Site icon Vistara News

Police Station: ಪೊಲೀಸ್‌ ಸ್ಟೇಷನ್‌ನಲ್ಲೇ ಪತಿ-ಪತ್ನಿ ಸಾವು; ಠಾಣೆಯನ್ನೇ ಸುಟ್ಟರು ಜನ

Police Station

Bihar man, his minor wife die in custody, mob sets police station ablaze

ಪಟನಾ: ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ (Araria District) ಪೊಲೀಸ್‌ ಕಸ್ಟಡಿಯಲ್ಲಿಯೇ ಗಂಡ ಹಾಗೂ ಹೆಂಡತಿ ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸ್‌ ಠಾಣೆಗೇ (Police Station) ಬೆಂಕಿ ಹಚ್ಚಿದ್ದಾರೆ. ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿ, ಕಲ್ಲುತೂರಾಟ (Stone Pelting) ನಡೆಸಿದ ಕಾರಣ ಪೊಲೀಸರು ಸ್ವಯಂ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಿಂದಾಗಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಹೆಚ್ಚಿನ ಪೊಲೀಸರನ್ನೂ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ?

ವ್ಯಕ್ತಿಯೊಬ್ಬರು ತಮ್ಮ ಹೆಂಡತಿ ತೀರಿಕೊಂಡ ಬಳಿಕ 14 ವರ್ಷದ ನಾದಿನಿಯನ್ನು ಮದುವೆಯಾಗಿದ್ದರು. ಹೆಂಡತಿ ತೀರಿಕೊಂಡ ಬಳಿಕ ನಾದಿನಿಯನ್ನು ವ್ಯಕ್ತಿಯು ಮನೆಗೇ ಕರೆದುಕೊಂಡು ಬಂದಿದ್ದ. ಈ ವಿಷಯ ತಿಳಿದ ಪೊಲೀಸರು ಮೇ 16ರಂದು ವ್ಯಕ್ತಿ ಹಾಗೂ 14 ವರ್ಷದ ಬಾಲಕಿಯನ್ನು ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿದ್ದರು. ವ್ಯಕ್ತಿಯ ವಿರುದ್ಧ ಎಫ್‌ಐಆರ್‌ ಕೂಡ ದಾಖಲಿಸಿದ್ದರು. ವಿಚಾರಣೆಗಾಗಿ ಪೊಲೀಸರು ಇಬ್ಬರನ್ನೂ ಕರೆದೊಯ್ದಿದ್ದರು. ಆದರೆ, ಪೊಲೀಸ್‌ ಠಾಣೆಯಲ್ಲಿಯೇ ವ್ಯಕ್ತಿ ಹಾಗೂ ಬಾಲಕಿಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮಸ್ಥರ ಆರೋಪವೇನು?

ವ್ಯಕ್ತಿ ಹಾಗೂ ಬಾಲಕಿಯನ್ನು ಪೊಲೀಸರೇ ಕೊಂದಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಇಬ್ಬರನ್ನೂ ಪೊಲೀಸ್‌ ಠಾಣೆಗೆ ಕರೆದೊಯ್ದ ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಆಕ್ರೋಶದಲ್ಲಿ ಅವರು ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ಮಾಡಿದ್ದಾರೆ. ಉದ್ರಿಕ್ತ ಗ್ರಾಮಸ್ಥರ ದಾಳಿಯಲ್ಲಿ ಐದಾರು ಪೊಲೀಸರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಪೊಲೀಸ್‌ ಠಾಣೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ವ್ಯಕ್ತಿಯು ಲಾಕಪ್‌ ಬಾಗಿಲು ಹತ್ತಿ, ಬಟ್ಟೆಯಿಂದ ನೇಣು ಬಿಗಿದುಕೊಂಡಿದ್ದಾನೆ. ಪೊಲೀಸರು ಸ್ವಯಂ ರಕ್ಷಣೆಗಾಗಿ ಗುಂಡು ಹಾರಿಸಿದ ಕಾರಣ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಆದರೆ, ಹಿರಿಯ ಪೊಲೀಸ್‌ ಅಧಿಕಾರಿಗಳು ಘಟನೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಇದನ್ನೂ ಓದಿ: Theft Case : ಪೊಲೀಸ್‌ ಬಸ್ಸನ್ನೇ ಕದಿಯಲು ಬಂದ ಕುಡುಕ; ಪೇಡ ಕೇಳಿದವ 15 ಕೆಜಿ ತುಪ್ಪ ಎಗರಿಸಿದ

Exit mobile version