ನವ ದೆಹಲಿ: ಬಿಜೆಪಿ ಸಖ್ಯ ತೊರೆದು ಆರ್‌ಜೆಡಿಯೊಂದಿಗೆ ಸೇರಿ ಸರ್ಕಾರ ರಚಿಸಿರುವ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು, ವಿಶೇಷವಾದ ನಿರ್ಧಾರವನ್ನು ಕೈಗೊಂಡಿದ್ದಾರೆ. ಇನ್ನು ಮುಂದೆ ಬಿಹಾರದಲ್ಲಿ ಯಾವುದೇ ಪ್ರಕರಣವನ್ನು ಕೇಂದ್ರ ತನಿಖಾ ದಳ ನೇರವಾಗಿ ತನಿಖೆ ಮಾಡುವಂತಿಲ್ಲ. ಬದಲಿಗೆ ರಾಜ್ಯ ಸರ್ಕಾರವು ಒಪ್ಪಿಗೆ ನೀಡಿದರೆ ಮಾತ್ರವೇ ಸಿಬಿಐ(CBI)ಗೆ ತನಿಖೆ ಮಾಡಲು ಅಧಿಕಾರ ದೊರೆಯಲಿದೆ.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷವು ರಾಜಕೀಯ ಕಾರಣಕ್ಕಾಗಿ ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಆಡಳಿತಾರೂಢ ಆರ್‌ಜೆಡಿ ಮತ್ತು ಜೆಡಿಯು ನೇತೃತ್ವದ ಕೂಟ ಸರ್ಕಾರವು, ಸಿಬಿಐಗೆ ನೀಡಿದ್ದ ಅನುಮತಿಯನ್ನು ಹಿಂದಕ್ಕೆ ಪಡೆದುಕೊಂಡಿವೆ. ಆ ಮೂಲಕ ಬಿಜೆಪಿಗೆ ಮತ್ತೊಂದು ಟಾಂಗ್ ನೀಡಿದೆ.
ರಾಜ್ಯ ಸರ್ಕಾರ ವ್ಯಾಪ್ತಿಯ ಯಾವುದೆ ಪ್ರಕರಣದ ತನಿಖೆಯನ್ನು ಕೈಗೊಳ್ಳಲು ಆಯಾ ರಾಜ್ಯ ಸರ್ಕಾರಗಳ ಅನುಮತಿ ಸಿಬಿಐಗೆ ಬೇಕಾಗುತ್ತದೆ. 1946ರ ದಿಲ್ಲಿ ಸ್ಪೇಷಲ್ ಪೊಲೀಸ್ ಎಸ್ಟಾಬ್ಲಿಷ್ಮೆಂಟ್(ಡಿಎಸ್‌ಪಿಇ) ಕಾಯಿದೆಯ ಸೆಕ್ಷನ್ 6 ಪ್ರಕಾರ, ರಾಜ್ಯಗಳ ವ್ಯಾಪ್ತಿಯಲ್ಲಿ ನೇರವಾಗಿ ಸಿಬಿಐ ತನಿಖೆ ಕೈಗೊಳ್ಳಲು ಬರುವುದಿಲ್ಲ. ಅದಕ್ಕೆ ಸಂಬಂಧಿಸಿದ ರಾಜ್ಯವು ಒಪ್ಪಿಗೆಯನ್ನು ನೀಡಬೇಕಾಗುತ್ತದೆ. ಈಗ ಬಿಹಾರ ವ್ಯಾಪ್ತಿಯ ಯಾವುದೇ ಪ್ರಕರಣವನ್ನು ಸಿಬಿಐ ನೇರವಾಗಿ ತನಿಖೆ ಮಾಡಲು ಸಾಧ್ಯವಾಗುವುದಿಲ್ಲ.
9 ರಾಜ್ಯಗಳು ಹಿಂಪಡೆಯಲು ಒಪ್ಪಿಗೆ
ಸಿಬಿಐ ತನಿಖೆಗೆ ಅನುಮತಿ ನಿರಾಕರಿಸಿದ ಪಟ್ಟಿಗೆ ಈಗ ಒಂಭತ್ತು ರಾಜ್ಯಗಳು ಸೇರಿವೆ. ಈ ಮೊದಲು, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ರಾಜಸ್ಥಾನ, ಪಂಜಾಬ್, ಮೇಘಾಲಯ ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ಸಿಬಿಐ ತನಿಖೆ ಕೈಗೊಳ್ಳಲು ನೀಡಲಾಗಿದ್ದ ಅನುಮತಿಯನ್ನು ಹಿಂಪಡೆದುಕೊಂಡಿವೆ. ಈ ಪಟ್ಟಿಗೆ ಈಗ ಬಿಹಾರ ಕೂಡ ಸೇರ್ಪಡೆಯಾಗಿದೆ.
ಬಿಜೆಪಿಯು ತನ್ನ ರಾಜಕೀಯ ಎದುರಾಳಿಗಳನ್ನು ಹಣಿಯುವುದಕ್ಕಾಗಿ ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಕಾರಣಕ್ಕಾಗಿಯೇ ಬಿಹಾರ ಮೈತ್ರಿಕೂಟ ಸರ್ಕಾರವು ಸಿಬಿಐಗೆ ನೀಡಿದ್ದ ಅನುಮತಿಯನ್ನು ಹಿಂದಕ್ಕೆ ಪಡೆದುಕೊಂಡಿದೆ ಎಂದು ಆರ್‌ಜೆಡಿ ನಾಯಕ ಶಿವಾನಂದ ತಿವಾರಿ ಅವರು ತಿಳಿಸಿದ್ದಾರೆ.
ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ ಕೇಂದ್ರ ಸಂಸ್ಥೆಗಳು, ಕೇಂದ್ರ ತನಿಖಾ ಸಂಸ್ಥೆಗಳು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ. ಎಲ್ಲ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.