ಹೊಸದಿಲ್ಲಿ: ಮಧ್ಯಪ್ರದೇಶದ ಧಾರ್‌ನ ಭೋಜಶಾಲಾ ಮತ್ತು ಕಮಲ್ ಮೌಲಾ ಮಸೀದಿಯ ವಿವಾದಿತ (Bhojshala-Kamal Maula Mosque Complex) ಜಾಗದಲ್ಲಿ ಪುರಾತತ್ವ ಇಲಾಖೆಯ (ಎಎಸ್‌ಐ) ಸಮೀಕ್ಷೆಗೆ (ASI Survey) ತಡೆ ನೀಡಲು ಸುಪ್ರೀಂ ಕೋರ್ಟ್ (Supreme Court) ಸೋಮವಾರ ನಿರಾಕರಿಸಿದೆ.
ವಿವಾದಿತ ಭೋಜಶಾಲಾ ಮತ್ತು ಕಮಲ್ ಮೌಲಾ ಮಸೀದಿಯಲ್ಲಿ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಮಧ್ಯಪ್ರದೇಶ ಹೈಕೋರ್ಟ್ ಈ ಮೊದಲು ಸೂಚಿಸಿತ್ತು. ಈ ಆದೇಶದ ವಿರುದ್ಧದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಸಮೀಕ್ಷೆಯ ಫಲಿತಾಂಶದ ಆಧಾರದ ಮೇಲೆ ತನ್ನ ಅನುಮತಿಯ ಅಗತ್ಯವಿಲ್ಲದೆ ಕ್ರಮ ಕೈಗೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಮಧ್ಯಂತರ ನಿರ್ದೇಶನದಲ್ಲಿ ಹೇಳಿದೆ.
ವಿವಾದಿತ ಸ್ಥಳಗಳಲ್ಲಿ ಸಂಕೀರ್ಣದ ಸ್ವರೂಪವನ್ನು ಬದಲಾಯಿಸುವ ಯಾವುದೇ ಭೌತಿಕ ಉತ್ಖನನವನ್ನು ತೆಗೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಅಗೆಯುವ ಪ್ರಕ್ರಿಯೆಯಲ್ಲಿ ಸಂಗ್ರಹಿಸಿದ ಮಣ್ಣು ಮತ್ತು ಕಲ್ಲುಗಳನ್ನು ಎಎಸ್‌ಐ ಸಂರಕ್ಷಿಸುತ್ತಿದೆ ಎಂದು ಸಮೀಕ್ಷೆಗೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಕಳೆದ ವಾರ ಹೇಳಿದ್ದರು.
ಈ ಪ್ರಕ್ರಿಯೆಯಲ್ಲಿ ಹಿಂದೂಗಳನ್ನು ಪ್ರತಿನಿಧಿಸುವ ಮತ್ತು ಎಎಸ್‌ಐ ತಂಡದ ಜೊತೆಗಿರುವ ಆಶಿಶ್ ಗೋಯಲ್, ಹೊಸ ವೈಜ್ಞಾನಿಕ ವಿಧಾನಗಳಾದ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್), ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್) ಬಳಸಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಉತ್ಖನನದ ಜೊತೆಗೆ ಕಾರ್ಬನ್ ಡೇಟಿಂಗ್ ಕೂಡ ಬಳಸಲಾಗುತ್ತಿದೆ.
ಏನಿದು ವಿವಾದ?
ಈ ಸ್ಥಳವು ಹಿಂದೆ ವಾಗ್ದೇವಿ (ಸರಸ್ವತಿ) ದೇವಿಗೆ ಸಮರ್ಪಿತವಾದ ದೇವಾಲಯವಾಗಿತ್ತು ಎಂದು ಹಿಂದೂಗಳು ಪ್ರತಿಪಾದಿಸುತ್ತಾರೆ. ಆದರೆ ಸದ್ಯ ಇದು ಮುಸ್ಲಿಮರ ಹಿಡಿತದಲ್ಲಿದ್ದು, ಇದನ್ನು ಕಮಲ್ ಮೌಲಾ ಮಸೀದಿ ಎಂದು ಕರೆಯಲಾಗುತ್ತದೆ. ಏಪ್ರಿಲ್ 7, 2003ರ ASI ಆದೇಶದ ಪ್ರಕಾರ, ಹಿಂದೂಗಳಿಗೆ ಪ್ರತಿ ಮಂಗಳವಾರ ಭೋಜಶಾಲಾ ಸಂಕೀರ್ಣದೊಳಗೆ ಪೂಜೆ ಮಾಡಲು ಅನುಮತಿಸಲಾಗಿದೆ. ಮುಸ್ಲಿಮರು ಶುಕ್ರವಾರದಂದು ಸ್ಥಳದಲ್ಲಿ ನಮಾಜ್ ಮಾಡಲು ಅನುಮತಿಸಲಾಗಿದೆ.
