Site icon Vistara News

ಬಿಹಾರದಲ್ಲಿ ಒಂದೇ ಏಟಿಗೆ ಚಿರಾಗ್‌ ಪಾಸ್ವಾನ್‌ ಪಕ್ಷ ತೊರೆದ 22 ನಾಯಕರು; ‘ಇಂಡಿಯಾ’ ಸೇರ್ಪಡೆ?

Chirag Paswan

Bihar: 22 leaders from Chirag Paswan's LJP resign ahead of PM Narendra Modi's rally

ಪಟನಾ: ಬಿಹಾರದಲ್ಲಿ ಲೋಕಸಭೆ ಚುನಾವಣೆಗೆ‌ (Lok Sabha Election 2024) ಮುನ್ನವೇ ಎನ್‌ಡಿಎ ಮೈತ್ರಿಕೂಟದ ಲೋಕ ಜನಶಕ್ತಿ ಪಕ್ಷಕ್ಕೆ (ರಾಮ್‌ ವಿಲಾಸ್‌ ಪಾಸ್ವಾನ್) ಭಾರಿ ಹಿನ್ನಡೆಯಾಗಿದೆ. ಸುಮಾರು 22 ನಾಯಕರು ಚಿರಾಗ್‌ ಪಾಸ್ವಾನ್‌ (Chirag Paswan) ನೇತೃತ್ವದ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಇವರೆಲ್ಲರೂ ಇಂಡಿಯಾ ಒಕ್ಕೂಟವನ್ನು (India Bloc) ಸೇರಲಿದ್ದಾರೆ ಎಂದು ತಿಳಿದುಬಂದಿದೆ. ಅದರಲ್ಲೂ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬಿಹಾರದಲ್ಲಿ (Bihar) ರ‍್ಯಾಲಿ ನಡೆಸುವ ಕೆಲವೇ ಗಂಟೆಗಳ ಮೊದಲು ಇಂತಹದ್ದೊಂದು ಬೆಳವಣಿಗೆ ನಡೆದಿದೆ.

ಎಲ್‌ಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿದ್ದ ರವೀಂದ್ರ ಸಿಂಗ್‌ ಅವರು ರಾಜೀನಾಮೆ ನೀಡಿದ ಬಳಿಕ ಹಲವು ಆರೋಪ ಮಾಡಿದ್ದಾರೆ. “ಚಿರಾಗ್‌ ಪಾಸ್ವಾನ್‌ ಅವರು ಲೋಕಸಭೆ ಚುನಾವಣೆಯ ಟಿಕೆಟ್‌ಗಳನ್ನು ಮಾರಿಕೊಳ್ಳುತ್ತಿದ್ದಾರೆ. ಅವರು ಬಿಹಾರದ ಜನರ ಭಾವನೆಗಳ ಜತೆ ಆಟವಾಡುತ್ತಿದ್ದಾರೆ. ನಮ್ಮ ಪರಿಶ್ರಮದ ಫಲವಾಗಿಯೇ ಚಿರಾಗ್‌ ಪಾಸ್ವಾನ್‌ ಅವರು ಮೈತ್ರಿಕೂಟದ ಒಪ್ಪಂದದಂತೆ ಐದು ಕ್ಷೇತ್ರಗಳನ್ನು ಪಡೆದಿದ್ದಾರೆ. ಆದರೆ, ಅವರೀಗ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಬಿಹಾರದ ಜನತೆಯು ಅವರಿಗೆ ಸರಿಯಾದ ಪಾಠ ಕಲಿಸಲಿದ್ದಾರೆ” ಎಂಬುದಾಗಿ ಆರೋಪಿಸಿದ್ದಾರೆ.

ಎನ್‌ಡಿಎ ಮೈತ್ರಿಕೂಟದ ಸೀಟು ಹಂಚಿಕೆಯಂತೆ ಐದು ಕ್ಷೇತ್ರಗಳಲ್ಲಿ ಎಲ್‌ಜೆಪಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂಬುದಾಗಿ ಮಾರ್ಚ್‌ 30ರಂದು ಚಿರಾಗ್‌ ಪಾಸ್ವಾನ್‌ ಘೋಷಣೆ ಮಾಡಿದ್ದಾರೆ. ಈಗಾಗಲೇ ಜಮುಯಿ ಕ್ಷೇತ್ರದಲ್ಲಿ ಚಿರಾಗ್‌ ಪಾಸ್ವಾನ್‌ ಬಾವ ಅರುಣ್‌ ಭಾರ್ತಿ ನಾಮಪತ್ರ ಸಲ್ಲಿಸಿದ್ದಾರೆ. ಹಾಜಿಪುರದಲ್ಲಿ ಚಿರಾಗ್‌ ಪಾಸ್ವಾನ್‌ ಕಣಕ್ಕಿಳಿದಿದ್ದಾರೆ. ಸಮಷ್ಟಿಪುರದಲ್ಲಿ ಶಾಂಭವಿ ಚೌಧರಿ, ಖಗಾರಿಯಾದಲ್ಲಿ ಮನೀಶ್‌ ವರ್ಮಾ ಹಾಗೂ ವೈಶಾಲಿಯಲ್ಲಿ ಹಾಲಿ ಸಂಸದೆ ವೀಣಾ ದೇವಿ ಅವರಿಗೆ ಟಿಕೆಟ್‌ ನೀಡಲಾಗಿದೆ.

ಇದನ್ನೂ ಓದಿ: Gourav Vallabh:‌ ಸನಾತನ ಧರ್ಮಕ್ಕೆ ಕಾಂಗ್ರೆಸ್‌ ವಿರೋಧ; ಪಕ್ಷ ತೊರೆದ ನಾಯಕ ಗೌರವ್ ವಲ್ಲಭ್!

ಟಿಕೆಟ್‌ ಹಂಚಿಕೆಯ ಬಳಿಕವೇ ಭಿನ್ನಮತ ಉಂಟಾಗಿದ್ದು, ಇದರ ಭಾಗವಾಗಿ 22 ನಾಯಕರು ಎಲ್‌ಜೆಪಿಯನ್ನು ತೊರೆದಿದ್ದಾರೆ. ಇದು ಲೋಕಸಭೆ ಚುನಾವಣೆಯಲ್ಲಿ ಎಲ್‌ಜೆಪಿ ಮಾತ್ರವಲ್ಲ ಎನ್‌ಡಿಎ ಒಕ್ಕೂಟಕ್ಕೆ ಪೆಟ್ಟು ಬಿದ್ದಂತಾಗಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ, ಕೆಲವೇ ಗಂಟೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದಲ್ಲಿ ರ‍್ಯಾಲಿ ಕೈಗೊಳ್ಳಲಿದ್ದಾರೆ. ಇದಕ್ಕೂ ಮೊದಲೇ 22 ನಾಯಕರು ಎಲ್‌ಜೆಪಿ ತೊರೆದಿದ್ದಾರೆ. ಇವರು ಇಂಡಿಯಾ ಒಕ್ಕೂಟ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಹಾರದಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಮಿತ್ರ ಪಕ್ಷ ಜೆಡಿಯು 16 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಎಲ್‌ಜೆಪಿ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version