಬೆಳವಣಿಗೆಗೆ ತಕ್ಕಂತೆ ಸಾಕಷ್ಟು ಆಹಾರ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಸ್ವಾಮಿನಾಥನ್ ಅವರು ವಿವಿಧ ಇಲಾಖೆಗಳಲ್ಲಿ ಹಲವು ಕಾಲ ಸೇವೆ ಸಲ್ಲಿಸಿದ್ದಾರೆ. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕ (1961-72), ICARನ ಡೈರೆಕ್ಟರ್ ಜನರಲ್, ಭಾರತ ಸರ್ಕಾರದ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ ಕಾರ್ಯದರ್ಶಿ (1972-79), ವಿಜ್ಞಾನ ಮತ್ತು ಕೃಷಿ ಇಲಾಖೆ ಆಕ್ಟಿಂಗ್ ಡೆಪ್ಯುಟಿ ಚೇರ್ಮನ್ ಮತ್ತು ನಂತರ ಸದಸ್ಯ, ಯೋಜನಾ ಆಯೋಗ (1980-82), ಫಿಲಿಪೈನ್ಸ್‌ನ ಇಂಟರ್‌ನ್ಯಾಷನಲ್‌ ರೈಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಡೈರೆಕ್ಟರ್ ಜನರಲ್ (1982-88) ಆಗಿ ಸೇವೆ ಸಲ್ಲಿಸಿದ್ದರು.

2004ರಲ್ಲಿ, ಸ್ವಾಮಿನಾಥನ್ ಅವರನ್ನು ರೈತರ ಕುರಿತ ರಾಷ್ಟ್ರೀಯ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ರೈತರ ಆತ್ಮಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ ಅವರ ಸಂಕಷ್ಟಗಳನ್ನು ಪರಿಶೀಲಿಸಲು ಆಯೋಗವನ್ನು ಸ್ಥಾಪಿಸಲಾಗಿತ್ತು. ಆಯೋಗವು 2006ರಲ್ಲಿ ವರದಿಯನ್ನು ಸಲ್ಲಿಸಿತು. ಕನಿಷ್ಠ ಬೆಂಬಲ ಬೆಲೆ (MSP) ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 50 ಪ್ರತಿಶತದಷ್ಟು ಹೆಚ್ಚಿರಬೇಕು ಎಂದು ವರದಿ ಸೂಚಿಸಿತ್ತು.

ಕೃಷಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿ

ಸ್ವಾಮಿನಾಥನ್ ಅವರು 1979 ಮತ್ತು 1980ರಲ್ಲಿ ಕೃಷಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 1980ರಿಂದ 1982ರವರೆಗೆ ಭಾರತದ ಯೋಜನಾ ಆಯೋಗದಲ್ಲಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಯ ಉಸ್ತುವಾರಿ ವಹಿಸಿದ್ದರು.

ಗೋಧಿ ತಳಿಯ ಬಗ್ಗೆ ಸಂಶೋಧನೆ

1950ರ ದಶಕದಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಯುವ ವಿಜ್ಞಾನಿಯಾಗಿದ್ದ ಸ್ವಾಮಿನಾಥನ್ ಅವರು ಡಾ. ನಾರ್ಮನ್ ಬೋರ್ಲಾಗ್ ಅವರ ಹೊಸದಾಗಿ ಅಭಿವೃದ್ಧಿಪಡಿಸಿದ ಮೆಕ್ಸಿಕನ್ ಕುಬ್ಜ ಗೋಧಿ ತಳಿಯ ಬಗ್ಗೆ ತಿಳಿದುಕೊಂಡಿದ್ದರು. ಈ ಬಗ್ಗೆ ಆಸಕ್ತರಾದ ಅವರು ಹೆಚ್ಚಿನ ಸಂಶೋಧನೆಗಾಗಿ ಡಾ. ನಾರ್ಮನ್ ಬೋರ್ಲಾಗ್ ಅವರನ್ನು ಭಾರತಕ್ಕೆ ಆಹ್ವಾನಿಸಿದ್ದರು. ಬಳಿಕ ಇಬ್ಬರು ವಿಜ್ಞಾನಿಗಳು ಗೋಧಿ ಪ್ರಭೇದಗಳನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡಿದ್ದರು. ಈ ತಳಿ ಹೆಚ್ಚಿನ ಇಳುವರಿ ನೀಡುತ್ತದೆ ಮತ್ತು ಸಾಕಷ್ಟು ಬಲವಾದ ಕಾಂಡದ ರಚನೆಗಳನ್ನು ಹೊಂದಿದೆ. ಇದು ಭಾರತದ ಕೃಷಿ ಲೋಕದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿತು. ನಾಲ್ಕು ಋತುಗಳಲ್ಲಿ ಗೋಧಿಯ ಒಟ್ಟು ಬೆಳೆ ಇಳುವರಿಯನ್ನು 12 ಮಿಲಿಯನ್ ಟನ್‌ಗಳಿಂದ 23 ಮಿಲಿಯನ್ ಟನ್‌ಗಳಿಗೆ ಹೆಚ್ಚಿಸುವ ಮೂಲಕ ಧಾನ್ಯ ಆಮದಿನ ಮೇಲಿನ ಭಾರತದ ಅವಲಂಬನೆಯನ್ನು ಕೊನೆಗೊಳಿಸಿತು.

ವಿವಿಧ ಪ್ರಶಸ್ತಿ

ಸ್ವಾಮಿನಾಥನ್ ಅವರ ಕೊಡುಗೆಯನ್ನು ಪರಿಗಣಿಸಿ ಹಲವು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ. ಭಾರತದಲ್ಲಿ ಹೆಚ್ಚು ಇಳುವರಿ ನೀಡುವ ಗೋಧಿ ಮತ್ತು ಅಕ್ಕಿ ತಳಿಗಳ ಪರಿಚಯವನ್ನು ಅಭಿವೃದ್ಧಿಪಡಿಸಲು ಮತ್ತು ಮುನ್ನಡೆಸಿದ್ದಕ್ಕಾಗಿ ಅವರು 1987ರಲ್ಲಿ ಮೊದಲ ವಿಶ್ವ ಆಹಾರ ಪ್ರಶಸ್ತಿಯನ್ನು ಪಡೆದರು. 1971ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು 1986ರಲ್ಲಿ ಆಲ್ಬರ್ಟ್ ಐನ್‌ಸ್ಟೈನ್ ವರ್ಲ್ಡ್ ಸೈನ್ಸ್ ಪ್ರಶಸ್ತಿಯನ್ನು ಸ್ವಾಮಿನಾಥನ್‌ ಅವರಿಗೆ ನೀಡಲಾಗಿತ್ತು. 1967ರಲ್ಲಿ ಪದ್ಮಶ್ರೀ, 1972ರಲ್ಲಿ ಪದ್ಮಭೂಷಣ ಮತ್ತು 1989ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿತ್ತು. ಇದೀಗ ಭಾರತ ರತ್ನ ಪ್ರಶಸ್ತಿ ಅವರಿಗೆ ಸಂದಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಲೇಖನ: ಭಾರತದ ಆಧುನಿಕ, ಪ್ರಗತಿಪರ ಕೃಷಿಗೆ ಎಂ ಎಸ್ ಸ್ವಾಮಿನಾಥನ್ ಅಡಿಪಾಯ

Exit mobile version