ತಜ್ಞರು ಏನೆನ್ನುತ್ತಾರೆ?
ಖ್ಯಾತ ಪುರಾತತ್ವಶಾಸ್ತ್ರಜ್ಞ ಕೆ.ಕೆ ಮುಹಮ್ಮದ್ ಅವರು (ಇವರು ಅಯೋಧ್ಯೆಯ ರಾಮ ಜನ್ಮಭೂಮಿ ತಾಣವನ್ನು ಸಮೀಕ್ಷೆಗೆ ಒಳಪಡಿಸಿದ ತಂಡದಲ್ಲಿದ್ದವರು) ಭೋಜಶಾಲಾ- ಕಮಲ್ ಮೌಲಾ ಮಸೀದಿಯ ವಿವಾದದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. “ಈ ಸ್ಥಳವು ಹಿಂದೆ ಸರಸ್ವತಿ ದೇವಾಲಯವಾಗಿತ್ತು ಮತ್ತು ನಂತರ ಅದನ್ನು ಇಸ್ಲಾಮಿಕ್ ಮಸೀದಿಯಾಗಿ ಪರಿವರ್ತಿಸಲಾಯಿತು” ಎಂದು ಪ್ರತಿಪಾದಿಸಿದ್ದಾರೆ.
“ಭೋಜಶಾಲಾ ಕುರಿತ ಐತಿಹಾಸಿಕ ಸತ್ಯವೆಂದರೆ ಅದು ಸರಸ್ವತಿ ದೇವಸ್ಥಾನವಾಗಿತ್ತು. ಇದನ್ನು ಇಸ್ಲಾಮಿಕ್ ಮಸೀದಿಯಾಗಿ ಪರಿವರ್ತಿಸಲಾಯಿತು. ಆದರೆ ಪ್ರಾರ್ಥನಾ ಸ್ಥಳಗಳ ಕಾಯಿದೆ 1991ರ ಪ್ರಕಾರ, ಕಟ್-ಆಫ್ ವರ್ಷ 1947. ಇದು 1947ರಲ್ಲಿ ದೇವಾಲಯವಾಗಿದ್ದರೆ ದೇವಾಲಯವಾಗಿಯೇ ಇರಲಿ; ಆಗ ಅದು ಮಸೀದಿಯಾಗಿದ್ದರೆ ಮಸೀದಿಯಾಗಿಯೇ ಇರಲಿ” ಎಂದು ಮುಹಮ್ಮದ್ ಹೇಳಿದ್ದಾರೆ.
“ಇದು ಸರಸ್ವತಿ ದೇವಸ್ಥಾನವಾಗಿತ್ತು ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಎರಡೂ ಕಡೆಯವರು ಈ ವಿಷಯದಲ್ಲಿ ನ್ಯಾಯಾಲಯದ ತೀರ್ಪನ್ನು ಪಾಲಿಸಬೇಕು ಮತ್ತು ಪೂಜಾ ಸ್ಥಳಗಳ ಕಾಯಿದೆ 1991 ಅನ್ನು ಗೌರವಿಸಬೇಕು. ಎಲ್ಲಾ ಅಂಶಗಳನ್ನು ಪರಿಗಣಿಸಿ ಹೈಕೋರ್ಟ್ ತೀರ್ಮಾನ ಕೈಗೊಳ್ಳಲಿದೆ. ಎಲ್ಲರೂ ಅದನ್ನು ಅನುಸರಿಸಬೇಕು. ಏಕೆಂದರೆ ಅದೊಂದೇ ಪರಿಹಾರವಾಗಿದೆ” ಎಂದು ಪ್ರಖ್ಯಾತ ಪುರಾತತ್ವಶಾಸ್ತ್ರಜ್ಞ ಹೇಳಿದ್ದಾರೆ.