ಪಟನಾ: ಒಂದಲ್ಲ ಒಂದು ರಾಜ್ಯದಲ್ಲಿ ಪಕ್ಷಗಳ ಒಡಕು, ಸರ್ಕಾರ ಪತನ ಸದಾ ನಡೆಯುತ್ತಲೇ ಇರುವಂತಾಗಿದೆ. ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಮುಗಿದು, ಅಲ್ಲೊಂದು ಹೊಸ ಸರ್ಕಾರ ರಚನೆಗೊಂಡ ಬೆನ್ನಲ್ಲೇ ಈಗ ಬಿಹಾರದಲ್ಲಿ ರಾಜಕೀಯ ಪ್ರಹಸನ ಪ್ರಾರಂಭಗೊಂಡಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತೊಮ್ಮೆ ಬಿಜೆಪಿ ಮೈತ್ರಿ ತೊರೆದಿದ್ದಾರೆ. ಬಿಜೆಪಿ ನಮ್ಮೊಂದಿಗೆ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ, ಹೆಜ್ಜೆಹೆಜ್ಜೆಗೂ ನಮ್ಮ ಪಕ್ಷವನ್ನು, ಪಕ್ಷದ ಜನಪ್ರತಿನಿಧಿಗಳನ್ನು ಅವಮಾನಗೊಳಿಸಿಸುತ್ತಿದೆ ಎಂಬುದು ಜೆಡಿಯು ಆರೋಪ. ಇಂದು (ಮಂಗಳವಾರ) ಸಂಜೆ 4 ಗಂಟೆ ಹೊತ್ತಿಗೆ ನಿತೀಶ್ ಕುಮಾರ್ ಅವರು ರಾಜ್ಯಪಾಲ ಫಗು ಚೌಹಾಣ್ರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ.
ನಿತೀಶ್ ಮುನಿಸು ಇದೇ ಮೊದಲಲ್ಲ!
ಜೆಡಿಯು 2003ರ ಅಕ್ಟೋಬರ್ 30ರಂದು ಅಧಿಕೃತವಾಗಿ ರಚನೆಗೊಂಡ ನಂತರ ಬಿಜೆಪಿಯ ಜತೆಯಾಗಿಯೇ ಸಾಗಿಬರುತ್ತಿತ್ತು. ಆದರೆ 2014ರ ಲೋಕಸಭೆ ಚುನಾವಣೆಗೂ ಮೊದಲು, ಮೋದಿಯನ್ನು ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿದಾಗ ನಿತೀಶ್ ಕುಮಾರ್ ಮುನಿಸಿಕೊಂಡು ಬಿಜೆಪಿ ಸಖ್ಯ ತೊರೆದಿದ್ದರು. ಆ ಸಂದರ್ಭದಲ್ಲಿ ಎನ್ಡಿಎ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗುವ ಒಳ ಆಸೆ ನಿತೀಶ್ ಕುಮಾರ್ಗಿತ್ತು. ಆದರೆ ಬಿಜೆಪಿ ಏಕಾಏಕಿ ಯಾರೊಂದಿಗೂ ಚರ್ಚಿಸದೆ ಆ ಸ್ಥಾನಕ್ಕೆ ನರೇಂದ್ರ ಮೋದಿ ಹೆಸರನ್ನು ಘೋಷಿಸಿದ್ದು ನಿತೀಶ್‌ಗೆ ಕಸಿವಿಸಿ ಉಂಟು ಮಾಡಿತ್ತು. ಹೀಗಾಗಿ 2013ರ ಜೂನ್ 16ರಂದು ಜೆಡಿಯು-ಬಿಜೆಪಿ ಬೇರ್ಪಟ್ಟವು. ಅದಾದ ಬಳಿಕ ಬಿಹಾರದಲ್ಲಿ ಆರ್ಜೆಡಿ-ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಈ ಕೂಟಕ್ಕೆ ಮಹಾಘಟ್ಬಂಧನ್ ಎಂಬ ಹೆಸರನ್ನು ಕೊಡಲಾಯಿತು. 2015ರ ವಿಧಾನಸಭೆ ಚುನಾವಣೆಯಲ್ಲಿ ಈ ಮಹಾ ಘಟ್ಬಂಧನ್ ಭರ್ಜರಿ ಗೆಲುವನ್ನೂ ಸಾಧಿಸಿತು. ಆದರೆ ಅದಾದ ಎರಡೇ ವರ್ಷದಲ್ಲಿ, ಅಂದರೆ 2017ರಲ್ಲಿ ಜೆಡಿಯು ಮತ್ತೆ ಮಗ್ಗಲು ಹೊರಳಿಸಿ, ತನ್ನ ಹಳೇ ಗೆಳೆಯ ಬಿಜೆಪಿಯ ಹೆಗಲ ಮೇಲೆ ಕೈಹಾಕಿತ್ತು.
