ದೋಹಾ: ಕತಾರ್‌ನಲ್ಲಿ ಬೇಹುಗಾರಿಕೆ ಆರೋಪದಲ್ಲಿ ಬಂಧನಕ್ಕೀಡಾಗಿ, ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ 8 ಮಾಜಿ ಅಧಿಕಾರಿಗಳು ಈಗ ಗಲ್ಲು ಶಿಕ್ಷೆಯಿಂದ ಪಾರಾಗಿದ್ದಾರೆ. ಇಸ್ರೇಲ್ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಕತಾರ್ ನ್ಯಾಯಾಲಯವೀಗ (Qatar Court) ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಿದೆ. ಇದರಿಂದಾಗಿ ಎಂಟು ಅಧಿಕಾರಿಗಳು ಗಲ್ಲು ಶಿಕ್ಷೆಯಿಂದ ಪಾರಾದಂತಾಗುವ ಜತೆಗೆ ಭಾರತವು ರಾಜತಾಂತ್ರಿಕ ಮುನ್ನಡೆ ಸಾಧಿಸಿದಂತಾಗಿದೆ.
“ನೌಕಾಪಡೆ ಮಾಜಿ ಅಧಿಕಾರಿಗಳಿಗೆ ವಿಧಿಸಿದ್ದ ಶಿಕ್ಷೆಯ ಪ್ರಮಾಣವನ್ನು ಕತಾರ್‌ನ ಕೋರ್ಟ್ ಆಫ್ ಅಪೀಲ್ ಕಡಿತಗೊಳಿಸಿದೆ. ನ್ಯಾಯಾಲಯದ ಆದೇಶದ ಪೂರ್ಣ ಪ್ರತಿಯು ನಮಗೆ ಲಭ್ಯವಾಗಬೇಕಿದೆ. ಕೋರ್ಟ್‌ನಲ್ಲಿ ಕತಾರ್‌ನಲ್ಲಿರುವ ಭಾರತದ ರಾಯಭಾರಿಗಳು ಸೇರಿ ಹಲವು ಅಧಿಕಾರಿಗಳು ಉಪಸ್ಥಿತರಿದ್ದಾರೆ. ಅವರು ಕೋರ್ಟ್‌ನ ಆದೇಶದ ಸಂಪೂರ್ಣ ಮಾಹಿತಿಯನ್ನು ನಮಗೆ ನೀಡಲಿದ್ದಾರೆ. ನಾವು ಮುಂದೆಯೂ ನೌಕಾಪಡೆ ಮಾಜಿ ಅಧಿಕಾರಿಗಳಿಗೆ ರಾಜತಾಂತ್ರಿಕ ಹಾಗೂ ಕಾನೂನು ನೆರವು ನೀಡಲಾಗುವುದು” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾಹಿತಿ ನೀಡಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ ಕತಾರ್ ನ್ಯಾಯಾಲಯವು ಎಂಟು ಮಾಜಿ ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಇದಾದ ಕೂಡಲೇ ಭಾರತ ಸರ್ಕಾರವು ಅಧಿಕಾರಿಗಳ ನೆರವಿಗೆ ಧಾವಿಸಿತ್ತು. ಅಲ್ಲದೆ, ಭಾರತವು ಕತಾರ್‌ಗೆ ಅಧಿಕಾರಿಗಳಿಗೆ ರಾಯಭಾರ ಸಂಪರ್ಕ ಕೊಡಿ ಎಂದು ಮನವಿ ಮಾಡಿತ್ತು. ಅದಕ್ಕೆ ಕತಾರ್ ಒಪ್ಪಿತ್ತು. ಈಗ ಶಿಕ್ಷೆಯ ಪ್ರಮಾಣವೂ ಕಡಿಮೆಯಾಗಿದೆ. ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿರಬಹುದು ಎಂದು ಹೇಳಲಾಗುತ್ತಿದೆ.
#BreakingNews | #Qatar court commutes death sentence 8 Indian ex-Navy personnel
— DD News (@DDNewslive) December 28, 2023
8 ex-Navy personnel were arrested in connection with an alleged case of espionage. pic.twitter.com/wGJLg4RSe2
ಏನಿದು ಪ್ರಕರಣ?
ಭಾರತ ನೌಕಾಪಡೆಯ ಮಾಜಿ ಅಧಿಕಾರಿಗಳು ಕತಾರ್‌ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈಗ ಶಿಕ್ಷೆಗೆ ಗುರಿಯಾಗಿರುವ ಎಂಟೂ ಅಧಿಕಾರಿಗಳನ್ನು 2022ರ ಆಗಸ್ಟ್‌ನಲ್ಲಿ ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲಾಗಿತ್ತು. ಅವರ ವಿರುದ್ಧ ಬೇಹುಗಾರಿಕೆ ಮತ್ತು ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಯ ಆರೋಪ ಹೊರಿಸಲಾಗಿತ್ತು. ಕತಾರ್‌ನ ರಹಸ್ಯ ನೌಕಾ ಯೋಜನೆಗೆ ಸಂಬಂಧಿಸಿದಂತೆ ಬೇಹುಗಾರಿಕೆ ಮಾಡುತ್ತಿದ್ದರು ಎಂದು ಕೆಲವು ವರದಿಗಳು ತಿಳಿಸಿವೆ. ಇಸ್ರೇಲ್‌ಗಾಗಿ ಕತಾರ್‌ನ ಸುಧಾರಿತ ಜಲಾಂತರ್ಗಾಮಿ ನೌಕೆಗಳ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಎಂಬ ಆರೋಪವಿದೆ.
ಇದನ್ನೂ ಓದಿ: ನೌಕಾಪಡೆ ಅಧಿಕಾರಿಗಳಿಗೆ ಗಲ್ಲು; ಭಾರತದ ಮನವಿಗೆ ಒಪ್ಪಿದ ಕತಾರ್, ಕಾನೂನು ಹೋರಾಟಕ್ಕೆ ಮುನ್ನಡೆ
ನೌಕಾಪಡೆಯಲ್ಲಿ ಇವರು ಏನಾಗಿದ್ದರು?
ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಟ್, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಾಕಲಾ, ಕಮಾಂಡರ್ ಸಂಜೀವ್ ಗುಪ್ತಾ ಮತ್ತು ನಾವಿಕ ರಾಗೇಶ್ ಗೋಪಕುಮಾರ್ ಶಿಕ್ಷೆಗೊಳಗಾದ ನೌಕಾ ಪಡೆಯ ಮಾಜಿ ಅಧಿಕಾರಿಗಳಾಗಿದ್ದಾರೆ. ಅವರು ಖಾಸಗಿ ಸಂಸ್ಥೆಯಾದ ದಾಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಮತ್ತು ಕನ್ಸಲ್ಟೆನ್ಸಿ ಸರ್ವಿಸಸ್‌ಗಾಗಿ ಕೆಲಸ ಮಾಡುತ್ತಿದ್ದರು ಮತ್ತು ಇದು ಕತಾರ್‌ನ ಸಶಸ್ತ್ರ ಪಡೆಗಳಿಗೆ ತರಬೇತಿ ಮತ್ತು ಇತರ ಸೇವೆಗಳನ್ನು ಒದಗಿಸುವ ಕಂಪನಿಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