Site icon Vistara News

Bihar Politics: ಬಿಹಾರದ ರಾಜಕೀಯ ಅನಿಶ್ಚಿತತೆ ನಡುವೆ ಬಹು ಮುಖ್ಯ ನಿರ್ಧಾರ ಪ್ರಕಟಿಸಿದ ಕಾಂಗ್ರೆಸ್‌

bhupesh

bhupesh

ನವದೆಹಲಿ: ಲೋಕಸಭೆ ಚುನಾವಣೆ 2024(Lok Sabha Election 2024)ರ ಗಾಳಿ ಈಗಾಗಲೇ ಬೀಸಲು ಆರಂಭಿಸಿದ್ದು, ಬಿಹಾರದಲ್ಲಿ ಎನ್‌ಡಿಎ (NDA) ಕಡೆ ಹೆಜ್ಜೆ ಹಾಕಲು ಬಿಹಾರ ಸಿಎಂ ನಿತೀಶ್‌ ಕುಮಾರ್‌ (Bihar CM Nitish Kumar) ಮುಂದಾಗಿದ್ದಾರೆ. ಈ ಮಧ್ಯೆ ಕಾಂಗ್ರೆಸ್‌ ಅತೀ ಮುಖ್ಯ ನಿರ್ಧಾರ ತೆಗೆದುಕೊಂಡಿದ್ದು, ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel) ಅವರಿಗೆ ಬಿಹಾರದ ಜವಾಬ್ದಾರಿ ವಹಿಸಲಾಗಿದೆ. ಕಾಂಗ್ರೆಸ್‌ನ ಭಾರತ್ ಜೋಡೋ ನ್ಯಾಯ್ ಯಾತ್ರೆ (Bharat Jodo Nyay Yatra) ಮತ್ತು ಇತರ ಪಕ್ಷದ ಚಟುವಟಿಕೆಗಳನ್ನು ಸಂಘಟಿಸಲು ಹಿರಿಯ ವೀಕ್ಷಕರಾಗಿ ಅವರನ್ನು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನೇಮಿಸಿದ್ದಾರೆ (Bihar Politics).

“ಬಿಹಾರದಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆ ಮತ್ತು ಇತರ ಪಕ್ಷದ ಚಟುವಟಿಕೆಗಳನ್ನು ಸಂಘಟಿಸಲು ಭೂಪೇಶ್ ಬಘೇಲ್ ಅವರನ್ನು ಹಿರಿಯ ವೀಕ್ಷಕರನ್ನಾಗಿ ನೇಮಿಸಲಾಗಿದೆ” ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಸೋಮವಾರ (ಜನವರಿ 29) ಬಿಹಾರವನ್ನು ಪ್ರವೇಶಿಸಲಿದೆ.

ನಾಳೆ ನಿತೀಶ್‌ ಕುಮಾರ್‌ ಎನ್‌ಡಿಎಗೆ ಸೇರ್ಪಡೆ ?

ನಿತೀಶ್ ಕುಮಾರ್‌ ಬಿಜೆಪಿ ಬೆಂಬಲದೊಂದಿಗೆ ಒಂಬತ್ತನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನಾಳೆ ಮತ್ತೆ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ನಿತೀಶ್ ಕುಮಾರ್ ಅವರು ಮಹಾಘಟಬಂಧನ್ (ಮಹಾ ಮೈತ್ರಿಕೂಟ) ಮುರಿದು ಬಿಜೆಪಿಯೊಂದಿಗೆ ಮತ್ತೆ ಒಂದಾಗುತ್ತಾರೆ ಎಂಬ ಊಹಾಪೋಹಗಳ ಮೇಲೆ ಬಿಹಾರದಲ್ಲಿ ರಾಜಕೀಯ ಕೋಲಾಹಲ ನಡೆದಿದೆ. ವಾರಾಂತ್ಯದ ಶನಿವಾರ ಮತ್ತು ಭಾನುವಾರ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಕರೆದಿದೆ. ಬಿಜೆಪಿ ರಾಜ್ಯ ಅಧ್ಯಕ್ಷ ಸಾಮ್ರಾಟ್ ಚೌಧರಿ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಮತ್ತು ಕೇಂದ್ರ ಸಚಿವ ನಿತ್ಯಾನಂದ್ ರಾಯ್ ಅವರು ಪಾಟ್ನಾದಲ್ಲಿ ನಡೆಯುವ ಪಕ್ಷದ ಕೋರ್ ಕಮಿಟಿ ಸಭೆಗೆ ಆಗಮಿಸಿದ್ದಾರೆ.

ಆರ್‌ಜೆಡಿ ಸಭೆ

ಆರ್‌ಜೆಡಿಯಲ್ಲಿಯೂ ಬಿರುಸಿನ ಚಟುವಟಿಕೆ ಕಂಡು ಬಂದಿದೆ. ಆರ್‌ಜೆಡಿ ನಾಯಕ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ತಮ್ಮ ನಿವಾಸದಲ್ಲಿ ಪಕ್ಷದ ಆಪ್ತ ನಾಯಕರನ್ನು ಭೇಟಿಯಾಗಿದ್ದಾರೆ. ಒಂದು ವೇಳೆ ಜೆಡಿಯು ನಾಯಕ ನಿತೀಶ್‌ ಕುಮಾರ್‌ ಮೈತ್ರಿಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದರೆ ಅಧಿಕಾರ ಉಳಿಸಿಕೊಳ್ಳುವ ತಂತ್ರವನ್ನು ರೂಪಿಸಲು ಮುಂದಾಗಿದ್ದಾರೆ. ಇತ್ತ ಕಾಂಗ್ರೆಸ್‌ ಕೂಡ ಬಿಹಾರದಲ್ಲಿ ತಮ್ಮ ಶಾಸಕರ ಸಭೆಗಳನ್ನು ಕರೆದಿದೆ. ಆದರೆ ಸದ್ಯದ ರಾಜಕೀಯ ಬೆಳವಣಿಗೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಇದು ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯ ಸಿದ್ಧತೆಗಳ ಬಗ್ಗೆ ಚರ್ಚಿಸಲು ಕರೆದ ಸಭೆ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: Bharat Jodo Nyay Yatra: ಟಿಎಂಸಿ ಜತೆಗಿನ ಗೊಂದಲದ ನಡುವೆ ಬಂಗಾಳ ತಲುಪಿದ ರಾಹುಲ್‌ ಗಾಂಧಿ

ನಿನ್ನೆ ರಾಜಭವನದಲ್ಲಿ ನಡೆದ ಗಣರಾಜ್ಯೋತ್ಸವದ ಚಹಾ ಕೂಟದಲ್ಲಿ ನಿತೀಶ್ ಕುಮಾರ್ ಅವರು ಏಕಾಂಗಿಯಾಗಿ ಕಾಣಿಸಿಕೊಂಡಿದ್ದರು. ಇದು ಜನತಾ ದಳ (ಯುನೈಟೆಡ್) ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಡುವಿನ ಭಿನ್ನಾಭಿಪ್ರಾಯವನ್ನು ಸೂಚಿಸಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version