ಮತ್ತದೇ ಇತಿಹಾಸ!
ಐದು ವರ್ಷಗಳ ನಂತರ ಜೆಡಿಯು ಮತ್ತೆ ಬಿಜೆಪಿ ಮೈತ್ರಿ ತೊರೆದಿದೆ. ಮತ್ತೆ ಲೋಕಸಭೆ ಚುನಾವಣೆಯೂ ಹತ್ತಿರ ಬರುತ್ತಿದೆ. ಜೆಡಿಯು ಈಗ ಮೈತ್ರಿ ಕಳೆದುಕೊಳ್ಳಲು ಹೇಳುತ್ತಿರುವ ಕಾರಣ, ‘ಬಿಜೆಪಿ ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ, ಹೊರಬೀಳದೆ ದಾರಿಯಿಲ್ಲ’ ಎಂದು. ಜಾತಿ ಜನಗಣತಿ ನಡೆಸಬೇಕು ಎಂಬ ನಿತೀಶ್ ಕುಮಾರ್ ಬೇಡಿಕೆಗೂ ಕೇಂದ್ರ ಸರ್ಕಾರ ಮನ್ನಣೆ ನೀಡಿರಲಿಲ್ಲ. ಇದೂ ಕೂಡ ಜೆಡಿಯು ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ರಾಜಕೀಯ ವಿಶ್ಲೇಷಕರು, ಬಿಹಾರದ ರಾಜಕೀಯ ಬೆಳವಣಿಗೆಗಳಿಗೆ ಬೇರೆಯದ್ದೇ ಆಯಾಮ ಕೊಟ್ಟಿದ್ದಾರೆ.
ನಿತೀಶ್ ಕುಮಾರ್ಗೆ ಮತ್ತೊಮ್ಮೆ ಪ್ರಧಾನಮಂತ್ರಿ ಹುದ್ದೆ ಅಭ್ಯರ್ಥಿಯಾಗುವ ಆಸೆ ಚಿಗುರಿದೆ. ಎರಡು ಅವಧಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿಯೇ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಎನ್ಡಿಎ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಎಂದು ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಸ್ಪಷ್ಟವಾಗಿ ಹೇಳಿದ್ದಾರೆ. ಬರೀ ಅವರಷ್ಟೇ ಅಲ್ಲ, ಬಿಜೆಪಿಯ ಬಹುತೇಕರು ಇದನ್ನೇ ಪುನರುಚ್ಚರಿಸುತ್ತಿದ್ದಾರೆ. ಹೀಗಾಗಿ ಪ್ರತಿಪಕ್ಷಗಳ ಒಕ್ಕೂಟದಿಂದಾದರೂ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂಬ ಆಸೆ, ಮಹದುದ್ದೇಶ ಇಟ್ಟುಕೊಂಡೇ ನಿತೀಶ್ ಕುಮಾರ್ ಈಗ ಕಮಲದ ಸಖ್ಯ ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಲೋಕಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದ್ದು, ಅಷ್ಟರೊಳಗೆ ಎಲ್ಲ ವಿಪಕ್ಷಗಳ ನಡುವೆ ಒಗ್ಗಟ್ಟಿನ ಸೇತುವೆಯಾಗಿ ನಿಂತು, ಎನ್ಡಿಎ ಒಕ್ಕೂಟದ ಅಭ್ಯರ್ಥಿಗೆ ಪ್ರಬಲ ಸ್ಪರ್ಧೆಯೊಡ್ಡುವ ಮಹತ್ವಾಕಾಂಕ್ಷೆ ನಿತೀಶ್ ಕುಮಾರ್ ಅವರದ್ದಾಗಿದೆ.
ಇದನ್ನೂ ಓದಿ: Bihar Politics | ಬಿಹಾರ ಮುಖ್ಯಮಂತ್ರಿ ಹುದ್ದೆಗೆ ನಿತೀಶ್ ಕುಮಾರ್ ರಾಜೀನಾಮೆ; ಉರುಳಿ ಬಿತ್ತು ಮೈತ್ರಿ ಸರ್ಕಾರ